ADVERTISEMENT

ಬಿಜೆಪಿ ವಿರುದ್ಧ ಮತ್ತೆರಡು ದೂರು

ಜೆಡಿಎಸ್‌ ಶಾಸಕರಿಗೆ ಹಣದ ಅಮಿಷ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 20:30 IST
Last Updated 12 ಫೆಬ್ರುವರಿ 2019, 20:30 IST

ಬೆಂಗಳೂರು: ಜೆಡಿಎಸ್‌ ಶಾಸಕರಿಗೆ ಬಿಜೆಪಿ ನಾಯಕರು ಹಣ ಹಾಗೂ ಸಚಿವ ಸ್ಥಾನದ ಆಮಿಷವೊಡ್ಡಿದ್ದಾರೆ ಎನ್ನಲಾದ ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಮಂಗಳವಾರ ಮತ್ತೆರಡು ದೂರುಗಳು ದಾಖಲಾಗಿವೆ.

‘ಲಂಚ ಮುಕ್ತ ಕರ್ನಾಟಕ ವೇದಿಕೆ’ ಸಂಚಾಲಕ ರವಿಕೃಷ್ಣಾರೆಡ್ಡಿ ಮತ್ತು ಕಾಂಗ್ರೆಸ್‌ ಮುಖಂಡ ಜಿ.ಎ. ಬಾವ ನೀಡಿರುವ ಪ್ರತ್ಯೇಕ ದೂರುಗಳಲ್ಲಿ ಕೋಲಾರದ ಜೆಡಿಎಸ್‌ ಶಾಸಕ ಕೆ. ಶ್ರೀನಿವಾಸಗೌಡ ಅವರಿಂದ ರಾಜೀನಾಮೆ ಕೊಡಿಸಲು ₹5 ಕೋಟಿ ಮುಂಗಡ ನೀಡಿದ್ದನ್ನು ಪ್ರಸ್ತಾಪಿಸಿದ್ದಾರೆ.

ಮನೆಯಲ್ಲಿ ಎರಡು ತಿಂಗಳು ದೊಡ್ಡ ಮೊತ್ತದ ಹಣ ಇಟ್ಟುಕೊಂಡಿದ್ದ ಶ್ರೀನಿವಾಸ ಗೌಡ, ಅವರಿಗೆ ಹಣ ನೀಡಿದ್ದಾರೆನ್ನಲಾದ ಶಾಸಕರಾದ ಅಶ್ವತ್ಥ ನಾರಾಯಣ, ಎಸ್‌.ಆರ್‌. ವಿಶ್ವನಾಥ ಹಾಗೂ ಮಾಜಿ ಶಾಸಕ ಸಿ.ಪಿ ಯೋಗೀಶ್ವರ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ADVERTISEMENT

ವಿಧಾನಸಭೆ ಚುನಾವಣೆ ನಡೆದ ಬಳಿಕ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರಿಗೆ ಬಿಜೆಪಿ ನಾಯಕರು ಹಣ ಹಾಗೂ ಸಚಿವ ಸ್ಥಾನದ ಆಮಿಷ ಒಡ್ಡುತ್ತಿದ್ದಾರೆ. ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಪಿತೂರಿ ನಡೆಯುತ್ತಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬಾವ ದೂರಿನಲ್ಲಿ ಹೇಳಿದ್ದಾರೆ.

ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಕ್ಕೂ ರವಿಕೃಷ್ಣಾರೆಡ್ಡಿ ದೂರು ಸಲ್ಲಿಸಿದ್ದಾರೆ. 5 ಕೋಟಿ ಹಣದ ಬಗ್ಗೆಯೂ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ಸೋಮವಾರ ಸಾಮಾಜಿಕ ಕಾರ್ಯಕರ್ತರಾದ ಹನುಮೇಗೌಡ ಮತ್ತು ಪ್ರಶಾಂತ್‌ ಈ ಬಗ್ಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.