
ಬೆಂಗಳೂರು: ‘ಮಕ್ಕಳ ಸಂಖ್ಯೆ ಇಲ್ಲ ಎಂಬ ಕಾರಣಕ್ಕೆ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಸರಿಯಲ್ಲ’ ಎಂದು ಯೂತ್ ಫಾರ್ ಸೇವಾದ ರಾಯಭಾರಿಯೂ ಆಗಿರುವ ಚಿತ್ರನಟ ರಿಷಬ್ ಶೆಟ್ಟಿ ಹೇಳಿದರು.
ಯೂತ್ ಫಾರ್ ಸೇವಾ ಶನಿವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಸ್ವಯಂಸೇವಕ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಏಕೆ ಇಲ್ಲ? ಅಲ್ಲಿ ಬೇಕಾಗಿರುವ ವ್ಯವಸ್ಥೆ, ಶಿಕ್ಷಕರ ಕೊರತೆ ಸರಿಪಡಿಸಬೇಕು. ಸರ್ಕಾರಿ ಶಾಲೆಗಳಲ್ಲಿ ನೀಡುವ ಶೇಕಡ 100ರಷ್ಟು ಗುಣಮಟ್ಟದ ಶಿಕ್ಷಣ ಪಡೆದವರು ಸಮಾಜದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ನಾನು ಸೇರಿದಂತೆ, ಹಲವಾರು ಐಎಎಸ್, ಐಆರ್‌ಎಸ್ ಅಧಿಕಾರಿಗಳು ಸಹ ಸರ್ಕಾರಿ ಶಾಲೆಯಲ್ಲಿ ಓದಿ ಸಮಾಜದ ಉನ್ನತ ಹುದ್ದೆಗೇರಿದ್ದಾರೆ’ ಎಂದರು.
‘ಸರ್ಕಾರಿ ಶಾಲೆಗಳಲ್ಲಿ ಓದಿದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುವುದು ಕಷ್ಟ ಆಗುತ್ತದೆ ಎಂಬ ಯೋಚನೆಯನ್ನು ಬದಲಾಯಿಸಲು ಯುವ ಸಮುದಾಯ ಕೈಜೋಡಿಸಬೇಕು. ನಾನು ಸಹ ಸಿನಿಮಾ ಮೂಲಕ ಇದನ್ನು ಬದಲಾಯಿಸುವ ಪ್ರಯತ್ನ ಮಾಡುತ್ತಿದ್ದೇನೆ. ನಾನು ಯೂತ್ ಫಾರ್ ಸೇವಾದ ರಾಯಭಾರಿ ಆಗದೇ, ಒಬ್ಬ ಸೇವಕನಾಗಿ ಕಾರ್ಯನಿರ್ವಹಿಸುತ್ತೇನೆ. ಈಗಾಗಲೇ ನಾನು ಓದಿರುವ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು, ಅಭಿವೃದ್ಧಿ ಪಡಿಸುತ್ತಿದ್ದೇನೆ. ಎಲ್ಲರ ಮಾರ್ಗದರ್ಶನ ಪಡೆದು ನಾವೆಲ್ಲರೂ ಸೇರಿ ಬಲಿಷ್ಠ ಸಮಾಜದ ನಿರ್ಮಿಸೋಣ’ ಎಂದು ಕರೆ ನೀಡಿದರು.
ಯೂತ್ ಫಾರ್ ಸೇವಾದ ಪ್ರಧಾನ ಕಾರ್ಯದರ್ಶಿ ಉನ್ನಿಕೃಷ್ಣನ್ ಮೆನನ್, ಕೇಂದ್ರ ಮಾನವ ಸಂಪನ್ಮೂಲ ಮತ್ತು ಸಾಮರ್ಥ್ಯ ನಿರ್ಮಾಣ ಆಯೋಗದ ಸದಸ್ಯ ಆರ್. ಬಾಲಸುಬ್ರಮಣಿಯಂ, ಡಬ್ಲ್ಯುಎಂಜಿ ಸಂಸ್ಥೆ ಸಂಸ್ಥಾಪಕ ಶ್ರೀಕರ ಐ.ಪಿ., ರೆಗೊ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಚ್.ಆರ್. ಶಂಕರ್, ಆರ್.ವಿ. ಎಜುಕೇಷನಲ್ ಇನ್‌ಸ್ಟಿಟ್ಯೂಷನ್ಸ್‌ನ ಅಧ್ಯಕ್ಷ ಎಂ.ಪಿ. ಶ್ಯಾಮ್, ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ ಪ್ರತಾಪ್ ಲಿಂಗಯ್ಯ, ಕ್ಲೈವರ್ಕ್ಸ್ ಸ್ಪೇಸ್‌ನ ಸಹಸಂಸ್ಥಾಪಕ ಅಭಿಜಿತ್ ಶಶಿಧರ್, ಐವಿನ್ ಎಲೆಕ್ಟ್ರಾನಿಕ್ಸ್‌ನ ಸಂಸ್ಥಾಪಕಿ ಅಶ್ವಿನಿ ರೈ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.