ADVERTISEMENT

ಕಾವೇರಿ: ತಮಿಳುನಾಡು ಯೋಜನೆಗೆ ಆಕ್ಷೇಪ ಎತ್ತದ ರಾಜ್ಯ!

‘ಮೇಕೆದಾಟು; ಸ್ಟಾಲಿನ್‌ಗೆ ಮನವಿ ಮಾಡಿದ್ದು ಸರಿಯಲ್ಲ’

ಸಿದ್ದಯ್ಯ ಹಿರೇಮಠ
Published 5 ಜುಲೈ 2021, 21:01 IST
Last Updated 5 ಜುಲೈ 2021, 21:01 IST
ಕಾವೇರಿ ನದಿ
ಕಾವೇರಿ ನದಿ   

ನವದೆಹಲಿ: ಕಾವೇರಿಯ 45 ಟಿಎಂಸಿ ಅಡಿ ಹೆಚ್ಚುವರಿ ನೀರಿನ ಬಳಕೆಯ ಉದ್ದೇಶದೊಂದಿಗೆ ತಮಿಳುನಾಡು ಸರ್ಕಾರ ಆರಂಭಿಸಿರುವ ನದಿ ಜೋಡಣೆಯ ‘ಬೃಹತ್‌ ಯೋಜನೆ’ಗೆ ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸುವುದಕ್ಕೂ ರಾಜ್ಯ ಸರ್ಕಾರ ಮೀನ–ಮೇಷ ಎಣಿಸುತ್ತಿದೆ.

ಕಾವೇರಿ ಕಣಿವೆಯಲ್ಲಿ ಲಭ್ಯವಿರುವ ಹೆಚ್ಚುವರಿ ನೀರನ್ನು ಬರಪೀಡಿತ ಜಿಲ್ಲೆಗಳ ಜನರಿಗೆ ಕುಡಿಯಲು ಪೂರೈಸುವ ಸದುದ್ದೇಶದೊಂದಿಗೆ ರಾಜ್ಯ ಆರಂಭಿಸುವ ಪ್ರತಿ ಯೋಜನೆಗಳಿಗೆ ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪಣೆ ಸಲ್ಲಿಸುವುದನ್ನು ತಮಿಳುನಾಡು ರೂಢಿ ಮಾಡಿಕೊಂಡಿದೆ.

ಆದರೆ, ಕರ್ನಾಟಕ ಸರ್ಕಾರ ತನ್ನ ಪಾಲಿನ ನ್ಯಾಯಸಮ್ಮತ ನೀರನ್ನು ಪಡೆದುಕೊಳ್ಳಲು ಕಾನೂನು ಹೋರಾಟಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ADVERTISEMENT

ಕೇಂದ್ರ ಸರ್ಕಾರದ ಆರ್ಥಿಕ ನೆರವಿನೊಂದಿಗೆ ಕಾವೇರಿ ನದಿಯನ್ನು ವೆಲ್ಲಾರು, ವೈಗೈ ಮತ್ತು ಗುಂಡಾರು ನದಿಗಳೊಂದಿಗೆ ಜೋಡಿಸುವ ಮೊದಲ ಹಂತದ ಯೋಜನೆಗೆ ಕಳೆದ ಫೆಬ್ರುವರಿ 21ರಂದೇ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ವಿರಾಳಿಮಲೈ– ಕುಣ್ಣತ್ತೂರ್ ಬಳಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಆಗ ರಾಜ್ಯದ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಈ ಸಂಬಂಧ ದೆಹಲಿಯಲ್ಲಿ ಕಾನೂನು ತಂಡದ ಸಭೆ ನಡೆಸಿ, ತಮಿಳುನಾಡಿನ ಯೋಜನೆಗೆ ಅನುಮತಿ ನೀಡದಿರುವಂತೆ ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದರು. ಯೋಜನೆ ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸುವುದಾಗಿ ಹೇಳಿದ್ದರು.

ಆ ಹೇಳಿಕೆ ನೀಡಿದ ಕೆಲವೇ ದಿನಗಳ ಬಳಿಕ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ತಮಿಳುನಾಡು ಯೋಜನೆಗೆ ಚಾಲನೆ ನೀಡಿ ನಾಲ್ಕೂವರೆ ತಿಂಗಳು ಕಳೆದಿದ್ದರೂ ರಾಜ್ಯ ಸರ್ಕಾರದಿಂದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆಯಾಗಿಲ್ಲ.

ಜಲವಿವಾದ ಕಾನೂನು ತಜ್ಞರ ರಾಜ್ಯ ತಂಡವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವ ನಿಟ್ಟಿನಲ್ಲಿ ಆಕ್ಷೇಪಣಾ ಅರ್ಜಿ ಸಿದ್ಧಪಡಿಸಿ 15 ದಿನಗಳೇ ಕಳೆದಿದ್ದರೂ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಕೋವಿಡ್‌–19 ಸಂದಿಗ್ಧ ಸ್ಥಿತಿ ರಾಜ್ಯದಲ್ಲಿ ಗಂಭೀರ ಪರಿಣಾಮ ಉಂಟುಮಾಡಿದೆ ನಿಜ. ಆದರೆ, ಜಲ ಸಂಪನ್ಮೂಲ ಮತ್ತು ಕಾನೂನು ಸಚಿವಾಲಯಗಳು ಜಲವಿವಾದ ಕುರಿತು ಕಾನೂನು ಹೋರಾಟ ನಡೆಸುವ ನಿರ್ಧಾರ ಕೈಗೊಳ್ಳಲು ಯಾವುದೇ ಅಡ್ಡಿ ಇರಲಿಲ್ಲ ಎಂದು ರಾಜ್ಯ ಸರ್ಕಾರದ ಕಾನೂನು ವಿಭಾಗದ ಮೂಲಗಳು ‘ಪ್ರಜಾವಾಣಿ’ಗೆ ಹೇಳಿವೆ.

ಪತ್ರ ಬರೆದಿದ್ದೇ ತಪ್ಪು: ‘ಮೇಕೆದಾಟು ಯೋಜನೆಗೆ ಅಡ್ಡಿಪಡಿಸಬಾರದು ಎಂದು ಕೋರಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರಿಗೆ ಪತ್ರ ಬರೆದಿದ್ದೇ ತಪ್ಪು’ ಎಂಬ ಅಭಿಪ್ರಾಯ ಕಾನೂನು ತಂಡದಿಂದ ವ್ಯಕ್ತವಾಗಿದೆ.

ಮೇಕೆದಾಟು ಯೋಜನೆಗೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದೆ. ‘ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ಪ್ರಕರಣ ಬಗೆಹರಿಸಿಕೊಳ್ಳಿ’ ಎಂದು ನ್ಯಾಯಪೀಠ ಸಲಹೆಯನ್ನೂ ನೀಡಿಲ್ಲ. ಆದರೂ ಯಡಿಯೂರಪ್ಪ ಅವರು ಮನವಿ ಮಾಡಿಕೊಂಡಿರುವುದು ಸರಿಯಲ್ಲ ಎಂಬುದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.

ಕರ್ನಾಟಕವು ಕಾವೇರಿಯ ಹೆಚ್ಚುವರಿ ನೀರನ್ನು ಬಳಸಲು ಯೋಜನೆ ಕೈಗೆತ್ತಿಕೊಂಡರೆ, ತಮಿಳುನಾಡು ಸರ್ಕಾರ ನೇರವಾಗಿ ಸುಪ್ರೀಂ ಕೋರ್ಟ್‌ನಲ್ಲೇ ಆಕ್ಷೇಪಣೆ ಸಲ್ಲಿಸುತ್ತದೆ. ಅದನ್ನು ಗಂಭೀರವಾಗಿ ಪರಿಗಣಿಸಿ, ಕಾನೂನು ಹೋರಾಟಕ್ಕೆ ಮುಂದಾಗದ ರಾಜ್ಯ ಸರ್ಕಾರ, ತಮಿಳುನಾಡು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿರುವುದು ಒಂದು ರೀತಿಯಲ್ಲಿ ಶರಣಾಗತಿಯೇ ಆಗಿದೆ. ಅಲ್ಲದೆ, ಯಡಿಯೂರಪ್ಪ ಅವರು ಬರೆದ ಮನವಿ ಪತ್ರದಲ್ಲಿ ‘ನದಿ ಜೋಡಣೆ ಯೋಜನೆ’ಯ ಪ್ರಸ್ತಾವವೇ ಇಲ್ಲದಿರುವುದು ಆಶ್ಚರ್ಯಕರ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.

‘ಕೋಳಿ ಕೇಳಿ ಮಸಾಲೆ’
‘ನಾವು ನಮ್ಮ ನೀರನ್ನು ಬಳಸಿಕೊಳ್ಳುವ ಉದ್ದೇಶದೊಂದಿಗೆ ಮೇಕೆದಾಟು ಬಳಿ ನಮ್ಮ ನೆಲದಲ್ಲಿ ಸಮಾನಾಂತರ ಜಲಾಶಯ ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲು ತಮಿಳುನಾಡಿನ ಸಮ್ಮತಿಯನ್ನು ಕೋರುವುದರಲ್ಲಿ ಅರ್ಥವಿಲ್ಲ. ಅವರು ಈ ವಿಷಯದಲ್ಲಿ ನಮ್ಮ ಸಮ್ಮತಿಯನ್ನು ಎಂದೂ ಕೋರಿಲ್ಲ. ಒಂದು ರೀತಿಯಲ್ಲಿ ಇದು, ‘ಕೋಳಿ ಕೇಳಿ ಮಸಾಲೆ ಅರೆದಂತೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಕಾನೂನು ತಜ್ಞರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.