ADVERTISEMENT

ಸಾವರ್ಕರ್ ಭಾರತಕ್ಕೆ ಬರಲು ನಿರಾಕರಿಸಿದ್ದೇಕೆ: ಪ್ರಿಯಾಂಕ್ ಖರ್ಗೆ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಆಗಸ್ಟ್ 2022, 14:19 IST
Last Updated 25 ಆಗಸ್ಟ್ 2022, 14:19 IST
ಪ್ರಿಯಾಂಕ್ ಖರ್ಗೆ (ಸಂಗ್ರಹ ಚಿತ್ರ)
ಪ್ರಿಯಾಂಕ್ ಖರ್ಗೆ (ಸಂಗ್ರಹ ಚಿತ್ರ)   

ಬೆಂಗಳೂರು: ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಸೇನಾನಿ ಎನ್ನುತ್ತಿರುವ ಬಿಜೆಪಿಯವರ ವಾದ ಸುಳ್ಳು ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ‘ಕೂ’ನಲ್ಲಿ ಸರಣಿ ಸಂದೇಶ ಪ್ರಕಟಿಸಿರುವ ಅವರು, ಸಾವರ್ಕರ್ ವಿಚಾರವಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಸಾವರ್ಕರ್ ಬ್ರಿಟನ್‌ನಲ್ಲಿದ್ದಾಗ ಪ್ರತೀಕಾರದ ಕಾರಣಕ್ಕೆ ಜಾಕ್ಸನ್ ಎಂಬ ಬ್ರಿಟಿಷ್ ಅಧಿಕಾರಿಯ ಹತ್ಯೆ ನಡೆಯುತ್ತದೆ. ಈ ಪ್ರಕರಣದಲ್ಲಿ ಬಂಧಿತರಾದಾಗ ವಿಚಾರಣೆ ಎದುರಿಸಲು ಭಾರತಕ್ಕೆ ಬರಲು ಅವರು ನಿರಾಕರಿಸುತ್ತಾರೆ. ಬಿಜೆಪಿಯವರು ಹೇಳುವಂತೆ ಸಾವರ್ಕರ್ ಸ್ವಾತಂತ್ರ್ಯ ಸೇನಾನಿಯಾಗಿದ್ದರೆ ಭಾರತಕ್ಕೆ ಬರಲು ನಿರಾಕರಿಸಿದ್ದೇಕೆ’ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ADVERTISEMENT

ದೇಶ ವಿಭಜನೆಗೆ ನೆಹರು-ಗಾಂಧಿ ಕಾರಣ ಎನ್ನುವ ಬಿಜೆಪಿಗರು ಇತಿಹಾಸ ಓದಲಿ. ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆಗಬೇಕು ಎಂದು ಮೊದಲು ಧ್ವನಿ ಎತ್ತಿದ್ದೇ ಸಾವರ್ಕರ್! ‘ಜಿನ್ನಾ ಅವರ ದೇಶ ವಿಭಜನೆಯ ಅಭಿಪ್ರಾಯವನ್ನು ನಾನು ಸಂಪೂರ್ಣ ಒಪ್ಪುತ್ತೇನೆ’ ಎಂದಿದ್ದರು ಸಾವರ್ಕರ್. ಪ್ರತ್ಯೇಕ ಸಿಖ್ ದೇಶದ ಬೇಡಿಕೆಗೂ ಅವರ ಬೆಂಬಲವಿತ್ತು ಎಂದು ಖರ್ಗೆ ಪ್ರತಿಪಾದಿಸಿದ್ದಾರೆ.

ಇಡೀ ದೇಶ ‘ಸಂಪೂರ್ಣ ಸ್ವರಾಜ್ಯ’ಕ್ಕೆ ಅಗ್ರಹಿಸುತ್ತಿದ್ದಾಗ ಸಾರ್ವಕರ್ ಹಿಂದೂ ಮಹಾಸಭಾ ಮೂಲಕ ಬ್ರಿಟಿಷರಿಗೆ ಬೆಂಬಲ ನೀಡಿದ್ದು ಯಾಕೆ? ಸಾವರ್ಕರ್ ಅವರು ಕ್ವಿಟ್ ಇಂಡಿಯಾ ಚಳುವಳಿಗೆ ಸಹಕಾರ ನೀಡಲಿಲ್ಲ ಯಾಕೆ? ದೇಶದ ವಿವಿಧ ಪ್ರಾಂತ್ಯಗಳಲ್ಲಿ ಮುಸ್ಲಿಂ ಲೀಗ್ ಜೊತೆ ಸರ್ಕಾರ ಮಾಡಿದ್ದು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.

2ನೇ ವಿಶ್ವ ಯುದ್ಧದ ಸಂದರ್ಭದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಸೈನ್ಯ ಕಟ್ಟಲು ಮುಂದಾದರು. ಆ ಸಮಯದಲ್ಲೇ ಸಾವರ್ಕರ್ ಬ್ರಿಟಿಷರ ಸೇನೆಗೆ ಲಕ್ಷಾಂತರ ಭಾರತೀಯರನ್ನು ಸೇರಿಸಿದರು. ಬ್ರಿಟಿಷ್ ಸೇನೆಗೆ ಸೇರಿದ ಈ ಭಾರತೀಯರು ಕೊಂದಿದ್ದು ಇದೇ ನಾತಾಜಿ ಅವರ ಅಜಾದ್ ಹಿಂದ್ ಫೌಜ್ ಯೋಧರನ್ನು! ಎಂದು ಖರ್ಗೆ ಆರೋಪಿಸಿದ್ದಾರೆ.

ಮಹಾತ್ಮ ಗಾಂಧಿ ಅವರೇ ಸಾರ್ವಕರ್ ಅವರಿಗೆ ಕ್ಷಮಾಪಣಾ ಪತ್ರ ಬರೆಯುವಂತೆ ತಿಳಿಸಿದ್ದರು ಎಂಬ ಬಿಜೆಪಿಗರ ವಾದ ಶುದ್ಧ ಸುಳ್ಳು. ಗಾಂಧೀಜಿ ಅವರೇ ತಮ್ಮ ಲೇಖನದಲ್ಲಿ, ‘ಸಾರ್ವಕರ್ ಅವರು ಇನ್ನು ಮುಂದೆ ಬ್ರಿಟಿಷರ ವಿರುದ್ಧ ಯಾವುದೇ ಹೋರಾಟ ಮಾಡುವುದಿಲ್ಲ, ಅವರು ಬ್ರಿಟಿಷರ ಪರವಾಗಿ ಕೆಲಸ ಮಾಡಲು ಬಯಸಿದ್ದಾರೆ’ ಎಂದು ಬರೆದಿದ್ದರು ಎಂದು ಅವರು ಹೇಳಿದ್ದಾರೆ.

ಅಂಡಮಾನ್ ಜೈಲಿನಲ್ಲಿ ಸಾವರ್ಕರ್ ಜೊತೆಗೆ ಕಾಲಾಪಾನಿ ಶಿಕ್ಷೆಗೊಳಗಾದ 700ಕ್ಕೂ ಹೆಚ್ಚು ಕೈದಿಗಳಿದ್ದರು. ಬ್ರಿಟಿಷರಿಗೆ ಆಪ್ತವಾಗಿದ್ದ ಸಾವರ್ಕರ್ ಹೊರತುಪಡಿಸಿ ಉಳಿದ ಎಲ್ಲಾ ಕೈದಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುತ್ತಿದ್ದರು. ಹೀಗಿದ್ದರೂ, ಬ್ರಿಟಿಷರಿಗೆ ಅತಿ ಹೆಚ್ಚು ಬಾರಿ ಕ್ಷಮಾಪಣೆ ಪತ್ರ ಬರೆದಿದ್ದು ಸಾವರ್ಕರ್ ಮಾತ್ರ! ಎಂದು ಅವರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.