ADVERTISEMENT

ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್‌ ಸರ್ಕಾರ ಪತನ: ಶಾಸಕ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 13:15 IST
Last Updated 1 ಫೆಬ್ರುವರಿ 2024, 13:15 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ    

ಹಾವೇರಿ: ‘ಗ್ಯಾರಂಟಿ ಸೌಲಭ್ಯ ಸಿಗದ ಜನರು ಕಾಂಗ್ರೆಸ್‌ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳೇ ಕಾಂಗ್ರೆಸ್‌ಗೆ ತಿರುಗುಬಾಣವಾಗಲಿದ್ದು, ಲೋಕಸಭೆ ಚುನಾವಣೆ ನಂತರ ರಾಜ್ಯ ಸರ್ಕಾರ ಬಿದ್ದು ಹೋಗಲಿದೆ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. 

ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ರಾಜ್ಯದಲ್ಲಿ ಕಾಂಗ್ರೆಸ್‌ ಸಚಿವರೂ ಧೈರ್ಯ ತೋರುತ್ತಿಲ್ಲ. ಮತ್ತೊಂದು ಕಡೆ ‘ಇಂಡಿಯಾ’ ಒಕ್ಕೂಟ ಮುರಿದು ಬೀಳುತ್ತಿದೆ. ರಾಜ್ಯದಲ್ಲಿ 28 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ದೇಶದ ಸರ್ವಾಂಗೀಣ ವಿಕಾಸಕ್ಕಾಗಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ADVERTISEMENT

ರೈತರಿಗೆ ಮಾರಕವಾದ ಕಾಂಗ್ರೆಸ್:

‘ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ತಕ್ಷಣ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರಾಜ್ಯ ಸರ್ಕಾರ ರೈತರಿಗೆ ನೀಡುತ್ತಿದ್ದ ₹4 ಸಾವಿರ ನಿಲ್ಲಿಸಿದರು. ರೈತರ ವಿದ್ಯಾನಿಧಿ ಮತ್ತು ರೈತಶಕ್ತಿ ಯೋಜನೆಯನ್ನು ಸ್ಥಗಿತಗೊಳಿಸಿದರು. ರೈತರ ಪಾಲಿಗೆ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ’ ಎಂದು ಆರೋಪಿಸಿದರು. 

ಆತ್ಮಹತ್ಯೆ ಹೆಚ್ಚಳ:

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ 500ಕ್ಕೂ ಹೆಚ್ಚು ರೈತ ಆತ್ಮಹತ್ಯೆಗಳಾಗಿವೆ. ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಸಮರ್ಪಕವಾಗಿ ಬರ ಪರಿಹಾರ ನೀಡದೆ, ಕೇವಲ ₹2 ಸಾವಿರ ನೀಡುತ್ತಿದೆ. ಆದರೆ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹10 ಸಾವಿರ ಕೋಟಿ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಘೋಷಿಸುತ್ತಾರೆ’ ಎಂದು ಕುಟುಕಿದರು. 

‘ಹಣ–ಹೆಂಡ ಹಂಚಿ ಅಧಿಕಾರಕ್ಕೆ ಬರುತ್ತಿದ್ದ ಕಾಂಗ್ರೆಸ್‌ ಈ ಬಾರಿ ಗ್ಯಾರಂಟಿ ಹೆಸರಿನಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಈ ಗ್ಯಾರಂಟಿ ಯೋಜನೆಗಳನ್ನು ಪ್ರಚಾರ ಮಾಡಿದ್ದಕ್ಕೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಡದಲ್ಲಿ ಕಾಂಗ್ರೆಸ್‌ ನೆಲಕಚ್ಚಿತು. ಈಗ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತರೆ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುತ್ತವೆ ಎಂದು ಮುಖ್ಯಮಂತ್ರಿಯಾದಿಯಾಗಿ ಕಾಂಗ್ರೆಸ್‌ ನಾಯಕರು ಮತದಾರರಿಗೆ ಧಮಕಿ ಹಾಕುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು. 

ಅಭಿವೃದ್ಧಿ ಶೂನ್ಯ:

‘ಕಾಂಗ್ರೆಸ್ಸಿನ ಯಾವೊಬ್ಬ ಶಾಸಕನಿಗೂ ಕ್ಷೇತ್ರದ ಅಭಿವೃದ್ಧಿಗಾಗಿ ₹50 ಕೋಟಿ ಕೊಟ್ಟಿಲ್ಲ. 8 ತಿಂಗಳಾದರೂ ಒಂದೇ ಒಂದು ಅಭಿವೃದ್ಧಿ ಕಾರ್ಯ ನಡೆದಿಲ್ಲ. ‘ಗರೀಬಿ ಹಠಾವೋ’ ಎಂದು ಹೇಳುತ್ತಾ ದೇಶವನ್ನು 50 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್‌ ಬಡತನ ನಿವಾರಣೆ ಮಾಡಲಿಲ್ಲ. ಬಡವರು, ಅನಕ್ಷರಸ್ಥರು ಇದ್ದರೆ ಗೆಲುವು ಸುಲಭ ಎಂಬುದು ಕಾಂಗ್ರೆಸ್‌ ನಾಯಕರಿಗೆ ಗೊತ್ತಿದೆ. ಕಾಂಗ್ರೆಸ್‌ನ ಬಣ್ಣ ಬಣ್ಣದ ಮಾತಿಗೆ ಮೋಸ ಹೋದ ಜನ ಈ ಬಾರಿ ಬಿಜೆಪಿ ಗೆಲ್ಲಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.

ಎಲ್ಲರಿಗೂ ಉಚಿತ ವಿದ್ಯುತ್‌ ಎಂದು ಹೇಳಿದ್ದ ಕಾಂಗ್ರೆಸ್‌ ಸರ್ಕಾರ ಎಷ್ಟು ಜನರಿಗೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುತ್ತಿದೆ ಎಂಬ ಬಗ್ಗೆ ಪಟ್ಟಿ ಬಿಡುಗಡೆ ಮಾಡಲಿ
– ಬಸವರಾಜ ಬೊಮ್ಮಾಯಿ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.