ಮೈಸೂರು: ‘ಪಕ್ಷದಲ್ಲಿನ ಕೆಲ ಗೊಂದಲಗಳಿಂದ ಸರ್ಕಾರಕ್ಕೆ ಹಾನಿ ಆಗುತ್ತಿರುವುದು ಸತ್ಯ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಶಾಸಕ ತನ್ವೀರ್ ಸೇಠ್ ಹೇಳಿದರು.
ಬುಧವಾರ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ಅಧಿಕಾರ ಹಂಚಿಕೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಸಚಿವ ಸಂಪುಟ ಪುನರ್‌ರಚನೆ ಮೊದಲಾದ ವಿಚಾರದಲ್ಲಿ ಗೊಂದಲಗಳು ಇರುವುದು ಸತ್ಯ. ಈ ಗೊಂದಲಗಳನ್ನು ಪಕ್ಷದ ಹೈಕಮಾಂಡ್ ಆದಷ್ಟು ಬೇಗ ನಿವಾರಿಸಬೇಕು’ ಎಂದರು.
‘ಈ ವಿಚಾರದಲ್ಲಿ ಸಚಿವ ಸತೀಶ ಜಾರಕಿಹೊಳಿ ನೇರವಾಗಿಯೇ ಹೇಳಿಕೆ ನೀಡಿದ್ದಾರೆ. ಅದಕ್ಕೆ ನನ್ನ ಸಮ್ಮತಿಯೂ ಇದೆ. ಕೆಪಿಸಿಸಿ ಅಧ್ಯಕ್ಷರನ್ನಾಗಿ ಯಾರನ್ನು ಮಾಡಬೇಕು ಎಂಬುದು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ಇಂಥವರನ್ನು ನೇಮಸಿ, ಹೀಗೆಯೇ ಮಾಡಿ ಎಂದು ನಾನು ಹೇಳುವುದಕ್ಕೆ ಬರುವುದಿಲ್ಲ’ ಎಂದು ಹೇಳಿದರು.
‘ಸತೀಶ ಜಾರಕಿಹೊಳಿ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಮಾಡುವಾಗ ಶಾಸಕರ ಅಭಿಪ್ರಾಯವನ್ನೇನೂ ಕೇಳಿರಲಿಲ್ಲ ತಾನೇ? ಈಗಲೂ ಹಾಗೆಯೇ. ಹೈಕಮಾಂಡ್ ಒಬ್ಬರನ್ನು ತೀರ್ಮಾನಿಸಿರುತ್ತದೆ; ಅದನ್ನು ನಾವು ಒಪ್ಪಬೇಕಷ್ಟೆ. ಪಕ್ಷದಿಂದ ಸರ್ಕಾರವೇ ಹೊರತು ಸರ್ಕಾರದಿಂದ ಪಕ್ಷವಲ್ಲ’ ಎಂದರು.
‘ಚುನಾವಣೆ ವೇಳೆ ಪಕ್ಷವು ಜನರಿಗೆ ಹೇಳಿರುವ ಕೆಲಸವನ್ನ ನಾವು ಮಾಡಬೇಕು. ಈಗಿನಂತೆ ಗೊಂದಲಗಳಿದ್ದರೆ ಅದೆಲ್ಲ ಹೇಗಾಗುತ್ತದೆ ಹೇಳಿ?’ ಎಂದು ಕೇಳಿದರು.
‘ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಆ ಜವಾಬ್ದಾರಿ ನಿಭಾಯಿಸುವ ಶಕ್ತಿ ನನಗಿಲ್ಲ’ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.