ADVERTISEMENT

ಮುಖ್ಯಮಂತ್ರಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಶ್ರೀರಾಮುಲು

ರಾಮನಗರದ ಬಿಜೆಪಿ ಅಭ್ಯರ್ಥಿ‌ ಕಣದಿಂದ ಹಿಂದೆ ಸರಿದದ್ದಕ್ಕೆ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 11:37 IST
Last Updated 1 ನವೆಂಬರ್ 2018, 11:37 IST
ಬಿ.ಶ್ರೀರಾಮುಲು‌ (ಸಂಗ್ರಹ ಚಿತ್ರ)
ಬಿ.ಶ್ರೀರಾಮುಲು‌ (ಸಂಗ್ರಹ ಚಿತ್ರ)   

ಬಳ್ಳಾರಿ: ರಾಮನಗರದ ಬಿಜೆಪಿ ಅಭ್ಯರ್ಥಿ‌ ಎಲ್.ಚಂದ್ರಶೇಖರ ಅವರ ‌ಮೇಲೆ ಒತ್ತಡ ತಂದು‌ ಕಣದಿಂದ ಹಿಂದೆ ‌ಸರಿಯುವಂತೆ ಮಾಡಿರುವಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ ಎಂದು‌ ಎಂದು ಬಿಜೆಪಿ ‌ಶಾಸಕ ಬಿ.ಶ್ರೀರಾಮುಲು‌ ಆರೋಪಿಸಿದರು.

ರಾಮನಗರದಲ್ಲಿ‌ ಪ್ರತಿಸ್ಪರ್ಧಿಯೇ ಇಲ್ಲದಂತೆ ಮಾಡಿರುವ ಕುಮಾರಸ್ವಾಮಿ ಪ್ರಜಾಪ್ರಭುತ್ವದ ಪ್ರಬಲ ‌ವಿರೋಧಿ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ನಗರದಲ್ಲಿ ಗುರುವಾರ ‌ಸುದ್ದಿಗೋಷ್ಠಿಯಲ್ಲಿ‌ ದೂರಿದರು.

ನಾನು ‌ಸಿದ್ದರಾಮಯ್ಯನವರಷ್ಟು‌ ಬುದ್ಧಿವಂತನಲ್ಲ, ದಡ್ಡ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಪ್ರತಿ‌ ಹದಿಮೂರು ಕಿ.ಮೀ.‌ಗೆ ಭಾಷೆಯ‌ ಬಳಕೆಯ ಶೈಲಿ‌ ಬದಲಾಗುತ್ತದೆ ಎಂಬುದೂ ಗೊತ್ತಿದೆ.‌ ನನ್ನದು ಸಾಮಾನ್ಯ ಗ್ರಾಮೀಣ ಜನರ ಭಾಷೆ ಎಂದರು.

ಜೆಡಿಎಸ್ ಕೊಡುತ್ತಿರುವ ‌ಎಲ್ಲ‌ ಕಿರುಕುಳಗಳನ್ನು ಕಾಂಗ್ರೆಸ್ ಮುಖಂಡರು ‌ಅಧಿಕಾರದ ಆಸೆಗಾಗಿ‌ ಸಹಿಸಿಕೊಳ್ಳುತ್ತಿದ್ದಾರೆ ಎಂದು‌ ಪ್ರತಿಪಾದಿಸಿದರು.

ಬಳ್ಳಾರಿ ಮತ್ತು‌ ಅಮೇಠಿ‌ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ‌ ಬಳಿಕ‌ ರಾಜೀನಾಮೆ ನೀಡಿದ್ದ ಸೋನಿಯಾ ಗಾಂಧಿ ಇದುವರೆಗೆ ಬಳ್ಳಾರಿಯ ಮುಖ ನೋಡಿಲ್ಲ ಎಂಬುದನ್ನು ಜನ ಮರೆತಿಲ್ಲ ಎಂದರು.

ಮೂರು ‌ಸಾವಿರ‌ ಕೋಟಿ ಅಭಿವೃದ್ಧಿ ಪ್ಯಾಕೇಜ್‌ನಿಂದ ಜಿಲೆಗೆ ಯಾವ ‌ಪ್ರಯೋಜನವೂ ಆಗಲಿಲ್ಲ.‌ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲೂ‌ ಜಿಲ್ಲೆಗೆ ಅನ್ಯಾಯವಾಗಿದೆ ಎಂದು ‌ಆರೋಪಿಸಿದರು.

ಹೈ-ಕ ಅಭಿವೃದ್ಧಿಗೆ‌ ಮೀಸಲಿರುವ ಅನುದಾನದಲ್ಲಿ‌ ₹500 ಕೋಟಿಯನ್ನು ‌ಕಡಿತಗೊಳಿಸಿರುವ ಸರ್ಕಾರ‌ ಅಭಿವೃದ್ಧಿ ‌ಹೊಂದಿರುವ‌ ಜಿಲ್ಲೆಗಳಿಗೆ‌ ನೀಡಿ ತಾರತಮ್ಯ ಎಸಗುತ್ತಿದೆ ಎಂದು‌ ದೂರಿದರು.

ಕಾಂಗ್ರೆಸ್ ಸರ್ಕಾರ ಎಲ್ಲ‌ ಜಾತಿಗಳ‌ ನಡುವೆ‌ ವೈಷಮ್ಯ‌ ಮೂಡಿಸುವ ಯೋಜನೆಗಳನ್ನು ಜಾರಿಗೆ ತಂದಿತ್ತು. ವಿದ್ಯಾರ್ಥಿಗಳಿಗೆ‌ ಪ್ರವಾಸ, ಅಲ್ಪ ಸಂಖ್ಯಾತರ ಮದುವೆಗೆ‌ ನೆರವು‌ ನೀಡುವ ಕಾರ್ಯಕ್ರಮಗಳು ‌ಜಾತಿ, ಧರ್ಮ ಗಳ ನಡುವೆ‌ ವೈಷಮ್ಯ‌ ಮೂಡಿಸುವಂತಿದ್ದವು ಎಂದರು.

ಸಮ್ಮಿಶ್ರ ‌ಸರ್ಕಾರ‌ ಸುಳ್ಳು ಆಶ್ವಾಸನೆಗಳನ್ನೇ‌ ನೀಡುತ್ತಿದೆ. ರೈತರ, ನೇಕಾರರ ಸಾಲ‌ ಮನ್ನಾ ಇನ್ನೂ ಆಗಿಲ್ಲ. ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿಲ್ಲ ಎಂದು‌ ದೂರಿದರು.

ಬಳ್ಳಾರಿಯನ್ನು ಗೆದ್ದರೆ ಕರ್ನಾಟಕವನ್ನೇ ಗೆದ್ದಂತೆ‌ ಎಂದು ಭಾವಿಸಿರುವ‌ ಸಮ್ಮಿಶ್ರ ಸರ್ಕಾರ ತನ್ನ ಎಲ್ಲ ಸಚಿವರು, ಮಾಜಿ‌ ಸಚಿವರು, ಶಾಸಕರನ್ನು ಕರೆತಂದಿದೆ. ಆದರೆ‌ ಸೋಲಿನ ಭಯ ಮಾತ್ರ ಹೋಗಿಲ್ಲ ಎಂದು ಪ್ರತಿಪಾದಿಸಿದರು.

ಜಿಲ್ಲೆಯ ‌ಜನರನ್ನು ಹಣ ಕೊಟ್ಟು ಖರೀದಿಸಲು ಆಗುವುದಿಲ್ಲ ಎಂಬುದನ್ನು ಕಾಂಗ್ರೆಸ್ ಅರಿಯಲಿ‌. ಇಲ್ಲಿನ ಜನ ತಮ್ಮ ತಟ್ಟೆಯ ಆಹಾರದ ಒಂದು ತುತ್ತನ್ನು ನನಗಾಗಿ‌ ಎತ್ತಿಟ್ಟು ನನ್ನನ್ನು ಬೆಳೆಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ‌ಮೂಲಕ ಮುಂದಿನ ಲೋಕಸಭೆ‌ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗಳಿಸಲಿದೆ ಎಂದರು.

ಬಿಜೆಪಿ‌ ಸರ್ಕಾರವಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ‌ಬಿಡುಗಡೆ ಮಾಡಿದ್ದ ಅನುದಾನವನ್ನು ಕಮಿಷನ್ ಆಸೆಯಿಂದ ಕಾಂಗ್ರೆಸ್ ತಡೆದಿದೆ ಎಂದು‌ ದೂರಿದರು.

ಶಾಂತಾ ಈ ಊರಿ‌ನ ಮಗಳು. ಅವರನ್ನು‌ ಮತ್ತೆ ಜಿಲ್ಲೆಯ ಜನ ಆಯ್ಕೆ ಮಾಡುವ ‌ಭರವಸೆ ಇದೆ ಎಂದು‌ ವಿಶ್ವಾಸ ವ್ಯಕ್ತಪಡಿಸಿದರು.

ಶಾಂತಾ ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಶಾಸಕ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು. ಶ್ರೀರಾಮುಲು‌ ಮುಂದೆ ಒಂದು ದಿನ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಅವರು‌ ಭವಿಷ್ಯ ನುಡಿದರು.

ಅಭ್ಯರ್ಥಿ ಜೆ.ಶಾಂತಾ ಮಾತನಾಡಿ, ಬಳ್ಳಾರಿಯ ಮಗಳಾಗಿರುವ ನನಗೆ‌ ಕ್ಷೇತ್ರದ ಜನ ಬೆಂಬಲ ನೀಡಲಿದ್ದಾರೆ. ಬಿಜೆಪಿ ಮತ್ತು ಅಣ್ಣ ಶ್ರೀರಾಮುಲು ಅವರ ಆಶೀರ್ವಾದ ವೂ ನನ್ನ ಶಕ್ತಿಯನ್ನು ಹೆಚ್ಚಿಸಿದೆ ಎಂದರು.

ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಎನ್.ರವಿಕುಮಾರ್, ಅಭ್ಯರ್ಥಿ ಜೆ.ಶಾಂತಾ, ಸಂಸದ ಕರಡಿ ಸಂಗಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.