ADVERTISEMENT

ರಾಜಕೀಯ ಮಾತು ಸದನದಾಚೆಗಿರಲಿ: ಕಾಮನ್‌ವೆಲ್ತ್ ಸಂಸದೀಯ ಸಂಘದ ಸಮ್ಮೇಳನದಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 15:42 IST
Last Updated 13 ಸೆಪ್ಟೆಂಬರ್ 2025, 15:42 IST
ವಿಧಾನ ಪರಿಷತ್ತಿಗೆ ಒಂದೇ ಕ್ಷೇತ್ರದಿಂದ ಸತತ ಎಂಟು ಬಾರಿ ಆಯ್ಕೆಯಾಗಿ, 45 ವರ್ಷ ಪೂರೈಸಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಬೆಳ್ಳಿಯ ಗಧೆ ನೀಡಿ ಸನ್ಮಾನಿಸಿದರು. ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್‌, ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಜತೆಯಾದರು
ವಿಧಾನ ಪರಿಷತ್ತಿಗೆ ಒಂದೇ ಕ್ಷೇತ್ರದಿಂದ ಸತತ ಎಂಟು ಬಾರಿ ಆಯ್ಕೆಯಾಗಿ, 45 ವರ್ಷ ಪೂರೈಸಿರುವ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಬೆಳ್ಳಿಯ ಗಧೆ ನೀಡಿ ಸನ್ಮಾನಿಸಿದರು. ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್‌, ರಾಜ್ಯಪಾಲ ಥಾವರಚಂದ್‌ ಗೆಹಲೋತ್‌, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಜತೆಯಾದರು   

ಬೆಂಗಳೂರು: ‘ಗದ್ದಲವಿಲ್ಲದೆ, ಯಾವುದೇ ಅಡೆತಡೆಗಳು ಇಲ್ಲದೆ ಸದನದ ಕಲಾಪಗಳು ನಡೆಯಬೇಕು. ರಾಜಕೀಯಯದ ಮಾತು ಸದನದಾಚೆ ಇರಬೇಕು’ ಎಂಬ ನಿರ್ಣಯದೊಂದಿಗೆ ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗ 11ನೇ ಸಮ್ಮೇಳನಕ್ಕೆ ಶನಿವಾರ ತೆರೆಬಿತ್ತು.

ಇದೇ 12 ಮತ್ತು 13ರಂದು ನಡೆದ ಈ ಸಮ್ಮೇಳನದಲ್ಲಿ ಲೋಕಸಭೆಯ ಸ್ಪೀಕರ್‌, ರಾಜ್ಯಸಭೆಯ ಉಪಸಭಾಪತಿ, 26 ರಾಜ್ಯಗಳ ವಿಧಾನಸಭೆಯ ಸಭಾಧ್ಯಕ್ಷರು ಭಾಗಿಯಾಗಿದ್ದರು. ಸಮ್ಮೇಳನದ ಸಮಾರೋಪ ಸಮಾರಂಭದ ನಂತರ ತಮ್ಮ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ನಿರ್ಣಯಗಳನ್ನು ಮಂಡಿಸಿದರು.

‘ಜನಪರ ಕಾರ್ಯಗಳ ಬಗ್ಗೆ ಚರ್ಚಿಸಲಷ್ಟೇ ಸದನದ ಸಮಯ ಬಳಕೆಯಾಗಬೇಕು. ರಾಜಕೀಯದ ಮಾತು ಸದನದಾಚೆಗೆ ಇರಬೇಕು ಎಂದು ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ ತಿಳಿಹೇಳಬೇಕೆಂದು ನಿರ್ಧರಿಸಲಾಗಿದೆ. ಲೋಕಸಭೆ, ರಾಜ್ಯಸಭೆ, ರಾಜ್ಯಗಳ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಕಲಾಪವನ್ನು ಹೇಗೆ ನಡೆಸಬೇಕು ಎಂಬುದನ್ನು ಸೂಚಿಸುವ ಕೈಪಿಡಿಯೊಂದನ್ನು ಸಿದ್ಧಪಡಿಸುವ ಬಗ್ಗೆ ನಿರ್ಧರಿಸಲಾಗಿದೆ’ ಎಂದರು.

ADVERTISEMENT

‘ಗದ್ದಲವೇ ಈಗ ಸದನ ಸರಾಗವಾಗಿ ನಡೆಯಲು ಇರುವ ದೊಡ್ಡ ತೊಡಕು. ಗದ್ದಲ, ಧರಣಿಗಳು ಅತ್ಯಮೂಲ್ಯವಾದ ವಿಷಯಗಳ ಮೇಲಿನ ಚರ್ಚೆಯನ್ನು ಹಾದಿತಪ್ಪಿಸುತ್ತವೆ. ಹಣವೂ ವ್ಯರ್ಥವಾಗುತ್ತದೆ. ಇದನ್ನು ಅರ್ಥಮಾಡಿಕೊಂಡು ಚುನಾಯಿತ ಪ್ರತಿನಿಧಿಗಳು ಸದನದಲ್ಲಿ ವರ್ತಿಸಬೇಕು’ ಎಂದು ಕರೆ ನೀಡಿದರು.

ರಾಜ್ಯಸಭೆ ಉಪ ಸಭಾಪತಿ ಹರಿವಂಶ್‌, ‘ಸದನಗಳಲ್ಲಿ ಕಲಾಪಗಳು ನಡೆಯುವುದಿಲ್ಲ ಎಂಬುದನ್ನಷ್ಟೇ ಮಾಧ್ಯಮಗಳು ತೋರಿಸುತ್ತವೆ. ಆದರೆ ಸದನ ಸಮಿತಿಗಳು ಸದಾ ಕೆಲಸ ಮಾಡುತ್ತವೆ. ಸದಸ್ಯರು ಪಕ್ಷಭೇದ ಮರೆತು ಜನರ ಒಳಿತಿಗಾಗಿ ದುಡಿಯುತ್ತಾರೆ. ಆ ಬಗ್ಗೆಯೂ ಜನರಿಗೆ ಸುದ್ದಿ ತಲುಪಿಸಬೇಕು’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದ ಆತ್ಮ. ರಾಜಕೀಯ ಭಿನ್ನಾಭಿಪ್ರಾಯವನ್ನು ಪ್ರಬುದ್ಧ ಮತ್ತು ಸಹಿಷ್ಣು ಮನೋಭಾವದಿಂದ ಸ್ವೀಕರಿಸಬೇಕು
ಓಂ ಬಿರ್ಲಾ ಲೋಕಸಭೆ ಸ್ಪೀಕರ್

ನಿರ್ಣಯಗಳೇನು

  • ದೇಶದ ಎಲ್ಲ ಸದನಗಳ ಕಲಾಪ ಚರ್ಚೆ ಮಸೂದೆಗಳ ವಿವರಗಳನ್ನು ಒಳಗೊಂಡ ಏಕ ದತ್ತಾಂಶಕೋಶ ರೂಪಿಸಬೇಕು. ಯಾವುದಾದರೂ ಒಂದು ವಿಷಯದ ಬಗ್ಗೆ ಎಲ್ಲ ಸದನಗಳಲ್ಲಿ ಇರುವ ಮಾಹಿತಿಯು ಸದಸ್ಯರಿಗೆ ಒಂದೆಡೆಯೇ ಲಭ್ಯವಾಗಬೇಕು

  • ಸದನ ಕಲಾಪಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿ ಸಾರ್ವಜನಿಕರಿಗೆ ದೊರೆಯುವಂತೆ ಮಾಡಬೇಕು. ದೇಶದ ಸಾಂವಿಧಾನಿಕ ಸಂಸ್ಥೆಗಳ ಕಾರ್ಯನಿರ್ವಹಣೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಬೇಕು

  • ಸಂವಿಧಾನಿಕ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ದೇಶದ ಯುವಜನರು ಭಾಗಿಯಾಗುವ ಸಾಧ್ಯತೆಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು

‘ಮಣಿಪುರ: ಮೂರು ಬಾರಿ ಚರ್ಚೆ’

ಮಣಿಪುರದಲ್ಲಿ ಗಲಭೆ ನಡೆದು ಎರಡು ವರ್ಷಗಳಾಗುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಅಲ್ಲಿಗೆ ಭೇಟಿ ನೀಡಿದ್ದಾರೆ. ಈ ಭೇಟಿಯ ಪ್ರಯೋಜನವೇನು ಎಂಬ ಪ್ರಶ್ನೆಯನ್ನು ಸುದ್ದಿಗಾರರೊಬ್ಬರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರ ಎದುರು ಇರಿಸಿದರು. ಅದಕ್ಕೆ ಓಂ ಬಿರ್ಲಾ ಅವರು ‘ಮಣಿಪುರ ಗಲಭೆಯ ಬಗ್ಗೆ ಚಳಿಗಾಲದ ಅಧಿವೇಶನ ಬಜೆಟ್ ಅಧಿವೇಶನ ಮತ್ತು ಮುಂಗಾರು ಅಧಿವೇಶನದಲ್ಲಿ ಚರ್ಚಿಸಿದ್ದೇವೆ. ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯ ಬಗ್ಗೆ ಚರ್ಚಿಸಿದ್ದೇವೆ’ ಎಂದಷ್ಟೇ ಹೇಳಿದರು. ಪ್ರಧಾನಿ ಭೇಟಿಯ ಬಗ್ಗೆ ಮರುಪ್ರಶ್ನಿಸಿದಾಗ ಬೇರೆ ಪ್ರಶ್ನೆಯತ್ತ ಗಮನ ನೀಡಿದರು. ಜನಪರವಾದ ಚರ್ಚೆಗಳು ನಡೆಯಬೇಕು ಎಂದು ಇಲ್ಲಿ ಹೇಳುತ್ತಿದ್ದೀರಿ. ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಸದಸ್ಯರು ಮಾತನಾಡಿದರೆ ಕಲಾಪವನ್ನೇ ಮುಂದೂಡುತ್ತೀರಿ. ನೀವು ಕಲಾಪ ನಡೆಸಿದ್ದಕ್ಕಿಂತ ಮುಂದೂಡಿದ್ದೇ ಹೆಚ್ಚು. ಈ ಬಗ್ಗೆ ಏನು ಹೇಳುತ್ತೀರಿ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಓಂ ಬಿರ್ಲಾ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಸುದ್ದಿಗೋಷ್ಠಿಯನ್ನು ಕೊನೆಗೊಳಿಸಿ ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.