ADVERTISEMENT

ವಿದ್ಯುತ್ ಅವಘಡ: ಮೃತ ಅಭಿಮಾನಿಗಳ ಕುಟುಂಬಗಳಿಗೆ ತಲಾ ₹5 ಲಕ್ಷ ನೀಡಿದ ನಟ ಯಶ್

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 14:18 IST
Last Updated 17 ಜನವರಿ 2024, 14:18 IST
ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟವರ ಕುಟುಂಬಕ್ಕೆ ನಟ ಯಶ್ ಆಪ್ತರು ಬುಧವಾರ ಚೆಕ್‍ ಹಸ್ತಾಂತರಿಸಿದರು
ಲಕ್ಷ್ಮೇಶ್ವರ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟವರ ಕುಟುಂಬಕ್ಕೆ ನಟ ಯಶ್ ಆಪ್ತರು ಬುಧವಾರ ಚೆಕ್‍ ಹಸ್ತಾಂತರಿಸಿದರು   

ಲಕ್ಷ್ಮೇಶ್ವರ: ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ಕಟೌಟ್‌ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟವರ ಕುಟುಂಬಗಳಿಗೆ ನಟ ಯಶ್‌ ಅವರು ಯಶೋಫೌಂಡೇಷನ್ ವತಿಯಿಂದ ನೀಡಿದ ತಲಾ ₹5 ಲಕ್ಷ ಮೊತ್ತದ ಚೆಕ್‌ಗಳನ್ನು ಬುಧವಾರ ವಿತರಿಸಲಾಯಿತು.

ವಿದ್ಯುತ್ ಸ್ಪರ್ಶಿಸಿ ಗಾಯಗೊಂಡವರ ಮನೆಗಳಿಗೂ ತೆರಳಿದ ಯಶ್‌ ಆಪ್ತರು, ಪರಿಹಾರ ನೀಡುವ ಭರವಸೆ ನೀಡಿದರು. ಚೆಕ್ ಸ್ವೀಕರಿಸಿದ ಮೃತರ ಪಾಲಕರ ಕಣ್ಣೀರಿಟ್ಟರು. ಮೃತ ಮುರಳಿ ಅವರ ತಾಯಿ, ‘ನೋಡು ಮಗನಾ ನಿನ್ನ ಯಶ್ ರೊಕ್ಕಾ ಕಳಸ್ಯಾರ’ ಎಂದು ಗೋಳಾಡಿದರು.

ಯಶ್‌ ಆಪ್ತ ಚೇತನ ಮಾತನಾಡಿ, ‘ಇಂತಹ ದುರಂತ ಆಗಬಾರದಿತ್ತು. ಘಟನೆ ನಡೆದ ದಿನ ಯಶ್ ದುಃಖಿತರಾಗಿದ್ದರು. ಸದ್ಯ ಅವರು ಪರಿಹಾರ ಕೊಟ್ಟಿದ್ದಾರೆ. ಮುಂದೆಯೂ ಅವರು ಪಾಲಕರ ಜೊತೆ ಇರುತ್ತಾರೆ’ ಎಂದು ಹೇಳಿದರು.

ADVERTISEMENT

‘ಯಶ್ ಅವರು ಅಭಿಮಾನಿಗಳ ಮೇಲೆ ಸಾಕಷ್ಟು ಗೌರವ ಇಟ್ಟುಕೊಂಡಿದ್ದಾರೆ. ಮೃತ ಯುವಕರ ಮನೆಗಳಿಗೆ ಸ್ವತಃ ಅವರೇ ಭೇಟಿ ನೀಡಿ, ಮಾನವೀಯತೆ ಮೆರೆದರು’ ಎಂದು ಗ್ರಾಮದ ನಿವಾಸಿಗಳಾದ ವಿಜಯಕುಮಾರ ಹಳ್ಳಿ ಮತ್ತು ಕೋಟೆಪ್ಪ ವರ್ದಿ ಹೇಳಿದರು.

ನಟ ಯಶ್ ಜನ್ಮದಿನದ ಅಂಗವಾಗಿ ಜ.7ರಂದು ರಾತ್ರಿ ಅವರ ಕಟೌಟ್ ಅಳವಡಿಸುವಾಗ ವಿದ್ಯುತ್ ಸ್ಪರ್ಶಿಸಿ, ಮುರಳಿ ನಡುವಿನಮನೆ, ನವೀನ ಗಾಜಿ ಹಾಗೂ ಹನುಮಂತಪ್ಪ ಹರಿಜನ ಮೃತಪಟ್ಟಿದ್ದರು. ಇನ್ನು ಮೂವರು ಯುವಕರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.