ADVERTISEMENT

2 ವರ್ಷ ಪೂರೈಸಿದ ಬಳಿಕ ಸಂಪುಟ ಪುನರ್‌ರಚನೆ: ಬಹಿರಂಗ ಹೇಳಿಕೆಗೆ ‘ಕೈ’ ಕಮಾಂಡ್ ತಡೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 16:35 IST
Last Updated 10 ಜನವರಿ 2025, 16:35 IST
ಕಾಂಗ್ರೆಸ್‌ ಪಕ್ಷದ ಚಿನ್ಹೆ
ಕಾಂಗ್ರೆಸ್‌ ಪಕ್ಷದ ಚಿನ್ಹೆ   

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿನ ಔತಣಕೂಟ ರಾಜಕೀಯ, ಕೆಲ ಸಚಿವರು, ಶಾಸಕರು ಹಾಗೂ ಪಕ್ಷದ ನಾಯಕರ ಬಹಿರಂಗ ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪಕ್ಷದ ಹೈಕಮಾಂಡ್‌, ಮೌನವಹಿಸುವಂತೆ ತಾಕೀತು ಮಾಡಿದೆ. ‘ಸರ್ಕಾರ ಎರಡು ವರ್ಷ ಪೂರೈಸುವವರೆಗೂ ಸಂಪುಟ ಪುನರ್‌ರಚನೆ ಇಲ್ಲ’ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.

‘ಎರಡು ವರ್ಷಗಳ ನಂತರ ಸಂಪುಟ ಪುನರ್‌ರಚನೆಯಷ್ಟೆ ಆಗುತ್ತದೆಯೋ ಅಥವಾ ಮುಖ್ಯಮಂತ್ರಿ ಬದಲಾವಣೆಯೂ ಇರುತ್ತದೆಯೋ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ, ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಬಹಿರಂಗ ಹೇಳಿಕೆಗಳನ್ನು ನೀಡದಂತೆ, ಪಕ್ಷ ಹಾಗೂ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ’ ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿರುವ ಹೈಕಮಾಂಡ್‌, ‘ಸರ್ಕಾರ ಎರಡು ವರ್ಷ  ಪೂರೈಸುವವರೆಗೂ ಸಂಪುಟ ಪುನರ್‌ರಚನೆ ವಿಷಯ ಚರ್ಚಿಸಬಾರದು. ಜೂನ್‌–ಜುಲೈ ವೇಳೆಗೆ ಈಗಿರುವ ಎಲ್ಲ ಸಚಿವರ ಕಾರ್ಯವೈಖರಿಯನ್ನು ಇನ್ನೊಮ್ಮೆ ಮೌಲ್ಯಮಾಪನ ಮಾಡಿದ ನಂತರ ಯಾರನ್ನು ಕೈಬಿಡಬೇಕು, ಯಾರನ್ನು ಸೇರ್ಪಡೆ ಮಾಡಬೇಕು ಎನ್ನುವ ವಿಷಯ ಚರ್ಚೆ ಮಾಡೋಣ. ಆಗ ಕೆಲವರನ್ನು ಸಂಪುಟದಿಂದ ಕೈಬಿಟ್ಟರೂ ಎರಡು ವರ್ಷಗಳು ಅವಕಾಶ ನೀಡಿದ ಸಮಾಧಾನ ಅವರಿಗೆ ಇರುತ್ತದೆ’ ಎಂದು ಪ್ರತಿಪಾದಿಸಿದೆ ಎಂದು ಗೊತ್ತಾಗಿದೆ.

ADVERTISEMENT

ಕಾಂಗ್ರೆಸ್‌ ಪಕ್ಷದ ರಾಜ್ಯ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸದ್ಯದಲ್ಲೇ ಬೆಂಗಳೂರಿಗೆ ಬರಲಿದ್ದು, ಅಲ್ಲಿ ಈ ಎಲ್ಲ ವಿಷಯಗಳನ್ನೂ ಮುಖ್ಯಮಂತ್ರಿ ಸೇರಿದಂತೆ ಎಲ್ಲ ನಾಯಕರಿಗೂ ತಲುಪಿಸಲಿದ್ದಾರೆ. ಅಲ್ಲಿಯವರೆಗೂ ಔತಣಕೂಟಗಳ ಆಯೋಜನೆಗೂ ಅವಕಾಶ ಇರುವುದಿಲ್ಲ ಎಂದು ಎಐಸಿಸಿ ಮೂಲಗಳು ಖಚಿತಪಡಿಸಿವೆ.

ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಗೆಲುವಿನ ನಂತರ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಸಂಪುಟ ಪುನರ್‌ರಚನೆಯ ವಿಷಯಗಳು ಮತ್ತೆ ಮುನ್ನೆಲೆಗೆ ಬಂದಿದ್ದವು.

‘2023ರ ವಿಧಾನಸಭಾ ಚುನಾವಣೆಯ ಫಲಿತಾಂಶ ನಂತರ ಅಧಿಕಾರ ಹಂಚಿಕೆ ಕುರಿತು ಮಾತುಕತೆ ನಡೆದಿತ್ತು’ ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿಯೂ ಆಗಿರುವ ಡಿ.ಕೆ. ಶಿವಕುಮಾರ್‌ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಈ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದರು. ನಂತರ ಚರ್ಚೆ ಅಲ್ಲಿಗೆ ನಿಂತಿತ್ತು.

ಹಳೇ ಪ್ರಸಂಗದ ನೆನಪು....

ಸಂಪುಟ ಪುನರ್‌ರಚನೆ ತಕ್ಷಣವೇ ಆಗಲಿದೆ ಎನ್ನುವ ಸುದ್ದಿಗಳೂ ಹಬ್ಬಿದ್ದವು. ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವಕ್ಕೆ ಪಕ್ಷದ ವರಿಷ್ಠರಿಗೆ ಆಹ್ವಾನ ನೀಡಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ದೆಹಲಿಗೆ ಭೇಟಿದ್ದರು. ಸಂಪುಟದಿಂದ ಕೈಬಿಡುವ, ಸೇರ್ಪಡೆಯಾಗುವ ಸಚಿವರು, ಶಾಸಕರ ಹೆಸರುಗಳು ಆಗ ಹರಿದಾಡಿದ್ದವು. ನಂತರ ಇಬ್ಬರೂ ಈ ಸುದ್ದಿಯನ್ನು ನಿರಾಕರಿಸಿ, ‘ಹೈಕಮಾಂಡ್‌ ಮುಂದೆ ಈ ವಿಷಯ ಚರ್ಚೆಗೆ ಬಂದಿಲ್ಲ, ಮುಂದೆ ನೋಡೋಣ’ ಎಂದಿದ್ದರು. 

ಬೆಳಗಾವಿ ಅಧಿವೇಶನದ ವೇಳೆ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಸಂತಾಪ ಸೂಚಿಸುವ ನಿರ್ಣಯದ ಮೇಲೆ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ಹಳೆಯ ಪ್ರಸಂಗವೊಂದನ್ನು ನೆನಪಿಸಿ ‘ಅಧಿಕಾರವನ್ನು ಒದ್ದು ಕಿತ್ತುಕೊಳ್ಳಬೇಕು’ ಎಂದು ಹೇಳಿದ್ದು ನಾನಾರೀತಿಯ ಚರ್ಚೆಗೆ ಗ್ರಾಸ ಒದಗಿಸಿತ್ತು.

ಹೊಸ ವರ್ಷ ಸಂಭ್ರಮಾಚರಣೆ ಹೊತ್ತಿನಲ್ಲಿ ಡಿ.ಕೆ. ಶಿವಕುಮಾರ್ ಅವರು ವಿದೇಶಕ್ಕೆ ತೆರಳಿದ್ದರು. ಆ ವೇಳೆ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮನೆಯಲ್ಲಿ ಹಮ್ಮಿಕೊಂಡಿದ್ದ ‘ಔತಣ ಕೂಟ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಿಂದುಳಿದ–ಪರಿಶಿಷ್ಟ ಸಮುದಾಯವನ್ನು ಪ್ರತಿನಿಧಿಸುವ ಸಚಿವರು ಭಾಗವಹಿಸಿದ್ದರು. ಕೆಪಿಸಿಸಿ ಅಧ್ಯಕ್ಷರು ಊರಿನಲ್ಲಿ ಇಲ್ಲದಾಗ, ನಡೆದ ಔತಣ ಕೂಟವು ಕಾಂಗ್ರೆಸ್‌ನೊಳಗಿನ ‘ಆಂತರಿಕ ಸಂಘರ್ಷ’ವನ್ನು ಬಯಲಿಗೆ ತಂದಿತ್ತು. ಆ ಬೆನ್ನಲ್ಲೇ, ಶಿವಕುಮಾರ್  ವಾಪಸ್ ಬಂದಿದ್ದರು. ದೆಹಲಿಯಲ್ಲೇ ಎರಡು ದಿನ ಮೊಕ್ಕಾಂ ಮಾಡಿದ್ದ ಅವರು, ಪಕ್ಷದಲ್ಲಿನ ಬೆಳವಣಿಗೆಯನ್ನು ವರಿಷ್ಠರ ಗಮನಕ್ಕೆ ತಂದಿದ್ದರು. ಏತನ್ಮಧ್ಯೆ, ಗೃಹ ಸಚಿವ ಜಿ. ಪರಮೇಶ್ವರ ಮನೆಯಲ್ಲಿ ಹಮ್ಮಿಕೊಂಡಿದ್ದ ಔತಣಕೂಟಕ್ಕೆ ವರಿಷ್ಠರು ತಡೆ ಒಡ್ಡಿದ್ದರು. ಇದು, ಹಿಂದುಳಿದ–ಪರಿಶಿಷ್ಟ ಸಮುದಾಯವನ್ನು ಪ್ರತಿನಿಧಿಸುವ ಸಚಿವರನ್ನು ಕೆರಳಿಸಿತ್ತು. ಈ ಭಿನ್ನಮತ, ತಾರಕಕ್ಕೇರುತ್ತಿದ್ದಂತೆ ವರಿಷ್ಠರು ಮಧ್ಯ ಪ್ರವೇಶಿಸಿದ್ದಾರೆ. 

ಔತಣಕೂಟ ತಪ್ಪಲ್ಲ: ಪ್ರಿಯಾಂಕ್ ಖರ್ಗೆ

‘ಪರಿಶಿಷ್ಟ ಸಮುದಾಯದ ಸಮಸ್ಯೆಗಳ ಕುರಿತು ಚರ್ಚಿಸಲು ಔತಣಕೂಟಗಳನ್ನು ಆಯೋಜನೆ ಮಾಡುವುದು ತಪ್ಪಲ್ಲ, ಗೃಹ ಸಚಿವ ಜಿ. ಪರಮೇಶ್ವರ ಅವರು ಬಹಿರಂಗವಾಗಿಯೇ ಎಲ್ಲರಿಗೂ ಆಹ್ವಾನ ನೀಡಿದ್ದರು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಸಮರ್ಥಿಸಿಕೊಂಡರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ಚಿತ್ರದುರ್ಗ ಸಮಾವೇಶದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಕಾಂಗ್ರೆಸ್‌ ನೀಡಿದ್ದ ಭರವಸೆ ಈಡೇರಿಸಲು ಕಾರ್ಯಸೂಚಿ ಸಿದ್ಧಪಡಿಸಬೇಕಿದೆ. ಇಂತಹ ವಿಷಯಗಳನ್ನು ಸಂಪುಟ ಸಭೆಯಲ್ಲಿ ಚರ್ಚಿಸಬಹುದಲ್ಲ ಎನ್ನುವ ಕೆಲವರ ಹೇಳಿಕೆಯೂ ಸರಿಯಲ್ಲ, ಸಂಪುಟ ಸಭೆಯಲ್ಲಿ ಶಾಸಕರು ಇರುವುದಿಲ್ಲ. ಹಾಗಾಗಿಯೇ, ಇಂತಹ ಸಭೆಗಳು ಅನಿವಾರ್ಯ ಎಂದರು.

ಔತಣ ಕೂಟಕ್ಕೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್‌ ಬ್ರೇಕ್‌ ಹಾಕಿಲ್ಲ. ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರೂ ಭಾಗವಹಿಸುತ್ತಿರುವ ಕಾರಣಕ್ಕೆ ಸಭೆ ಮುಂದೂಡಲಾಗಿದೆ ಅಷ್ಟೆ ಎಂದು ಮಾಹಿತಿ ನೀಡಿದರು. 

‘2028ರಲ್ಲಿ ಡಿಕೆಶಿ ಸಿ.ಎಂ ಆಗಲಿ’
‘ವಿಧಾನಸಭೆಗೆ 2028ರಲ್ಲಿ ನಡೆಯುವ ಚುನಾವಣೆ ಯನ್ನು ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲೇ ನಡೆಸೋಣ. ಬಹಮತ ಪಡೆದ ನಂತರ ಐದು ವರ್ಷ ಅವರೇ ಮುಖ್ಯಮಂತ್ರಿ ಆಗಲಿ’ ಎಂದು ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಹೇಳಿದರು. ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಶಿವಕುಮಾರ್‌ ಅವರು ಪಕ್ಷದ ನಾಯಕ. ಅವರು ಮುಖ್ಯಮಂತ್ರಿ ಯಾಗಲು ಯಾರ ತಕರಾರೂ ಇಲ್ಲ. ಈಗ 5 ವರ್ಷ ಸಿದ್ದರಾಮಯ್ಯ ಅವರೇ ಮುಂದುವರಿಯಲಿ. ಎರಡೂವರೆ ವರ್ಷದ ಅಧಿಕಾರ ಹಂಚಿಕೆ ಸರಿಯಲ್ಲ’ ಎಂದರು.

ಐದು ವರ್ಷವೂ ಸಿದ್ದರಾಮಯ್ಯ ಸಿ.ಎಂ: ಎಂ.ಬಿ.ಪಾಟೀಲ

ಹೊಸಪೇಟೆ (ವಿಜಯನಗರ): ‘ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಸಿದ್ದರಾಮಯ್ಯ ಅವರೇ ಪೂರ್ತಿ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ’ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ‘ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಬಗ್ಗೆ ಒಪ್ಪಂದ ಆಗಿರುವ ಬಗ್ಗೆ ಮಾಹಿತಿ ನನಗೂ ಮತ್ತು ಸಿದ್ದರಾಮಯ್ಯ ಅವರಿಗೂ ಇಲ್ಲ’ ಎಂದರು.

‘ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಪಕ್ಷದ ಹೈಕಮಾಂಡ್ ನಿರ್ಧಾರ. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅತ್ಯುತ್ತಮ
ಕೆಲಸ ಮಾಡಿದ್ದಾರೆ. ಉಪ
ಮುಖ್ಯಮಂತ್ರಿ ಅಲ್ಲದೇ ಪ್ರಮುಖ ಖಾತೆಗಳನ್ನು ಹೊಂದಿರುವ ಅವರು ಕಾರ್ಯ ಒತ್ತಡದ ಬಗ್ಗೆ ಈಗಾಗಲೇ ಹೇಳಿಕೊಂಡಿದ್ದಾರೆ’ ಎಂದರು.

‘ಕಾಂಗ್ರೆಸ್ ಆಪರೇಷನ್ ಹಸ್ತ ಮಾಡುವುದಿಲ್ಲ. ಬಿಜೆಪಿ ಮತ್ತು ಜೆಡಿಎಸ್‌ನ ಹಲವು ಶಾಸಕರು ಪಕ್ಷ ಸೇರಲು ತುದಿಗಾಲಲ್ಲಿ ಇದ್ದಾರೆ. ಮಕರ ಸಂಕ್ರಾಂತಿ ಬಳಿಕ ಏನಾದರೂ ಆಗಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.