(ಚಿತ್ರ ಕೃಪೆ: X/@RAshokaBJP)
ಬೆಂಗಳೂರು: ರಸ್ತೆಯಲ್ಲಿ ಜನ ಕಾಲ್ತುಳಿತದಿಂದ ಸಾಯುತ್ತಿದ್ದರೆ ಕಾಂಗ್ರೆಸ್ ನಾಯಕರು ಹಾಗೂ ಅವರ ಮಕ್ಕಳು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸೆಲ್ಫಿ ತೆಗೆಸಿಕೊಳ್ಳಲು ಶೋಕಿ ಮಾಡುತ್ತಿದ್ದರು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಚೊಚ್ಚಲ ಬಾರಿಗೆ ಟ್ರೋಫಿ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರಿಗೆ ಬುಧವಾರ ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಸನ್ಮಾನಿಸಲಾಗಿತ್ತು.
ಮತ್ತೊಂದೆಡೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.
ಈ ಸಂಬಂಧ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಅಶೋಕ, ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
'ಕಾಂಗ್ರೆಸ್ ಮಂತ್ರಿಗಳು, ಶಾಸಕರ ಮಕ್ಕಳಿಗೆ ವೇದಿಕೆಯ ಮೇಲೆ ರಾಜೋಪಚಾರ. ಸಾರ್ವಜನಿಕರಿಗೆ ಬೀದಿಯಲ್ಲಿ ಪರದಾಟ. ಅಲ್ಲಿ ರಸ್ತೆಯಲ್ಲಿ ಜನ ಕಾಲ್ತುಳಿದಿಂದ ಸಾಯುತ್ತಿದ್ದರೆ, ಜೀವ ಉಳಿಸಿಕೊಳ್ಳಲು ಕಕ್ಕಾಬಿಕ್ಕಿಯಾಗಿ ದಿಕ್ಕಾಪಾಲಾಗಿ ಓಡುತ್ತಿದ್ದರೆ, ಇಲ್ಲಿ ಕಾಂಗ್ರೆಸ್ ನಾಯಕರು, ಆವರ ಮಕ್ಕಳು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸೆಲ್ಫಿ ತೆಗೆಸಿಕೊಳ್ಳುವ ಶೋಕಿ ಮಾಡುತ್ತಿದ್ದಾರೆ' ಎಂದು ಆರೋಪಿಸಿದ್ದಾರೆ.
'ನಾಚಿಕೆಯಾಗಬೇಕು ಈ ಹೃದಯಹೀನ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಅದರ so-called ನಾಯಕರಿಗೆ. ಒಂದಂತೂ ಗ್ಯಾರೆಂಟಿ, ಈ ಜನದ್ರೋಹಿ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ಉಳಿಗಾಲವಿಲ್ಲ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.