ADVERTISEMENT

ಕಾಂಗ್ರೆಸ್‌ನಲ್ಲಿ ಮೂಲ– ವಲಸಿಗರ ನಡುವೆ ಗುದ್ದಾಟ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 20:12 IST
Last Updated 18 ಸೆಪ್ಟೆಂಬರ್ 2019, 20:12 IST
   

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಶಾಸಕ ಜಿ.ಪರಮೇಶ್ವರ ನಡುವಿನ ಭಿನ್ನಮತ ಮತ್ತಷ್ಟು ಬಿರುಸು ಪಡೆದುಕೊಂಡಿದ್ದು, ಶಾಸಕಾಂಗ ಪಕ್ಷದ ಸಭೆಯಿಂದ ಪರಮೇಶ್ವರ ದೂರ ಉಳಿಯುವ ಮೂಲಕ ಸಿಟ್ಟು ಹೊರಹಾಕಿದ್ದಾರೆ.

‘ಪಕ್ಷದಲ್ಲಿ ಅಧಿಕಾರ ಹಿಡಿಯಲು ಮೂಲ ಹಾಗೂ ವಲಸಿಗರ ನಡುವೆ ಮತ್ತೊಮ್ಮೆ ಪೈಪೋಟಿ ಜೋರಾಗಿದ್ದು, ಸಿದ್ದರಾಮಯ್ಯ ಹಿಡಿತ ತ‍ಪ್ಪಿಸುವ ಪ್ರಯತ್ನ ನಡೆದಿದೆ. ಆ ಕಾರಣಕ್ಕಾಗಿಯೇ ಪರಮೇಶ್ವರ ಅವರು ಸಭೆಯಿಂದ ದೂರ ಉಳಿದಿದ್ದಾರೆ. ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದ್ದು ಗೊತ್ತಿದ್ದರೂ ದೆಹಲಿಗೆ ತೆರಳಿದ್ದು ಏಕೆ? ಮಂಗಳವಾರವೇ ಸೋನಿಯಾ ಭೇಟಿ ಮುಗಿದ್ದರೂ ಬೆಂಗಳೂರಿಗೆ ಯಾಕೆ ವಾಪಸಾಗಿಲ್ಲ. ಇದುಏನನ್ನು ಸೂಚಿಸುತ್ತದೆ’ ಎಂದು ಪಕ್ಷದ ನಾಯಕರೊಬ್ಬರು ಪ್ರಶ್ನಿಸುತ್ತಾರೆ.

ಈ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯುವ ಅಗತ್ಯ ಏನಿತ್ತು? ನೇರವಾಗಿ ಪ್ರತಿಭಟನೆಗೆ ಬರುವಂತೆ ಶಾಸಕರಿಗೆ ಕರೆಕೊಟ್ಟು, ಅಲ್ಲೇ ಎಲ್ಲ ವಿಚಾರ ಪ್ರಸ್ತಾಪಿಸಬಹುದಿತ್ತು. ಅದು ಬಿಟ್ಟು ಸಭೆ ಏಕೆ ಕರೆದರು? ಈಚೆಗೆ ದೆಹಲಿ ಭೇಟಿ ಸಮಯದಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾಭೇಟಿಗೆ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಪಕ್ಷದ ಹೈಕಮಾಂಡ್ ತಮ್ಮನ್ನು ನಿರ್ಲಕ್ಷ್ಯಿಸುತ್ತಿದೆ ಎಂಬ ಭಾವನೆ ಮೂಡಿತ್ತು. ಈ ಹಿನ್ನೆಲೆಯಲ್ಲೇ
ಶಾಸಕರ ಸಭೆ ಕರೆದು, ತಮ್ಮ ಶಕ್ತಿ ಪ್ರದರ್ಶಿಸುವ ಮೂಲಕ ದೆಹಲಿ ನಾಯಕರಿಗೆ ಸಂದೇಶ ರವಾನಿಸಿದ್ದಾರೆ ಎಂದು ಪಕ್ಷದ ಆಂತರಿಕ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ADVERTISEMENT

ಉಪಚುನಾವಣೆ ಸಿದ್ಧತೆ ಸೇರಿದಂತೆ ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದಿದ್ದ ಸಭೆಗಳಿಂದ ದೂರ ಉಳಿದಿದ್ದ ಪರಮೇಶ್ವರ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಮಾಡಿ, ರಾಜ್ಯದ ರಾಜಕೀಯ ಪರಿಸ್ಥಿತಿ ವಿವರಿಸಿದ್ದಾರೆ. ಲೋಕಸಭೆ ಚುನಾವಣೆ ಸೋಲಿಗೆ ಕಾರಣ, ಮೈತ್ರಿ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಬೆಂಬಲಿಗರು ಕೈ ಜೋಡಿಸಿದ್ದು, ನಂತರ ಪಕ್ಷಕ್ಕೆ ಆಗಿರುವ ಹಿನ್ನಡೆ ಬಗ್ಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ದಲಿತರು ಬಿಜೆಪಿಯತ್ತ ವಾಲುತ್ತಿದ್ದಾರೆ ಎಂಬ ಭಾವನೆ ಮೂಡಿದ್ದು, ಆ ಸಮುದಾಯವನ್ನು ಹಿಡಿದಿಟ್ಟುಕೊಳ್ಳಲು ದಲಿತ ಮುಖಂಡರಿಗೆ ಪಕ್ಷದಲ್ಲಿ ಅಧಿಕಾರ ನೀಡುವಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಈಗಾಗಲೇ ಪಕ್ಷದ ಅಧ್ಯಕ್ಷನಾಗಿ ಕೆಲಸ ಮಾಡಿದ್ದು, ಪ್ರಸ್ತುತ ಬೇರೆ ಜವಾಬ್ದಾರಿ ಕೊಡಿ. ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಿ, ನನಗೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಿದರೆ ದಲಿತ ಸಮುದಾಯಕ್ಕೆ ಅವಕಾಶ ಕೊಟ್ಟಂತಾಗುತ್ತದೆ. ಪಕ್ಷ ಸಂಘಟನೆ, ಮುಂಬರುವ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಜವಾಬ್ದಾರಿ ಹಂಚಿಕೆ ಮಾಡುವಂತೆ ಸೋನಿಯಾಗೆ ಮನವಿ ಮಾಡಿದ್ದಾರೆ’ ಎನ್ನಲಾಗಿದೆ.

ರಾಮಲಿಂಗಾರೆಡ್ಡಿ ಗೈರು: ಹಿರಿಯ ಶಾಸಕರಾಮಲಿಂಗಾರೆಡ್ಡಿ ಸಭೆಗೆ ಗೈರಾಗಿದ್ದರು. ‘ಬೆಂಗಳೂರಿನಲ್ಲಿ ಇರಲಿಲ್ಲ. ಹಾಗಾಗಿ ಬಂದಿರಲಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

**

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾದ ಶಾಸಕ ಪರಮೇಶ್ವರ

ನವದೆಹಲಿ: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯ ಕುರಿತು ಮಾಹಿತಿ ಲಭ್ಯವಾಗದ ಕಾರಣ ಹಾಜರಾಗಲು ಸಾಧ್ಯವಾಗಿಲ್ಲ. ಸಭೆಯಲ್ಲಿ ಭಾಗವಹಿಸದೇ ಇರುವುದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಶಾಸಕ ಜಿ.ಪರಮೇಶ್ವರ ತಿಳಿಸಿದರು.

ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಘಟಕದಲ್ಲಿ ಮೂಲ ಕಾಂಗ್ರೆಸ್ಸಿಗರು, ಅನ್ಯ ಪಕ್ಷಗಳಿಂದ ಬಂದವರು ಎಂಬ ಭಾವನೆ ಇಲ್ಲ. ಸಭೆಗೆ ಗೈರಾಗಿದ್ದಕ್ಕೆ ಯಾವುದೇ ಕಾರಣಗಳಿಲ್ಲ. ರಾಜ್ಯದ ಮುಖಂಡರೊಂದಿಗೆ ನಾನು ದೆಹಲಿಯಲ್ಲಿ ಗುಪ್ತ ಸಭೆ ನಡೆಸಿಲ್ಲ’ ಎಂದರು.

‘ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮುಖಂಡ ಅಹಮದ್‌ ಪಟೇಲ್‌ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದ ಸ್ಥಿತಿಗತಿ ಕುರಿತು ಚರ್ಚಿಸಿದ್ದೇನೆ’ ಎಂದು ವಿವರಿಸಿದರು.

‘ವರಿಷ್ಠರೊಂದಿಗಿನ ಭೇಟಿಯ ವೇಳೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಬೇಡಿಕೆ ಇರಿಸಿಲ್ಲ. ಆದರೆ, ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಿದ್ಧ’ ಎಂದ ಅವರು, ‘ಸಿದ್ದರಾಮಯ್ಯ ಅವರ ಮೇಲೆ ದ್ವೇಷ ಇಲ್ಲ. ಸೋನಿಯಾ ಅವರು ಸಿದ್ದರಾಮಯ್ಯ ಅವರಿಗೆ ಭೇಟಿಗೆ ಅವಕಾಶ ನೀಡದಿರುವ ಬಗ್ಗೆಯೂ ನನಗೆ ಗೊತ್ತಿಲ್ಲ’ ಎಂದು ಸ್ಪ‌ಷ್ಟಪಡಿಸಿದರು.

ಪಕ್ಷದ ಸಿದ್ಧಾಂತ ಒಪ್ಪಿ ಬಂದವರಿಗೆ ಸಮಾನ ಅವಕಾಶ ನೀಡಲಾಗಿದೆ. ಇಲ್ಲಿ ಯಾರೂ ಹೆಚ್ಚು– ಕಡಿಮೆ ಎಂಬ ಭಾವನೆ ಇಲ್ಲ. ಆದರೂ ಮುಖಂಡರ ನಡುವೆ ಬಿರುಕು ಮೂಡಿಸುವ ಷಡ್ಯಂತ್ರ ನಡೆದಿದೆ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.