ADVERTISEMENT

ಅಧಿವೇಶನದ ವೇಳೆ ಔತಣ ಕೂಟ: ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ ಬಯಲು

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 23:30 IST
Last Updated 12 ಡಿಸೆಂಬರ್ 2025, 23:30 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಸುವರ್ಣ ವಿಧಾನಸೌಧ (ಬೆಳಗಾವಿ): ಕಾಂಗ್ರೆಸ್‌ ಹೈಕಮಾಂಡ್ ಸೂಚನೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪರಸ್ಪರರಿಗೆ ಏರ್ಪಡಿಸಿದ್ದ ಉಪಾಹಾರ ಕೂಟದ ಬಳಿಕ ತಣ್ಣಗಾಗಿದ್ದ ಬಣ ರಾಜಕೀಯ, ಅಧಿವೇಶನದ ವೇಳೆ ನಡೆಸಲಾಗುತ್ತಿರುವ ಔತಣ ಕೂಟದಿಂದಾಗಿ ಬಣ ಬಡಿದಾಟವಾಗಿ ಬದಲಾಗಿದೆ.

‘ಶಿವಕುಮಾರ್‌ ಬೇಡಿಕೆಯನ್ನು ಹೈಕಮಾಂಡ್ ಒಪ್ಪಿಲ್ಲ. ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿ’ ಎಂದು ಯತೀಂದ್ರ ಹೇಳಿದ್ದರು. ಅದಾದ ಬಳಿಕ ಮತ್ತೆ ರಾಜಕೀಯ ಚಟುವಟಿಕೆ ಬಿರುಸು ಪಡೆದಿತ್ತು. ಮಾಜಿ ಶಾಸಕ ಫಿರೋಜ್ ಸೇಠ್ ಅವರ ನಿವಾಸದಲ್ಲಿ ಬುಧವಾರ ರಾತ್ರಿ ನಡೆದ ಔತಣ ಕೂಟದಲ್ಲಿ ಸಿದ್ದರಾಮಯ್ಯನವರ ಆಪ್ತ ಸಚಿವರು ಪಾಲ್ಗೊಂಡಿದ್ದರು. ಇದಕ್ಕೆ ಪರ್ಯಾಯವೆಂಬಂತೆ, ಕಾಂಗ್ರೆಸ್ ಮುಖಂಡ ಪ್ರವೀಣ್ ದೊಡ್ಡಣ್ಣನವರ ಅವರ ತೋಟದ ಮನೆಯಲ್ಲಿ ಗುರುವಾರ ರಾತ್ರಿ ಔತಣಕೂಟ ನಡೆಯಿತು. ಶಿವಕುಮಾರ್ ಅವರ ಜತೆಯಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ, ಮಂಕಾಳ ವೈದ್ಯ ಸೇರಿ 25ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದರು.

ಇದರ ಪರಿಣಾಮವೋ ಎಂಬಂತೆ ಶಿವಕುಮಾರ್ ಬಣದ ಆಪ್ತ ಶಾಸಕರು, ಯತೀಂದ್ರ ಅವರಿಗೆ ತಿರುಗೇಟು ನೀಡುವಂತಹ ಹೇಳಿಕೆಯನ್ನು ಶುಕ್ರವಾರ ನೀಡಿದ್ದಾರೆ.

ADVERTISEMENT

‘ಬಲ ಪ್ರದರ್ಶನದ ಅವಶ್ಯ ನನಗಿಲ್ಲ’

‘ನಾನು ಯಾವುದೇ ಬಲ ಪ್ರದರ್ಶನ ಮಾಡುತ್ತಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದರು. ‘ಔತಣಕೂಟ ಬಲ ಪ್ರದರ್ಶನವೇ’ ಎಂಬ ಸುದ್ದಿಗಾರರ ಪ್ರಶ್ನೆಗೆ ‘ಅದರ ಅಗತ್ಯ ನನಗಿಲ್ಲ. ನನ್ನ ಹಿಂದೆ ಯಾರೂ ಬರುವುದು ಬೇಡ ನನ್ನ ಪರವಾಗಿ ಮಾತನಾಡುವುದೂ ಬೇಡ. ನಾನು ಮುಖ್ಯಮಂತ್ರಿ ಸೇರಿದಂತೆ 140 ಶಾಸಕರದೂ ಒಂದೇ ಕಾಂಗ್ರೆಸ್ ಗುಂಪು’ ಎಂದರು.

‘ನಾನು ಔತಣಕೂಟ ನಡೆಸಿಲ್ಲ. ದೊಡ್ಡಣ್ಣನವರ ನನ್ನ ಸ್ನೇಹಿತರು. ಕಳೆದ 15 ವರ್ಷಗಳಿಂದ ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಕರೆಯುತ್ತಿದ್ದರು. ನಾನೂ ಸೇರಿದಂತೆ ಒಂದಷ್ಟು ಜನರು ಊಟಕ್ಕೆ ಹೋಗಿದ್ದೆವು ಅಷ್ಟೇ’ ಎಂದು ಹೇಳಿದರು.

‘ದಿನ ಒಬ್ಬೊಬ್ಬ ಸ್ಥಳೀಯರು ನಮ್ಮ ಕ್ಷೇತ್ರದವರು ಪ್ರೀತಿಯಿಂದ ಊಟ ತಂದು ಕೊಡುತ್ತಿದ್ದಾರೆ. ಊಟವನ್ನು ಬೇಡ ಎನ್ನಲು ಆಗುತ್ತದೆಯೇ? ಪ್ರೀತಿಯಿಂದ ಕರೆಯುತ್ತಾರೆ ಅದಕ್ಕೆ ಒಂದೊಂದು ದಿನ ಒಂದೊಂದು ಕಡೆ ಊಟಕ್ಕೆ ಹೋಗುತ್ತೇವೆ. ನನ್ನ ಕ್ಷೇತ್ರದ ಹುಡುಗನೊಬ್ಬ ಇಲ್ಲಿ ಕೆಲಸ ಮಾಡುತ್ತಿದ್ದಾನೆ. ಆತನ ಮನೆಯಿಂದ ಇವತ್ತು ಮುದ್ದೆ ಉಪ್ಸಾರು ಊಟ ಮಾಡಿ ಕಳಿಸುತ್ತೇವೆ ಎನ್ನುತ್ತಿದ್ದಾನೆ. ಹೀಗೇ ಅವರು ಪ್ರೀತಿಯಿಂದ ಹೇಳಿದಾಗ ಕರೆದಾಗ ಬೇಡ ಎನ್ನಲು ಆಗುತ್ತದೆಯೇ? ನಾಡಿದ್ದು ನಮ್ಮ ಆಸೀಫ್ ಸೇಠ್ ಫಿರೋಜ್ ಸೇಠ್ ಅವರು ಊಟಕ್ಕೆ ಕರೆದಿದ್ದಾರೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.