ADVERTISEMENT

ಎಸ್‌ಸಿ ಪಟ್ಟಿಯಲ್ಲಿ ಲಿಂಗಾಯತ ಬೇಡ ಜಂಗಮ: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಮೇ 2025, 11:41 IST
Last Updated 20 ಮೇ 2025, 11:41 IST
   

ವಿಜಯನಗರ(ಹೊಸಪೇಟೆ): ಒಳಮೀಸಲಾತಿ ಕಲ್ಪಿಸಲೆಂದು ನಡೆಯುತ್ತಿರುವ ಜಾತಿ ಸಮೀಕ್ಷೆಯ ಎಸ್‌ಸಿ ಪಟ್ಟಿಯಲ್ಲಿ ಲಿಂಗಾಯತ ಬೇಡ ಜಂಗಮ ಸಮುದಾಯವೂ ನುಸುಳುತ್ತಿರುವುದಕ್ಕೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮರ್ಪಣೆ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಕೊಡಲು ಸರ್ಕಾರ ಎಸ್‌ಸಿ ಸಮೀಕ್ಷೆ ನಡೆಸುತ್ತಿದೆ. ಒಳಮೀಸಲಾತಿಗೆ ನಾನೆಂದೂ ವಿರೋಧ ಮಾಡಿಲ್ಲ.‌ ಆದರೆ ಲಿಂಗಾಯತ ಸಮುದಾಯದಲ್ಲಿರುವ ಬೇಡ ಜಂಗಮರನ್ನು ನೀವು ಎಸ್‌ಸಿ ಪಟ್ಟಿಗೆ ಸೇರಿಸುತ್ತಿದ್ದೀರಿ. ನಾಲ್ಕು ಲಕ್ಷ ಜನ ಎಸ್‌ಸಿ ಪಟ್ಟಿಗೆ ಹೇಗೆ ಬಂದರು' ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಖರ್ಗೆ ಆಕ್ರೋಶ ಕಂಡ ಡಿಸಿಎಂ ಡಿಕೆ ಶಿವಕುಮಾರ್, ಓಡಿ ಬಂದು ಪಕ್ಕದಲ್ಲಿ ನಿಂತು ಅವರ ಮಾತು ಆಲಿಸಿದರು.

ADVERTISEMENT

ಮಾತು ಮುಂದುವರಿಸಿದ ಖರ್ಗೆ, 'ಲಿಂಗಾಯತರಲ್ಲಿನ ಬಡ ವರ್ಗದವರಿಗೆ ನಾವು ಅಗತ್ಯ ಬಿದ್ದರೆ ಪ್ರೋತ್ಸಾಹ ನೀಡೋಣ. ಆದರೆ ಬೇಡ ಜಂಗಮರು ತಾವು ಎಸ್ಸಿ ಎಂದು ತೋರಿಸುವುದು ತಪ್ಪು. ಸುಳ್ಳು ಜಾತಿ ಪತ್ರ ನೀಡುವವರನ್ನು ಒಳ ಹಾಕಬೇಕು. ಸರ್ಕಾರ ಇದರ ಬಗ್ಗೆ ಗಮನಹರಿಸಬೇಕು' ಎಂದರು.

'ಬೇಡ ಜಂಗಮರು ತಾವು ಎಸ್‌ಸಿ ಎಂದು ತೋರಿಸಿಕೊಳ್ಳುವುದು ಆಸ್ಪೃಶ್ಯ ಸಮುದಾಯಗಳ ವಿರೋಧಿ, ದಲಿತ ವಿರೋಧಿ ನಡೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.