ADVERTISEMENT

ಪರಪ್ಪನ ಅಗ್ರಹಾರ: ಜೈಲಲ್ಲಿ 91 ಆಯುಧ, ಮೊಬೈಲ್, ಸಿಮ್ ಕಾರ್ಡ್ ಜಪ್ತಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 11:58 IST
Last Updated 10 ಜುಲೈ 2021, 11:58 IST
ಪರಪ್ಪನ ಅಗ್ರಹಾರ ಕಾರಾಗೃಹ ಮೇಲೆ‌ ಪೊಲೀಸರು ನಡೆಸಿದ ದಾಳಿ
ಪರಪ್ಪನ ಅಗ್ರಹಾರ ಕಾರಾಗೃಹ ಮೇಲೆ‌ ಪೊಲೀಸರು ನಡೆಸಿದ ದಾಳಿ   

ಬೆಂಗಳೂರು: 'ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪ್ರತಿಯೊಂದು ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿ, ರೌಡಿಗಳ‌ ವಿರುದ್ಧ ವಿಶೇಷ ಕಾರ್ಯಾಚರಣೆ ಮಾಡಿದ್ದಾರೆ' ಎಂದು ಕಮಿಷನರ್ ಕಮಲ್ ಪಂತ್ ಹೇಳಿದರು.

ನಗರದಲ್ಲಿ ರೌಡಿಗಳ ಮನೆ ಹಾಗೂ ಪರಪ್ಪನ ಅಗ್ರಹಾರ ಕಾರಾಗೃಹ ಮೇಲೆ‌ ಪೊಲೀಸರು ನಡೆಸಿದ ದಾಳಿ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಅವರು‌ ಮಾತನಾಡಿದರು.

'2,144 ಮನೆಗಳ ಮೇಲೆದಾಳಿ ಮಾಡಿದ್ದೇವೆ. ಮನೆಗಳಲ್ಲಿ ತಪಾಸಣೆ ಕಾರ್ಯ ಮಾಡಲಾಗಿದೆ. ಜೈಲಿನಲ್ಲೂ ಶೋಧ‌ ನಡೆಸಲಾಯಿತು' ಎಂದರು.

ADVERTISEMENT

'ದಾಳಿಯಲ್ಲಿ 1,548 ರೌಡಿಗಳು ಸಿಕ್ಕಿದ್ದಾರೆ. ಜೈಲಿನಲ್ಲಿರುವ ರೌಡಿಗಳು, ಅಪರಾಧಿಗಳು ಹಾಗೂ ರೌಡಿ ಆಸಾಮಿಗಳ ಮನೆ ಮೇಲೂ ದಾಳಿ ಮಾಡಿದ್ದೇವೆ. ದಾಳಿಯಲ್ಲಿ ಪೊಲೀಸ್ ಜೊತೆ ಶ್ವಾನದಳ, ಮಾದಕ ವಸ್ತು‌‌ ನಿಯಂತ್ರಣ ಘಟಕ, ಲೋಹ ಶೋಧ ತಂಡ ಸಹ ಇತ್ತು. 91 ಆಯುಧಗಳು (ಲಾಂಗ್, ಮಚ್ಚು, ಚಾಕು ಇತರೆ) ದಾಳಿಯಲ್ಲಿ ಸಿಕ್ಕಿವೆ. ಆಯಾ ಠಾಣೆಗಳಲ್ಲಿ ಕರೆಸಿ ರೌಡಿಗಳ ಚಲನವಲನ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಇದುವರೆಗೂ 409 ರೌಡಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ' ಎಂದೂ ಅವರು ತಿಳಿಸಿದರು.

'ಜೈಲಿನಲ್ಲಿ 26 ಚಾಕು, 200 ಗ್ರಾಂ ಗಾಂಜಾ, ಮೊಬೈಲ್‌ಗಳು, ಸಿಮ್ ಕಾರ್ಡ್‌ಗಳು ಸಿಕ್ಕಿವೆ. ಗಾಂಜಾ ಹೊಂದಿದ್ದ 84 ಜನರನ್ನು‌ ಬಂಧಿಸಲಾಗಿದೆ. ಮಾರಕಾಸ್ತ್ರ ಇಟ್ಟುಕೊಂಡಿದ್ದ 48 ರೌಡಿಗಳನ್ನು ಬಂಧಿಸಲಾಗಿದೆ' ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.