ADVERTISEMENT

ಪಿಯು ಮಕ್ಕಳಿಗೂ ಬಿಸಿಯೂಟಕ್ಕೆ ಚಿಂತನೆ: ಮಧು ಬಂಗಾರಪ್ಪ

ಮುಂದಿನ ವರ್ಷದಿಂದ ಕರ್ನಾಟಕ ಪಬ್ಲಿಕ್ ಶಾಲೆಯ 11 ಮತ್ತು 12ನೇ ತರಗತಿಗೆ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 14:44 IST
Last Updated 14 ನವೆಂಬರ್ 2025, 14:44 IST
ವಿಧಾನಸೌಧದಲ್ಲಿ ಶುಕ್ರವಾರ  ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಮಕ್ಕಳಿಗೆ ಹಸ್ತಲಾಘವ ಮಾಡಿ, ಶುಭ ಕೋರಿದರು. ಮಧು ಬಂಗಾರಪ್ಪ ಉಪಸ್ಥಿತರಿದ್ದರು. 
ಪ್ರಜಾವಾಣಿ  ಚಿತ್ರ. 
ವಿಧಾನಸೌಧದಲ್ಲಿ ಶುಕ್ರವಾರ  ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಮಕ್ಕಳಿಗೆ ಹಸ್ತಲಾಘವ ಮಾಡಿ, ಶುಭ ಕೋರಿದರು. ಮಧು ಬಂಗಾರಪ್ಪ ಉಪಸ್ಥಿತರಿದ್ದರು.  ಪ್ರಜಾವಾಣಿ  ಚಿತ್ರ.    

ಬೆಂಗಳೂರು: ‘ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಕರ್ನಾಟಕ ಪಬ್ಲಿಕ್‌ ಶಾಲೆಯ 11 ಮತ್ತು 12ನೇ ತರಗತಿ ಮಕ್ಕಳಿಗೆ ವಿಸ್ತರಿಸಲು ಕ್ರಮಕೈಗೊಳ್ಳಲಾಗುವುದು. ಪಿಯು ಕಾಲೇಜು ವಿದ್ಯಾರ್ಥಿಗಳಿಗೂ ಸೌಲಭ್ಯ ಒದಗಿಸುವ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ವಿಧಾನಸೌಧದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಮಕ್ಕಳ ದಿನಾಚರಣೆ ಹಾಗೂ ಪೋಷಕ–ಶಿಕ್ಷಕರ ಸಭೆಯಲ್ಲಿ ನಡೆದ ಸಂವಾದದಲ್ಲಿ ಬೆಳಗಾವಿ ಜಿಲ್ಲೆ ಬೈಲಹೊಂಗಲದ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿ ರಾಕೇಶ್‌ ಪ್ರಶ್ನೆಗೆ ಉತ್ತರಿಸಿದ ಅವರು, ಪಿಯು ಕಾಲೇಜುಗಳಿಗೂ ಮಧ್ಯಾಹ್ನದ ಬಿಸಿಯೂಟ ಒದಗಿಸಬೇಕಿದ್ದರೆ ಬಜೆಟ್‌ನಲ್ಲೇ ಘೊಷಣೆ ಮಾಡಬೇಕು. ಈ ಕುರಿತು ಚರ್ಚಿಸಲಾಗುವುದು ಎಂದರು.

‘ರಾಕೇಶ್‌ ಹೇಳಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ತರಗತಿಗಳು ನಡೆಯುತ್ತವೆ. ಮನೆಗಳಿಂದ ಬೆಳಗ್ಗೆ ಬೇಗನೆ ಹೊರಡುತ್ತಾರೆ. ಹಾಗಾಗಿ, ಪಿಯು ಕಾಲೇಜುಗಳಿಗೂ ಮಧ್ಯಾಹ್ನದ ಊಟವನ್ನು ವಿಸ್ತರಿಸಬೇಕು ಎಂಬ ಬೇಡಿಕೆ ಸೂಕ್ತವಾಗಿದೆ. ಮೊದಲು 8ನೇ ತರಗತಿಯವರೆಗೆ ಇದ್ದ ಮೊಟ್ಟೆ ವಿತರಣೆಯನ್ನು 9 ಮತ್ತು 10ನೇ ತರಗತಿಗೆ ವಿಸ್ತರಿಸಿದ್ದೇವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳ ಎಲ್ಲ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ಜಾರಿಗೆ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಹೇಳಿದರು.

ADVERTISEMENT

ಮೈಸೂರು ಜಿಲ್ಲೆಯ ಪುಟ್ಟೇಗೌಡನ ಹುಂಡಿಯ ವಿದ್ಯಾರ್ಥಿ ಪಿ.ಟಿ.ಲೋಕೇಶ್‌ ಹೇಳಿದಂತೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣದ ಸೌಲಭ್ಯವಿದೆ. ಹುಡುಗರಿಗೂ ವಿಸ್ತರಿಸುವ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ಈಗ ಎಲ್ಲರಿಗೂ ರಿಯಾಯಿತಿ ಬಸ್‌ಪಾಸ್‌ಗಳನ್ನು ಕೊಡಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕೆಪಿಎಸ್‌ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ವ್ಯವಸ್ಥೆ ಮಾಡಲಾಗುವುದು ಎಂದರು.

1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮೌಲ್ಯಗಳನ್ನು ಅಳವಡಿಸುವ ಮಹತ್ವಾಕಾಂಕ್ಷೆಯ ‘ಮೌಲ್ಯ ಶಿಕ್ಷಣ’ ವಿದ್ಯಾರ್ಥಿ ಚಟುವಟಿಕಾ ಪುಸ್ತಕಗಳ ಡಿಜಿಟಲ್‌ ಆವೃತ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಜೆಇಇ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಂಕೇತ್‌ ರಾಜ್‌ಗೆ ₹1 ಲಕ್ಷ, ಕೊಂಬೆಟ್ಟು ಸರ್ಕಾರಿ ಪಿಯು ಕಾಲೇಜಿನ ಪಿಯುಸಿ ವಿದ್ಯಾರ್ಥಿ ಅರುಣ್ ಕುಮಾರ್ ವಿ. ಅವರು ಮಾಡಿದ ವಿಶಿಷ್ಟ ಆವಿಷ್ಕಾರಕ್ಕಾಗಿ ₹15,000 ಹಾಗೂ ಎಸ್‌ಎಸ್‌ಎಲ್‌ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ ₹50,000 ನಗದು ಬಹುಮಾನ ನೀಡಿ, ಪ್ರೋತ್ಸಾಹಿಸಲಾಯಿತು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ವಿಧಾನಪರಿಷತ್ ಸದಸ್ಯೆ ಬಲ್ಕೀಸ್‌ ಬಾನು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ  ಎಚ್.ಎಂ.ರೇವಣ್ಣ, ಶಾಸಕರಾದ ವಿಜಯಾನಂದ ಕಾಶಪ್ಪನವರ್, ಬಿ.ಬಿ.ಚಿಮ್ಮನಕಟ್ಟಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾದ ನಸೀರ್ ಅಹಮದ್, ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಉಪಸ್ಥಿತರಿದ್ದರು.  

ವೈಚಾರಿಕತೆಯಿಂದಲೇ ದೇಶಕ್ಕೆ ಭವಿಷ್ಯ: ಸಿದ್ದರಾಮಯ್ಯ

ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ. ಹಾಗಾಗಿ ಪ್ರಾಥಮಿಕ‌ ಶಿಕ್ಷಣದಿಂದಲೇ ಮೌಢ್ಯ ಕಂದಾಚಾರದಿಂದ ದೂರ ಉಳಿಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಕ್ಕಳೇ ಭಾರತದ ಭವಿಷ್ಯ ಎನ್ನುವ ದೂರದೃಷ್ಟಿ ನೆಹರೂ ಅವರಿಗೆ ಇದ್ದ ಕಾರಣಕ್ಕೆ ಮಕ್ಕಳಲ್ಲಿ ವೈಜ್ಞಾನಿಕ ಮನೋಧರ್ಮ ರೂಪಿಸುವ ಶಿಕ್ಷಣಕ್ಕೆ ಒತ್ತು ನೀಡಿದ್ದರು. ನೆಹರೂ ಅವರ ಆಶಯದಂತೆ ರಾಜ್ಯ ಸರ್ಕಾರವೂ ಅಂತಹ ಶಿಕ್ಷಣಕ್ಕೆ ಒತ್ತು ನೀಡಿದೆ. ಪ್ರತಿ ವರ್ಷ ಶಿಕ್ಷಣ ಕ್ಷೇತ್ರಕ್ಕೆ ₹65000 ಕೋಟಿ ನೀಡುತ್ತಿದೆ ಎಂದರು. ಜಾತಿ ಧರ್ಮ ಭಾಷೆಯ ಮಿತಿ ಇಲ್ಲದೆ ಮನುಷ್ಯ ಕುಲವನ್ನು ಪ್ರೀತಿಸುವ ಮನೋಭಾವವನ್ನು ಮಕ್ಕಳಿಗೆ ಕಲಿಸಬೇಕು. ಜಾತಿ ವ್ಯವಸ್ಥೆಯ ಆಧಾರದ ಮೇಲೆ ತಾರತಮ್ಯ ಮಾಡುವವರನ್ನು ಹತ್ತಿರಕ್ಕೆ ಸೇರಿಸದೆ ಪ್ರತಿಯೊಬ್ಬರೂ ಸಂವಿಧಾನದ ಆಶಯದಂತೆ ಸಹಿಷ್ಣುತೆ ಮತ್ತು ಸಹಬಾಳ್ವೆಯ ಪಾಠ ಕಲಿಸಬೇಕು. ವಿವಿಧತೆಯಲ್ಲಿ ಏಕತೆ ಉಳಿಸಬೇಕು ಎಂದು ಹೇಳಿದರು. ‘ಸರ್ಕಾರಿ ಶಾಲೆಗಳ ಮಕ್ಕಳು ಸ್ವಾಭಿಮಾನದಿಂದ ಸಮಾಜಮುಖಿಯಾಗಿ ಬೆಳೆಯಲು ಉತ್ತಮ ಶಿಕ್ಷಣ ಪಡೆಯಲು ಸರ್ಕಾರ ಎಲ್ಲ ಸವಲತ್ತುಗಳನ್ನೂ ನೀಡುತ್ತಿದೆ. ಇದರ ಅನುಕೂಲ ಪಡೆದು ವೈಜ್ಞಾನಿಕ ಮನಸ್ಥಿತಿ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.