ADVERTISEMENT

ಬಿಜೆಪಿ ಕಟ್ಟಿ ಹಾಕಲು ಪ್ರಬಲರಿಗೆ ‘ಕೈ’ ಟಿಕೆಟ್‌

ಎರಡನೇ ಪಟ್ಟಿ ತಯಾರಿಸಲು ಕಾಂಗ್ರೆಸ್‌ ಸ್ಕ್ರೀನಿಂಗ್‌ ಸಮಿತಿ ಸಭೆ ಇಂದು

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 18:55 IST
Last Updated 29 ಮಾರ್ಚ್ 2023, 18:55 IST
   

ಬೆಂಗಳೂರು: ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಆಗುತ್ತಿದ್ದಂತೆ ಕಾಂಗ್ರೆಸ್‌ ಕಚೇರಿಯಲ್ಲಿ ಚಟುವಟಿಕೆ ಮತ್ತಷ್ಟು ಬಿರುಸು ಪಡೆದಿದೆ. ಈಗಾಗಲೇ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್‌ ಪ್ರಕಟಿಸಿದ್ದು, ಉಳಿದ 100 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ತಯಾರಿಸಲು ಎರಡನೇ ಸುತ್ತಿನ ಸ್ಕ್ರೀನಿಂಗ್‌ ಸಮಿತಿ ಸಭೆ ಗುರುವಾರ (ಮಾರ್ಚ್‌ 30) ನಡೆಯಲಿದೆ.

ಈ ಮಧ್ಯೆ, ಬಿಜೆಪಿಯ ಪ್ರಮುಖ ನಾಯಕರನ್ನು ಅವರ ಕ್ಷೇತ್ರದಲ್ಲಿಯೇ ಕಟ್ಟಿ ಹಾಕಲು ಕಾಂಗ್ರೆಸ್‌ ನಾಯಕರು ತಂತ್ರ ರೂಪಿಸುತ್ತಿದ್ದಾರೆ. ಎಲ್ಲ ಲೆಕ್ಕಾಚಾರಗಳನ್ನು ಹಾಕಿ, ಅಳೆದುತೂಗಿ ಪ್ರಬಲ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಲು ಯೋಜನೆ ರೂಪಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಸ್ವಯಂ ಗೆಲುವಿಗೆ ಬೆವರು ಸುರಿಸಬೇಕಾದ ಪರಿಸ್ಥಿತಿ ಸೃಷ್ಟಿಸುವುದು ಕಾಂಗ್ರೆಸ್ ನಾಯಕರ ಆಶಯ. ಸಮಬಲದ ಪೈಪೋಟಿ ನೀಡುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಬಿಜೆಪಿ ಪ್ರಮುಖ ನಾಯಕರು ಅನ್ಯ ಕ್ಷೇತ್ರಗಳ ಪ್ರಚಾರಕ್ಕೆ ಹೋಗದಂತೆ ನಿಯಂತ್ರಿಸಬಹುದು ಎನ್ನುವುದು ಕಾಂಗ್ರೆಸ್‌ ನಾಯಕರ ಲೆಕ್ಕಾಚಾರ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಹೊರತುಪಡಿಸಿ ಹಾವೇರಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೂ ಕಾಂಗ್ರೆಸ್‌ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ವಿನಯ ಕುಲಕರ್ಣಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ನಲ್ಲಿ ಚರ್ಚೆ ನಡೆದಿದೆ. ಪಂಚಮಸಾಲಿ ಪಂಗಡಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆದ ಚಳವಳಿಯ ನೇತೃತ್ವ ವಹಿಸಿದ್ದ, ಸಮುದಾಯದ ರಾಜಕೀಯ ನಾಯಕರಲ್ಲಿ ಲಿಂಗಾಯತ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಕೂಡ ಕುಲಕರ್ಣಿ ಅವರನ್ನು ನೆಚ್ಚಿಕೊಂಡಿದೆ.

ADVERTISEMENT

ಅಲ್ಲದೆ, ವಿನಯ್‌ ಕುಲಕರ್ಣಿ ಈ ಹಿಂದೆ ಪ್ರತಿನಿಧಿಸಿದ್ದ ಧಾರವಾಡ ಮತ್ತು ಶಿಗ್ಗಾವಿ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್‌ ಘೋಷಿಸಿಲ್ಲ. ಶಿಗ್ಗಾವಿಯಿಂದ ಬೊಮ್ಮಾಯಿ ವಿರುದ್ಧ ‌ವಿನಯ್ ಕುಲಕರ್ಣಿ ಕಣಕ್ಕಿಳಿಯಬಹುದು ಎಂಬ ಊಹಾಪೋಹಕ್ಕೆ ಇದು ಪುಷ್ಟಿ ನೀಡಿದೆ. 1994ರಿಂದ ಶಿಗ್ಗಾವಿ ಕ್ಷೇತ್ರವನ್ನು ಗೆಲ್ಲದ ಕಾರಣ ಕುಲಕರ್ಣಿ ಅವರನ್ನು ಕಣಕ್ಕಿಳಿಸುವ ಮೂಲಕ ಕ್ಷೇತ್ರವನ್ನು ಕಸಿದುಕೊಳ್ಳಲು ಪಕ್ಷ ಮುಂದಾಗಿದೆ. ಅಲ್ಲದೆ, ಈ ಕ್ಷೇತ್ರದಲ್ಲಿ ಲಿಂಗಾಯತ- ಪಂಚಮಸಾಲಿ ಮತ್ತು ಮುಸ್ಲಿಂ ಮತಗಳು ಸಾಕಷ್ಟು ಇರುವುದರಿಂದ ಕುಲಕರ್ಣಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಉತ್ಸುಕವಾಗಿದೆ. ಬೊಮ್ಮಾಯಿ ಅವರು ಲಿಂಗಾಯತರ ಉಪ ಪಂಗಡವಾದ ಸಾದರ ಪಂಗಡಕ್ಕೆ ಸೇರಿದವರು.

ಇನ್ನು ಶಿವಮೊಗ್ಗ ನಗರ ಕ್ಷೇತ್ರದಿಂದ ಕೆ.ಎಸ್‌. ಈಶ್ವರಪ್ಪ ಅವರಿಗೆ ಬಿಜೆಪಿ ಮತ್ತೆ ಟಿಕೆಟ್‌ ನೀಡಿದರೆ ಅವರ ವಿರುದ್ಧವೂ ಜಿದ್ದಾಜಿದ್ದಿನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಾಯಕರು ಯೋಚಿಸುತ್ತಿದ್ದಾರೆ. ಈಶ್ವರಪ್ಪ ಅಥವಾ ಅವರ ಪುತ್ರ ಕೆ.ಇ. ಕಾಂತೇಶ್‌ ಅವರಿಗೆ ಟಿಕೆಟ್‌ ನೀಡುವುದಕ್ಕೆ ಬಿಜೆಪಿಯ ಮತ್ತೊಬ್ಬ ನಾಯಕ, ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಜುನಾಥ್ ಅವರನ್ನೇ ಪಕ್ಷಕ್ಕೆ ಸೆಳೆದು ಶಿವಮೊಗ್ಗ ನಗರದಿಂದ ಕಣಕ್ಕಿಳಿಸಲು ‘ಕೈ’ ನಾಯಕರು ತಂತ್ರ ಹೆಣೆದಿದ್ದಾರೆ.

ಪುಲಕೇಶಿನಗರದಿಂದ ಹಾಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೇ ಮಣೆ ಹಾಕಲು ಕಾಂಗ್ರೆಸ್‌ ಮುಂದಾಗಿದೆ. ಕಳೆದ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿಯೇ ಅತೀ ಹೆಚ್ಚು ಮತ ಪಡೆದಿರುವ ಅಖಂಡ ಶ್ರೀನಿವಾಸ ಮೂರ್ತಿ ವಿರುದ್ಧ ಕೆ.ಜಿ ಹಳ್ಳಿ, ಡಿ.ಜಿ ಹಳ್ಳಿ ಗಲಭೆಯ ಕಾರಣಕ್ಕೆ ಈ ಬಾರಿ ಮುಸ್ಲಿಂ ಮತದಾರರು ಅಸಮಾಧಾನಗೊಂಡಿದ್ದಾರೆ. ಆದರೂ ಅವರಿಗೇ ಟಿಕೆಟ್‌ ಸಿಗುವುದು ಬಹುತೇಕ ಖಚಿತ. ಸಿ.ವಿ. ರಾಮನ್‌ ನಗರದಿಂದ ಮಾಜಿ ಮೇಯರ್‌ ಸಂಪತ್‌ರಾಜ್‌, ದಾಸರಹಳ್ಳಿಯಿಂದ ಧನಂಜಯ ಅವರ ಹೆಸರು ಮುಂಚೂಣಿಯಲ್ಲಿದೆ.

ಗೆಲ್ಲುವ ಕ್ಷೇತ್ರಗಳಲ್ಲಿ ಮಾತ್ರ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಲು ನಿರ್ಧರಿಸಿರುವ ನಾಯಕರು, ಈ ಉದ್ದೇಶದಿಂದ ಸಮುದಾಯಗಳ ನಾಯಕರ ಮನವೊಲಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದರೆ ಪರ್ಯಾಯ ಅವಕಾಶ ಕಲ್ಪಿಸುವ ಭರವಸೆ ನೀಡಲಾಗಿದೆ. ಹೀಗಾಗಿ, ಮಂಗಳೂರು ದಕ್ಷಿಣ ಕ್ಷೇತ್ರದಿಂದ ಜೆ.ಆರ್‌. ಲೋಬೊ ಅಥವಾ ಐವಾನ್‌ ಡಿಸೋಜ ಬದಲು ಬಿಲ್ಲವ ಸಮುದಾಯದವರಿಗೆ ಟಿಕೆಟ್‌ ನೀಡುವ ಬಗ್ಗೆ ಚರ್ಚೆ ನಡೆದಿದೆ. ಬಿಲ್ಲವ ಮುಖಂಡರೂ, ವಕೀಲರೂ ಆಗಿರುವ ಪದ್ಮರಾಜ್‌ ಆರ್‌. ಅವರ ಹೆಸರು ಮುಂಚೂಣಿಯಲ್ಲಿದೆ ಎಂದೂ ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಬಿಜೆಪಿ ಶಾಸಕರಿಗೆ ಡಿಕೆಶಿ ಕರೆ: ಸಿಎಂ

ಬೆಂಗಳೂರು: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್‌ನ ಎರಡನೇ ಪಟ್ಟಿ ಸಿದ್ದ ಮಾಡುವಾಗ ನಮ್ಮ ಶಾಸಕರಿಗೆ ಕರೆ ಮಾಡಿದ್ದಾರೆ. ನಮ್ಮ ಶಾಸಕ ರನ್ನು ಸಂಪರ್ಕಿಸಿರುವುದು ಅವರ ಪರಿಸ್ಥಿತಿ ತೋರಿಸುತ್ತದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ಕಾಂಗ್ರೆಸ್ ತೊರೆದು ನಮ್ಮ ಪಕ್ಷಕ್ಕೆ ಬಂದವರಿಗೂ ಕರೆ ಮಾಡಿದ್ದಾರೆ. ನಮ್ಮ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ನೀವು ಬಂದರೆ ನಿಮಗೇ ಟಿಕೆಟ್ ಕೊಡುವುದಾಗಿ ಹೇಳಿದ್ದಾರೆ. ನಮ್ಮ ಜತೆ ಇರುವವರು ಬರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

‘ಎರಡೂ ಪಕ್ಷಗಳ ವರಿಷ್ಠರು ನನ್ನನ್ನು ಸಂಪರ್ಕಿಸಿದ್ದಾರೆ’ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಅವರಿಗೆ ಯಾರು ಯಾವಾಗ ಏನು ಕೊಡುಗೆ ನೀಡುತ್ತಾರೆ ಎಂದು ಅವರಿಗೇ ಗೊತ್ತು’ ಎಂದರು.

‘ಡಿ.ಕೆ.ಶಿವಕುಮಾರ್ ಅವರು ಹಲವು ನಾಯಕರನ್ನು ಭೇಟಿ ಮಾಡುತ್ತಿರುವುದು ನಿಜ’ ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.