ADVERTISEMENT

ಕ್ರಿಸ್‌ಮಸ್, ಹೊಸವರ್ಷ: ಪ್ರವಾಸೋದ್ಯಮಕ್ಕೆ ಶುಕ್ರದೆಸೆ ‌

ಅದಿತ್ಯ ಕೆ.ಎ.
Published 21 ಡಿಸೆಂಬರ್ 2022, 22:00 IST
Last Updated 21 ಡಿಸೆಂಬರ್ 2022, 22:00 IST
ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾಗಿರುವ ಹೋಮ್‌ಸ್ಟೆ
ಪ್ರವಾಸಿಗರ ಸ್ವಾಗತಕ್ಕೆ ಸಜ್ಜಾಗಿರುವ ಹೋಮ್‌ಸ್ಟೆ   

ಬೆಂಗಳೂರು: ಮಲೆನಾಡಿನ ಮಡಿಲಿನಲ್ಲಿ ಕ್ರಿಸ್‌ಮಸ್‌ ಆಚರಣೆ ಹಾಗೂ ಹೊಸವರ್ಷ ಸ್ವಾಗತಿಸಲು ಮಹಾನಗರಗಳ ಜನರು ಸಜ್ಜಾಗಿದ್ದು, ಚಿಕ್ಕಮಗಳೂರು, ಸಕಲೇಶಪುರ ಹಾಗೂ ಕೊಡಗಿನ ಹೋಮ್‌ಸ್ಟೆ ಹಾಗೂ ರೆಸಾರ್ಟ್‌ಗಳಿಗೆ ಈಗ ಶುಕ್ರದೆಸೆ ಬಂದಿದೆ.

ಕೋವಿಡ್‌, ಪ್ರಾಕೃತಿಕ ವಿಕೋಪ ಕಾರಣದಿಂದ ಮಲೆನಾಡು ಭಾಗದಲ್ಲಿ ಕಳೆಗುಂದಿದ್ದ ಪ್ರವಾಸೋದ್ಯಮಕ್ಕೆ ಈಗ ಸುಗ್ಗಿಯ ಕಾಲ. ಪ್ರವಾಸಿ ಚಟುವಟಿಕೆಗಳು ಚಿಗುರಿವೆ. ಶಾಲಾ ಮಕ್ಕಳ ಪ್ರವಾಸದಿಂದ ಗಿಜಿಗುಡುತ್ತಿರುವ ಪ್ರವಾಸಿ ಸ್ಥಳಗಳು ಮತ್ತಷ್ಟು ಕಳೆಗಟ್ಟಲಿವೆ.

ಪ್ರಕೃತಿ ಮಡಿಲಿನಲ್ಲಿರುವ ಹೋಮ್‌ಸ್ಟೆಗಳಲ್ಲಿನ ಬಹುತೇಕ ಕೊಠಡಿಗಳನ್ನು ಪ್ರವಾಸಿಗರು ಆಗಲೇ ಕಾಯ್ದಿರಿಸಿದ್ದಾರೆ. ಮಹಾನಗರಗಳ ಜನರ ಆಗಮನಕ್ಕೆ ಸಜ್ಜಾಗಿರುವ ಅನೇಕ ಪ್ರವಾಸಿ ತಾಣಗಳಲ್ಲಿ ವಿಚಾರಿಸಿದರೆ ‘ರೂಂ ಲಭ್ಯವಿಲ್ಲ’ ಎಂಬ ಉತ್ತರ ಸಿಗುತ್ತಿದೆ.

ADVERTISEMENT

‘ಚಿಕ್ಕಮಗಳೂರಿನ 800 ಹೋಮ್‌ಸ್ಟೆಗಳ ಪೈಕಿ ಶೇ 90ರಷ್ಟು ಮುಂಗಡವಾಗಿ ಬುಕ್‌ ಆಗಿವೆ’ ಎಂದು ಅಸೋಸಿಯೇಷನ್‌ ಕಾರ್ಯದರ್ಶಿ ಗಿರೀಶ್‌ ತಿಳಿಸಿದರು. ಮೈಸೂರಿನಲ್ಲೂ ಶೇ 80ರಷ್ಟು ಹೋಟೆಲ್‌ಗಳಲ್ಲಿ ಕೊಠಡಿಗಳು ಬುಕ್‌ ಆಗಿವೆ ಎನ್ನುತ್ತಾರೆ ಸಂಘದವರು.

‘ಸಿಲಿಕಾನ್‌ ಸಿಟಿ’ಯ ಟೆಕ್ಕಿಗಳು ಮಲೆನಾಡಿನ ಊರುಗಳಲ್ಲದೆ ರಾಜ್ಯದ ಕರಾವಳಿ ಪ್ರದೇಶ, ಗೋವಾದತ್ತಲೂ ತೆರಳಲು ಸಿದ್ಧತೆ ನಡೆಸಿದ್ದಾರೆ.

‘2023 ಅನ್ನು ಸ್ಮರಣೀಯವಾಗಿ ಸ್ವಾಗತಿಸಲು ಹಲವು ಯೋಜನೆ ರೂಪಿಸಿಕೊಂಡಿದ್ದೇವೆ. ಕಳೆದ ಬಾರಿ ಕೋವಿಡ್‌ ಭಯದಿಂದ ಬೇರೆ ಸ್ಥಳಕ್ಕೆ ಹೋಗಿರಲಿಲ್ಲ. ಈ ಬಾರಿ ಸ್ನೇಹಿತರೆಲ್ಲರೂ ಗೋವಾದ ಸಮುದ್ರ ತೀರದಲ್ಲಿ ಹೊಸ ವರ್ಷ ಬರ ಮಾಡಿಕೊಳ್ಳುತ್ತೇವೆ’ ಎಂದು ಬೆಂಗಳೂರಿನ ಇನ್ಫೊಸಿಸ್‌ ಉದ್ಯೋಗಿ ಸಂತೋಷ್‌ ಹೇಳುತ್ತಾರೆ.

‘ಡಿ.24ರಿಂದ 31ರ ನಡುವೆ ದಿಢೀರ್ ಯೋಜನೆ ರೂಪಿಸಿ ಕೊಡಗಿಗೆ ಬಂದರೆ ರೂಂಗಳು ಸಿಗುವುದಿಲ್ಲ. ಮುಂಗಡವಾಗಿ ಹೋಮ್‌ಸ್ಟೆ ಕಾಯ್ದಿರಿಸಿದವರಿಗೆ ಮಾತ್ರ ಕೊಠಡಿ ಸಿಗಲಿವೆ. ಮಹಾರಾಷ್ಟ್ರ, ಕೇರಳದಿಂದ ಹೆಚ್ಚಿನ ಜನರು ಕಾಫಿ ಕಣಿವೆಯಲ್ಲಿ ಕೊಠಡಿ ಕಾಯ್ದಿರಿಸಿದ್ದಾರೆ’ ಎಂದು ಪ್ರವಾಸಿ ಏಜೆಂಟ್‌ ಹೇಳಿದರು.

‘ಕೊಡಗಿನಲ್ಲಿ ರೆಸಾರ್ಟ್‌, ಲಾಡ್ಜ್‌, ಹೋಟೆಲ್‌ಗಳು ಸೇರಿ 250 ಇವೆ. 3,500 ಹೋಮ್‌ಸ್ಟೇಗಳಿವೆ. ಡಿ.31ರಂದು ಜಿಲ್ಲೆಗೆ ಮೂರು ಲಕ್ಷ ಪ್ರವಾಸಿಗರು ಬರುವ ನಿರೀಕ್ಷೆಯಿದೆ. ರಾತ್ರಿ 2ರ ವರೆಗೂ ಸಂಭ್ರಮಕ್ಕೆ ಅವಕಾಶ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಕಾಫಿನಾಡಿಗೆ ಬಂದವರಿಗೆ ನಿರಾಸೆ ಆಗುವುದಿಲ್ಲ’ ಎಂದು ಕೂರ್ಗ್‌ ಹೋಟೆಲ್‌ ಹಾಗೂ ರೆಸಾರ್ಟ್‌ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ದರ ಏರಿಕೆ: ಪ್ರವಾಸಿಗರಿಗೆ ಬರೆ

ಸಾಮಾನ್ಯ ದಿನಗಳಲ್ಲಿ ₹ 1 ಸಾವಿರದಿಂದ ₹1,500 ಒಳಗಿದ್ದ ಹೋಮ್‌ಸ್ಟೆಗಳ ಕೊಠಡಿ ದರವು ಈಗ ₹ 3 ಸಾವಿರಕ್ಕೆ ಏರಿಕೆಯಾಗಿದೆ. ಪ್ರಕೃತಿ ಮಡಿಲಿನ ವಾಸ್ತವ್ಯದ ತಾಣಗಳಿಗೆ ₹5 ಸಾವಿರದಿಂದ ₹ 6 ಸಾವಿರದ ತನಕ ದರ ಏರಿಕೆಯಾಗಿದೆ. ‘ಪ್ರವಾಸಿಗರ ಸುಲಿಗೆ ಮಾಡಲಾಗುತ್ತಿದೆ’ ಎಂಬ ಆರೋಪ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.