
ಬೆಂಗಳೂರು: ‘ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಮಾಡಿದ ಶೇ 80ರಷ್ಟು ಕಮಿಷನ್ ಆರೋಪ ಸುಳ್ಳಾಗಿದ್ದರೆ ಕ್ರಮ ಕೈಗೊಳ್ಳಬಹುದಿತ್ತು. ಮೌನ ಗಮನಿಸಿದರೆ ಸರ್ಕಾರ ತಪ್ಪು ಮಾಡಿರುವುದು ಸತ್ಯ ಎನಿಸುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತು ಅವರು ಮಾತನಾಡಿದರು. ಬಿಜೆಪಿ ಆಡಳಿತದ ಅವಧಿಯಲ್ಲಿ ಗುತ್ತಿಗೆದಾರರ ಸಂಘ ಮಾಡಿದ್ದ 40 ಪರ್ಸೆಂಟ್ ಆರೋಪವನ್ನೇ ದಾಳವಾಗಿಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಈಗ ಅದೇ ಸಂಘ ಮೂರು ಬಾರಿ ಸುದ್ದಿಗೋಷ್ಠಿ ನಡೆಸಿ, ನಿಮ್ಮ ವಿರುದ್ಧವೇ ಭ್ರಷ್ಟಾಚಾರದ ಗಂಭೀರ ಆರೋಪ ಮಾಡಿದೆ. ಹಳೆಯ ಬಿಲ್‌ಗಳಿಗೂ ಕಮಿಷನ್ ಪಡೆಯುತ್ತಿದ್ದಾರೆ. ಆರೋಪ ಈಗಾಗಲೇ ರಾಹುಲ್ ಗಾಂಧಿ ಅವರನ್ನೂ ತಲುಪಿದೆ. ₹37,370 ಕೋಟಿ ಬಾಕಿ ಇದ್ದರೂ ಹಣ ಬಿಡುಗಡೆ ಮಾಡಿಲ್ಲ. ರಾಜ್ಯದ ಕಾಮಗಾರಿಗಳ ಗುತ್ತಿಗೆಯಲ್ಲಿ ಆಂಧ್ರಪ್ರದೇಶದ ಲಾಬಿ ಜೋರಾಗಿದೆ ಎಂದು ದೂರಿದರು.
2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ₹14,000 ಕೋಟಿ ಬಾಕಿ ಬಿಟ್ಟಿದ್ದರು. ಸರ್ಕಾರ ಬದಲಾದರೂ ಹಿಂದಿನ ಪ್ರಕ್ರಿಯೆಗಳ ಮುಂದುವರಿಕೆ ಇದ್ದೆ ಇರುತ್ತದೆ. ಬಿಲ್ ಪಾವತಿಸುವುದು ನಿರಂತರ ಪ್ರಕ್ರಿಯೆ. 40 ಪರ್ಸೆಂಟ್ ಎಂಬ ಭಿತ್ತಿಪತ್ರಗಳನ್ನು ಕಾಂಗ್ರೆಸ್ ನಾಯಕರು ಎಲ್ಲ ಕಡೆ ಅಂಟಿಸಿದ್ದರು. ಈಗ ಈ ಆರೋಪದ ಪತ್ರಗಳನ್ನು ಜನರು ಕಾಂಗ್ರೆಸ್ ನಾಯಕರ ಮುಖದ ಮೇಲೆ ಅಂಟಿಸುತ್ತಾರೆ ಎಂದರು.
ಮಹಾತ್ಮ ಗಾಂಧೀಜಿಯವರನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದೆ. ಕಾಂಗ್ರೆಸ್ ಭ್ರಷ್ಟಾಚಾರದ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆಆರ್.ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ
‘ನಾಮ’ದ ಜಟಾಪಟಿ
ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ 445 ಯೋಜನೆಗಳಿಗೆ ನೆಹರು ಇಂದಿರಾ ಗಾಂಧಿ ರಾಜೀವ್ ಗಾಂಧಿ ಸಂಜಯ್ ಗಾಂಧಿ ಹೆಸರಿಟ್ಟಿದೆ. ಮಹಾತ್ಮ ಗಾಂಧಿ ಹೆಸರನ್ನೇ ಹೈಜಾಕ್ ಮಾಡಿದೆ. ನರೇಗಾ ಯೋಜನೆಯ ಹೆಸರು ಬದಲಾವಣೆ ಮಾಡಿದ್ದಕ್ಕೆ ಸಹಿಸಲು ಅವರಿಗೆ ಆಗುತ್ತಿಲ್ಲ ಎಂದು ಆರ್. ಅಶೋಕ ದೂರಿದರು. ರಾಮನ ಹೆಸರು ಕೇಳಿದರೆ ಅವರಿಗೆ ಆಗುವುದಿಲ್ಲ. ಅದಕ್ಕಾಗಿಯೇ ರಾಮನಗರದ ಹೆಸರನ್ನೂ ಬದಲಾಯಿಸಿ ದಕ್ಷಿಣ ಬೆಂಗಳೂರು ಎಂದು ಮಾಡಿದರು. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೆಸರಿನಲ್ಲೂ ರಾಮ ಇದೆ. ಅವರ ತಂದೆ ಇಟ್ಟಿದ್ದಕ್ಕೆ ಇದೆ. ಇವರೇ ಇಟ್ಟುಕೊಳ್ಳುವುದಾಗಿದ್ದರೆ ರಾಮ ಪದವನ್ನೇ ಬಿಡುತ್ತಿದ್ದರು ಎಂದರು. ಆಗ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಮಹಾತ್ಮ ಗಾಂಧಿ ಅವರ ಹೆಸರಿನಲ್ಲಿ ಇರುವ ಯೋಜನೆಗಳನ್ನು ಓದಲು ಆರಂಭಿಸಿದರು. ಇದು ಕಾಂಗ್ರೆಸ್–ಬಿಜೆಪಿ ಸದಸ್ಯರ ನಡುವೆ ಜಟಾಪಟಿಗೆ ದಾರಿ ಮಾಡಿಕೊಟ್ಟಿತು.
ಸಿದ್ದರಾಮಯ್ಯ ಈಗ ‘ಇಲಿಯಾ’
ಮೊದಲ ಅವಧಿಯಲ್ಲಿ ಎಲ್ಲರೂ ಮೆಚ್ಚುವ ‘ಹುಲಿಯಾ’ ಆಗಿದ್ದ ಸಿದ್ದರಾಮಯ್ಯ ಈಗ ‘ಇಲಿಯಾ’ ಆಗಿದ್ದಾರೆ ಎಂದು ಆರ್.ಅಶೋಕ ಹೇಳಿದರು. ಬಿಜೆಪಿ ವಿರುದ್ಧ ಗುತ್ತಿಗೆದಾರರ ಸಂಘ ಮಾಡಿದ್ದ ಆರೋಪವನ್ನೇ ಬಂಡವಾಳ ಮಾಡಿಕೊಂಡು ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಜೋಡೆತ್ತುಗಳಂತೆ ‘ಪೇಸಿಎಂ’ ಎಂದು ಬೊಬ್ಬೆ ಹಾಕಿದ್ದರು. ಈಗ ಇಬ್ಬರೂ ಕುಂಟೆತ್ತುಗಳಾಗಿದ್ದಾರೆ. ಬೇರೆ ಬೇರೆ ದಿಕ್ಕಿಗೆ ಎಳೆಯುತ್ತಿದ್ದಾರೆ ಎಂದು ಟೀಕಿಸಿದರು.
ತರಬೇತಿಗೆ ಪಡೆದರೆ ‘ಟ್ಯಾಬ್’
ಸದನ ಆರಂಭವಾಗುತ್ತಿದ್ದಂತೆ ನಗರಾಭಿವೃದ್ಧಿ ಇಲಾಖೆಯ ಡೈರಿಗಳನ್ನು ಸದಸ್ಯರಿಗೆ ನೀಡಲಾಯಿತು. ಆಗ ಬಿಜೆಪಿಯ ಪ್ರಭು ಚೌಹಾಣ್ ‘ನೀವು ಕೊಟ್ಟಿಲ್ಲವಲ್ಲ. ಡೈರಿ ಬದಲು ಲ್ಯಾಪ್‌ಟಾಪ್ ಕೊಡಿ’ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಹೇಳಿದರು. ‘ಲ್ಯಾಪ್‌ಟಾಪ್ ಬೇಡ. ಎಲ್ಲ ಸದಸ್ಯರಿಗೂ ಟ್ಯಾಬ್ ಕೊಡುತ್ತೀನಿ. ಆದರೆ ಅದನ್ನು ಬಳಸುವ ಬಗ್ಗೆ ತರಬೇತಿ ಕೊಟ್ಟ ನಂತರ ವಿತರಿಸಲಾಗುವುದು. ಬಳಸಲು ಬಾರದೆ ಇದ್ದರೆ ತೆಗೆದುಕೊಂಡು ಹೋಗಿ ಬೇರೆಯವರಿಗೆ ಕೊಡತ್ತಾರೆ’ ಎಂದು ಖಾದರ್ ಪ್ರತಿಕ್ರಿಯಿಸಿದರು.
ತಿದ್ದುಪಡಿ ಬದಲಾವಣೆ ಬೇರೆ..
ಜವಾಹರಲಾಲ್ ನೆಹರು 17 ಬಾರಿ ಇಂದಿರಾಗಾಂಧಿ 29 ಬಾರಿ ರಾಜೀವ್‌ಗಾಂಧಿ 10 ಬಾರಿ ಸೇರಿದಂತೆ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ 72 ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದೆ ಎಂದು ಆರ್.ಆಶೋಕ ಟೀಕಿಸಿದರು. ಅಟಲ್ ಬಿಹಾರಿ ವಾಜಪೇಯಿ 14 ಬಾರಿ ಹಾಗೂ ಪ್ರಧಾನಿ ನರೇಂದ್ರ ಮೋದಿ 8 ಬಾರಿ ತಿದ್ದುಪಡಿ ಮಾಡಿದ್ದಾರೆ. ಅತಿ ಹೆಚ್ಚು ಬಾರಿ ತಿದ್ದುಪಡಿ ಮಾಡಿದ ಕಾಂಗ್ರೆಸ್ ಬಿಜೆಪಿ ಮೇಲೆ ಸಂವಿಧಾನ ಬದಲಾವಣೆಯ ಆರೋಪ ಮಾಡುತ್ತಿದೆ ಎಂದರು. ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ರಾಮಲಿಂಗಾರೆಡ್ಡಿ ‘ಸಂವಿಧಾನ ತಿದ್ದುಪಡಿಯೇ ಬೇರೆ ಬದಲಾವಣೆಯೇ ಬೇರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.