ADVERTISEMENT

ಚಿಂಚೋಳಿ ಉಪ ಚುನಾವಣೆ: ಮತದಾನ ಇಂದು

​ಪ್ರಜಾವಾಣಿ ವಾರ್ತೆ
Published 19 ಮೇ 2019, 2:39 IST
Last Updated 19 ಮೇ 2019, 2:39 IST
ಕಾಳಗಿ ಮತಗಟ್ಟೆಗೆ ಚಿಂಚೋಳಿ ವಿಧಾನಸಭಾ ಉಪ ಚುನಾವಣೆ ಸಿಬ್ಬಂದಿ ಶನಿವಾರ ಆಗಮಿಸಿದರು
ಕಾಳಗಿ ಮತಗಟ್ಟೆಗೆ ಚಿಂಚೋಳಿ ವಿಧಾನಸಭಾ ಉಪ ಚುನಾವಣೆ ಸಿಬ್ಬಂದಿ ಶನಿವಾರ ಆಗಮಿಸಿದರು   

ಕಲಬುರ್ಗಿ: ಇಡೀ ರಾಜ್ಯದ ಗಮನ ಸೆಳೆದಿರುವ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಇಂದು ಮತದಾನ ನಡೆಯಲಿದೆ.

ಕಾಂಗ್ರೆಸ್, ಬಿಜೆಪಿ, ಬಿಎಸ್‌ಪಿ ಹಾಗೂ ಪಕ್ಷೇತರರು ಸೇರಿ 17 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಧಿಕಾರ ಉಳಿಸಿಕೊಳ್ಳುವುದು ಕಾಂಗ್ರೆಸ್‌ಗೆ ಪ್ರತಿಷ್ಠೆಯಾದರೆ, ಅಧಿಕಾರದ ಗದ್ದುಗೆ ಹಿಡಿಯಲು ಹವಣಿಸುತ್ತಿರುವ ಬಿಜೆಪಿಗೆ ಈ ಕ್ಷೇತ್ರ ಗೆಲ್ಲುವುದು ಸವಾಲಾಗಿದೆ. ಹೀಗಾಗಿ ಚುನಾವಣೆ ಕುತೂಹಲ ಕೆರಳಿಸಿದೆ.

‘ಚುನಾವಣಾ ಕರ್ತವ್ಯಕ್ಕೆ 1,205 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜತೆಗೆ ಶೇ 10ರಷ್ಟು ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ಪಡೆಯಲಾಗಿದೆ. ಪ್ರತಿ ಮತಗಟ್ಟೆಗೆ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಪ್ರಥಮ ಮತಗಟ್ಟೆ ಅಧಿಕಾರಿ, ದ್ವಿತೀಯ ಮತಗಟ್ಟೆ ಅಧಿಕಾರಿ, ತಲಾ ಒಬ್ಬ ಡಿ ಗ್ರೂಪ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಒಟ್ಟು 241 ಮತಗಟ್ಟೆಗಳಿದ್ದು, ಈ ಪೈಕಿ 60 ಸೂಕ್ಷ್ಮ ಹಾಗೂ 11 ಅತಿ ಸೂಕ್ಷ್ಮ ಮತಗಟ್ಟೆಗಳು ಇವೆ. ಸೂಕ್ಷ್ಮ ಮತಗಟ್ಟೆಗಳ ಪೈಕಿ 25 ಕಡೆಗಳಲ್ಲಿ ವೆಬ್ ಕ್ಯಾಮೆರಾ ಅಳವಡಿಸಲಾಗಿದೆ.

241 ಮತಗಟ್ಟೆಗೆ ತಲಾ 2 ಬ್ಯಾಲೆಟ್‌ ಯೂನಿಟ್‌ (ವಿದ್ಯುನ್ಮಾನ ಮತಯಂತ್ರ), ಒಂದು ಕಂಟ್ರೋಲ್‌ ಯೂನಿಟ್‌ ಮತ್ತು ಒಂದು ವಿವಿ ಪ್ಯಾಟ್ ಒದಗಿಸಲಾಗಿದೆ. ಇದಕ್ಕಾಗಿ 482 ಬ್ಯಾಲೆಟ್‌ ಯೂನಿಟ್‌, 241 ಕಂಟ್ರೋಲ್ ಯೂನಿಟ್‌, 241 ವಿವಿ ಪ್ಯಾಟ್‌ ಮತಗಟ್ಟೆಗಳಿಗೆ ಕಳುಹಿಸಲಾಗಿದೆ. ವಿವಿ ಪ್ಯಾಟ್‌ ದುಪ್ಪಟ್ಟು ನೀಡಿದ್ದಾರೆ. ಜತೆಗೆ ಹೆಚ್ಚುವರಿಯಾಗಿ ಬ್ಯಾಲೆಟ್‌ ಯೂನಿಟ್‌, ಕಂಟ್ರೋಲ್‌ ಯೂನಿಟ್ ತರಿಸಲಾಗಿದೆ. ಎಲ್ಲಿಯಾದರೂ ಮತಯಂತ್ರಗಳಲ್ಲಿ ದೋಷ ಕಂಡುಬಂದರೆ ಸಂಚಾರಿ ದಳದೊಂದಿಗೆ ತಕ್ಷಣ ತೆರಳಿ ಮತಗಟ್ಟೆಗೆ ಮತಯಂತ್ರ ತಲುಪಿಸುವ ಕೆಲಸವನ್ನು ಮಾಡಲು 10 ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಜತೆಗೆ 11 ಫ್ಲೈಯಿಂಗ್‌ ಸ್ಕ್ವಾಡ್‌, 21 ಸೆಕ್ಟರಲ್‌ ಅಧಿಕಾರಿಗಳು, 35 ಮೈಕ್ರೋ ವೀಕ್ಷಕರು ಮತಗಟ್ಟೆ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ ಇರಲಿದ್ದಾರೆ.

ಅರೆ ಸೇನಾಪಡೆ ಯೋಧರ ನಿಯೋಜನೆ: ಬಂದೋಬಸ್ತ್‌ಗೆ ಗಡಿ ಭದ್ರತಾ ಪಡೆಯ 400 ಯೋಧರನ್ನು ನಿಯೋಜಿಸಲಾಗಿದೆ.

ಜತೆಗೆ 750 ಪೊಲೀಸರು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್ ನೇತೃತ್ವದಲ್ಲಿ ಮೂವರು ಡಿವೈಎಸ್ಪಿ, 35 ಪೊಲೀಸ್‌ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ.

ಮತದಾರರು: ಉಪ ಚುನಾವಣೆಗೆ ಕ್ಷೇತ್ರದಲ್ಲಿ 98,802 ಪುರುಷರು, 94,578 ಸ್ತ್ರೀಯರು ಮತ್ತು ಇತರರು 16 ಸೇರಿ ಒಟ್ಟು 1,93,396 ಮತದಾರರು ಮತದಾನ ಮಾಡುವ ಹಕ್ಕು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.