ADVERTISEMENT

ಮಕ್ಕಳ ರಕ್ಷಣೆಗೆ ಎಸ್‌ಒಪಿ ರೂಪಿಸಲು ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 17:19 IST
Last Updated 22 ಜುಲೈ 2020, 17:19 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಮಕ್ಕಳು ಕಾಣೆ ಮತ್ತು ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಕೆ ಮಾಡುವುದನ್ನು ತಡೆಗಟ್ಟಲು ಮಾರ್ಗದರ್ಶಿ ಸೂತ್ರಗಳನ್ನು (ಎಸ್‌ಒಪಿ) ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠ, ಮೂರು ತಿಂಗಳಲ್ಲಿ ಅನುಸರಣಾ ವರದಿ ಸಲ್ಲಿಸುವಂತೆ ತಿಳಿಸಿದೆ.

2018ರಲ್ಲಿ ಹೈಕೋರ್ಟ್‌ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ನೀಡಿದ್ದ ಆದೇಶ ಪಾಲಿಸದ ಕುರಿತು ಸಲ್ಲಿಕೆಯಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಪೀಠ, ‘ಬಾಲ ನ್ಯಾಯ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆ ನಿಯಮಗಳನ್ನು ರೂಪಿಸಬೇಕು’ ಎಂದು ತಿಳಿಸಿತು.

ADVERTISEMENT

‘ಮಕ್ಕಳನ್ನು ಅಶ್ಲೀಲ ಚಿತ್ರಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಪೊಲೀಸರು ಸೂಕ್ಷ್ಮವಾಗಿ ತನಿಖೆ ನಡೆಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ ಪೀಠ, ‘ಈ ವಿಷಯದಲ್ಲಿ ಪೊಲೀಸರ ತನಿಖಾ ವಿಧಾನಗಳು ಹೇಗಿರಬೇಕು ಎಂಬುದನ್ನು ಎಸ್‌ಒಪಿಯಲ್ಲಿ ವಿವರಿಸಬೇಕು. ಕಾಣೆಯಾದ ಮಕ್ಕಳ ಪತ್ತೆ ಕಾರ್ಯದ ಬಗ್ಗೆಯೂ ಮಾರ್ಗಸೂಚಿಗಳನ್ನು ರೂಪಿಸಬೇಕು’ ಎಂದು ಹೇಳಿತು.

‘ಈ ವಿಷಯದಲ್ಲಿ ಪೀಠವು 2018ರಿಂದಲೂ ಹಲವು ಬಾರಿ ನಿರ್ದೇಶನಗಳನ್ನು ನೀಡಿದೆ. ಕೆಲವು ವಿಷಯಗಳ ಬಗ್ಗೆ ಸರ್ಕಾರ ಇನ್ನೂ ಗಮನಹರಿಸಿಲ್ಲ' ಎಂದೂ ಅಸಮಾಧಾನ ವ್ಯಕ್ತಪಡಿಸಿತು.

’ಮಕ್ಕಳ ಸಮಗ್ರ ಸಂರಕ್ಷಣಾ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಲಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಯನ್ನು ಇಲ್ಲಿಗೆ ನೇಮಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಕೆಲಸದ ಸೂಕ್ಷ್ಮ ಸ್ವರೂಪವನ್ನು ಪರಿಗಣಿಸಿ ನಿರ್ದೇಶನಾಲಯಕ್ಕೇ ಪ್ರತ್ಯೇಕ ಸಿಬ್ಬಂದಿ ನೇಮಿಸಬೇಕು‘ ಎಂದು ಪೀಠ ನಿರ್ದೇಶನ ನೀಡಿತು.

‘ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವಾರ್ಷಿಕ ವರದಿ ಅಥವಾ ವಿಶೇಷ ವರದಿಗಳನ್ನು ನೀಡಿದ್ದರೆ ಸರ್ಕಾರ ಅದನ್ನು ಪೀಠಕ್ಕೆ ಸಲ್ಲಿಸಬೇಕು. ಒಂದು ವೇಳೆ ಸಲ್ಲಿಸದೇ ಇದ್ದರೆ ಪ್ರತಿವರ್ಷ ಸಲ್ಲಿಸಲು ಸೂಚನೆ ನೀಡಲಾಗುವುದು’ ಎಂದು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.