ADVERTISEMENT

ದೇವೇಗೌಡರೇ ನಿಮ್ಮ ಸಂಖ್ಯೆ ಈಗೆಷ್ಟು: ಸಿದ್ದರಾಮಯ್ಯ

ಮೋದಿ ಎದುರು ನಡಗುವ ಎಚ್‌ಡಿಕೆ, ಜೋಶಿ, ಬೊಮ್ಮಾಯಿ: ಸಿ.ಎಂ ಲೇವಡಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 0:30 IST
Last Updated 20 ಜುಲೈ 2025, 0:30 IST
<div class="paragraphs"><p>ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೊ ಪ್ರದರ್ಶಿಸಿದರು </p></div>

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಫೋಟೊ ಪ್ರದರ್ಶಿಸಿದರು

   

–ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಮೈಸೂರು: ಜೆಡಿಎಸ್ ಶಾಸಕರ ಸಂಖ್ಯೆ ಪ್ರತಿ ಐದು ವರ್ಷಕ್ಕೆ ಕಡಿಮೆ ಆಗುತ್ತಲೇ ಇದೆ. ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ 59 ಸ್ಥಾನ ಗೆದ್ದಿದ್ದೆವು. ದೇವೇಗೌಡರೇ, ಈಗ ಎಷ್ಟಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ADVERTISEMENT

ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಸಾಧನಾ ಸಮಾವೇಶದಲ್ಲಿ, ₹2,578 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ–ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದರು.

‘ಈಗ 18ಕ್ಕೆ ಇಳಿದಿದ್ದೀರಿ. ಮುಂದೆಂದೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲವೆಂದರಿತು ಬಿಜೆಪಿ ಸೇರಿದ್ದೀರಿ’ ಎಂದು ದೇವೇಗೌಡರನ್ನು ಉದ್ದೇಶಿಸಿ ಹೇಳಿದರು.

‘ನೀವೆಂದೂ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದವರಲ್ಲ. ಆಪರೇಷನ್ ಕಮಲದಿಂದ ಅಧಿಕಾರ ಗಿಟ್ಟಿಸಿದ್ದೀರಿ’ ಎಂದು ಬಿಜೆಪಿ ನಾಯಕರನ್ನು ಹಂಗಿಸಿದರು.

‘ಬಿಜೆಪಿ–ಜೆಡಿಎಸ್‌ನಿಂದ ಈ ಬಾರಿ 19 ಸಂಸದರು ಆಯ್ಕೆ ಆಗಿದ್ದೀರಿ. ಕರ್ನಾಟಕದಿಂದ ಸಂಗ್ರಹವಾಗುವ ಸಂಗ್ರಹವಾಗುವ ತೆರಿಗೆ ಪೈಕಿ ಶೇ 15ರಷ್ಟು ಮಾತ್ರ ವಾಪಸ್ ಬರುತ್ತಿದೆ. ಈ ಬಗ್ಗೆ ಮೋದಿ ಎದುರು ಮಾತನಾಡಲು ಕುಮಾರಸ್ವಾಮಿ, ಜೋಶಿ, ಬೊಮ್ಮಾಯಿ ಸಹಿತ ಯಾರಿಗೂ ಧೈರ್ಯವಿಲ್ಲ. ಎಲ್ಲರೂ ಪ್ರಧಾನಿ ಎದುರು ಗಡಗಡನೆ ನಡುಗುತ್ತಾರೆ’ ಎಂದು ಲೇವಡಿ ಮಾಡಿದರು.

‘ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಟೀಕಿಸುವ ಬಿಜೆಪಿ- ಜೆಡಿಎಸ್‌ನವರು ಒಂದೇ ವೇದಿಕೆಗೆ ಬನ್ನಿ. ನೀವೇನು ಮಾಡಿದ್ದೀರಿ, ನಾವೇನು ಮಾಡಿದ್ದೇವೆ ಎಂಬುದನ್ನು ಬಹಿರಂಗವಾಗಿ ಚರ್ಚಿಸೋಣ’ ಎಂದು ಸವಾಲು ಹಾಕಿದರು.

‘ಈ ಸಭೆಗೆ ಜೆಡಿಎಸ್- ಬಿಜೆಪಿಯವರು ಬರಬೇಕಿತ್ತು. ಏನೆಲ್ಲ ಕಾರ್ಯಕ್ರಮಗಳು ನಡೆಯುತ್ತಿವೆ ಎಂಬುದು ಅವರಿಗೆ ಗೊತ್ತಾಗುತ್ತಿತ್ತು. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿ ಆಗಿದ್ದರೆ ಈಗ ₹2,578 ಕೋಟಿ ವೆಚ್ಚದ ಯೋಜನೆಗಳಿಗೆ ಅನುದಾನ ನೀಡಲು ಆಗುತ್ತಿತ್ತೆ’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್‌ನ ಕಾರ್ಯಕರ್ತರೂ ಸೇರಿದಂತೆ ಎಲ್ಲರಿಗೂ ಗ್ಯಾರಂಟಿ ಯೋಜನೆಯ ಲಾಭ ತಲುಪುತ್ತಿದೆ. ಅದರಲ್ಲಿ ಯಾವ ಧರ್ಮ– ಜಾತಿಯೂ ಇಲ್ಲ. ಇದನ್ನು ಟೀಕಿಸುವ ಬಿಜೆಪಿಯವರಿಗೆ ನಾಚಿಕೆ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

ಗ್ಯಾರಂಟಿ ದೇಶಕ್ಕೆ ಮಾದರಿ:

'ನಮ್ಮ ಪಂಚ ಗ್ಯಾರಂಟಿ ಇಡೀ ದೇಶಕ್ಕೆ ಮಾದರಿ. ಈ ಯೋಜನೆ ಟೀಕಿಸಿದ್ದ ಪ್ರಧಾನಿಯೇ ಬಿಹಾರ, ಮಧ್ಯಪ್ರದೇಶ ಮೊದಲಾದ ರಾಜ್ಯಗಳಲ್ಲಿ ಈಗ ಗ್ಯಾರಂಟಿ ಘೋಷಣೆಗಳ ಮೂಲಕ ಜನರನ್ನು ಸೆಳೆಯಲು ಹೊರಟಿದ್ದಾರೆ' ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

‘ದಾನ- ಧರ್ಮ ಮಾಡುವ ಕೈಯನ್ನು ಜನರು ಅಧಿಕಾರಕ್ಕೆ ತಂದಿದ್ದು, ಗ್ಯಾರಂಟಿ ಯೋಜನೆಗಳ ಮೂಲಕ ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ. ಸರ್ಕಾರದ ಖಜಾನೆ ಖಾಲಿ ಎಂಬ ವಿರೋಧ ಪಕ್ಷಗಳ ಟೀಕೆ ಸರಿಯಲ್ಲ. ನಾವು ಭಾವನೆಗಳ ಮೇಲೆ ರಾಜಕೀಯ ಮಾಡುತ್ತಿಲ್ಲ. ಬದುಕಿಗೆ ಬೇಕಾದ ರಾಜಕೀಯ ಮಾಡುತ್ತಿದ್ದೇವೆ’ ಎಂದರು.

‘2028ರಲ್ಲಿ ಜನರು ಇದಕ್ಕಿಂತ ಹೆಚ್ಚಿನ ಆಶೀರ್ವಾದ ಮಾಡಿ ಮತ್ತೆ ಅಧಿಕಾರಕ್ಕೆ ತರಬೇಕು. ಖರ್ಗೆ- ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ನಾಡಿನ ಅಭಿವೃದ್ಧಿಯ ಕೆಲಸ ಮಾಡಲಿದ್ದೇವೆ’ ಎಂದು ತಿಳಿಸಿದರು.

ಗೃಹ ಸಚಿವ ಡಾ.ಜಿ. ಪರಮೇಶ್ವರ, ಸಚಿವರಾದ ಡಾ.ಎಚ್.ಸಿ.‌ಮಹದೇವಪ್ಪ, ಕೆ. ವೆಂಕಟೇಶ್, ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಶರಣಬಸಪ್ಪ ದರ್ಶನಾಪುರ, ಶಿವರಾಜ ತಂಗಡಗಿ, ರಹೀಂ ಖಾನ್, ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಡಿ.ರವಿಶಂಕರ್, ಕೆ. ಹರೀಶ್ ಗೌಡ, ಟಿ.‌ ಗುರುಮೂರ್ತಿ, ಸಿ.ಪುಟ್ಟರಂಗಶೆಟ್ಟಿ, ಎಚ್‌.ಎಂ.ಗಣೇಶ ಪ್ರಸಾದ್, ಎ.ಆರ್.‌ ಕೃಷ್ಣಮೂರ್ತಿ, ದರ್ಶನ್ ಧ್ರುವನಾರಾಯಣ, ಚಾಮರಾಜನಗರ ಸಂಸದ ಸುನೀಲ್‌ ಬೋಸ್, ವಿಧಾನಪರಿಷತ್ ಸದಸ್ಯರಾದ ಡಿ.ತಿಮ್ಮಯ್ಯ, ಪುಟ್ಟಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮ್ಮದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಪಾಲ್ಗೊಂಡರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡ ಜನಸ್ತೋಮ – –ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.
ಯಾವುದೇ ಯೋಜನೆ ಬಂದರೂ‌ ಸಿದ್ದರಾಮಯ್ಯ ಮೊದಲ ಆದ್ಯತೆ‌ ಕೊಡುವುದು ತವರು ಮೈಸೂರಿಗೆ. ಹಣಕಾಸು ಸಚಿವರಾಗಿ ಅವರು ಹೆಚ್ಚು ಅನುದಾನ ನೀಡಿದ್ದಾರೆ. ಬಿಜೆಪಿಯವರು ಬರೀ ಟೀಕಾಚಾರ್ಯರು
ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಸಿದ್ದರಾಮಯ್ಯ ಹೋರಾಟದ ರಾಜಕೀಯದ ಮೂಲಕ ಸಮ ಸಮಾಜ ನಿರ್ಮಾಣ ಮಾಡುತ್ತಿದ್ದು ಅದಕ್ಕೆ ಪ್ರೇರಣೆಯಾಗಿ ಕಾಂಗ್ರೆಸ್ ಸರ್ಕಾರ ನಿಂತಿದೆ
ಡಾ.ಎಚ್.ಸಿ. ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.