ADVERTISEMENT

ಸೂಕ್ತ ಸಮಯದಲ್ಲಿ ಇಬ್ಬರನ್ನೂ ಕರೆಸುವುದಾಗಿ ಹೈಕಮಾಂಡ್ ಹೇಳಿದೆ: ಡಿ.ಕೆ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 0:30 IST
Last Updated 21 ಡಿಸೆಂಬರ್ 2025, 0:30 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ&nbsp;ಡಿ.ಕೆ. ಶಿವಕುಮಾರ್‌</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

   

ಬೆಂಗಳೂರು: ‘ಯಾವುದೇ ಒಪ್ಪಂದವಾಗಿಲ್ಲ. ಐದು ವರ್ಷ ನಾನೇ ಮುಖ್ಯಮಂತ್ರಿ’ ಎಂದು ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಘೋಷಿಸಿದ ಬೆನ್ನಲ್ಲೇ ‘ನಾಯಕತ್ವ’ ವಿಷಯ ಮತ್ತಷ್ಟು ಬಿಗಡಾಯಿಸುವ ಲಕ್ಷಣ ಕಾಣಿಸುತ್ತಿದ್ದು, ‘ಸೂಕ್ತ ಸಮಯದಲ್ಲಿ ಇಬ್ಬರನ್ನೂ ಕರೆಯಿಸುವುದಾಗಿ ಹೈಕಮಾಂಡ್ ಹೇಳಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿರುವುದು ಚರ್ಚೆಗೆ ಕಾರಣವಾಗಿದೆ. 

ಸುದ್ದಿಗಾರರ ಪ್ರಶ್ನೆಗೆ ಶನಿವಾರ ಪ್ರತಿಕ್ರಿಯಿಸಿದ ಶಿವಕುಮಾರ್,  ‘ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನನ್ನು ಸೂಕ್ತ ಸಮಯದಲ್ಲಿ ಕರೆಯಿಸುತ್ತೇವೆ ಎಂದು ಹೈಕಮಾಂಡ್ ನಾಯಕರು ನಮಗಿಬ್ಬರಿಗೂ ಹೇಳಿದ್ದಾರೆ’ ಎಂದರು.

ADVERTISEMENT

‘ದೆಹಲಿ ನಾಯಕರು ನಿಮಗೆ ಆಹ್ವಾನ ನೀಡಿದ್ದಾರೆಯೇ’ ಎಂಬ ಮರು ಪ್ರಶ್ನೆಗೆ ಅವರು, ‘ಕರೆದಾಗ ನಾವು ಹೋಗುತ್ತೇವೆ’ ಎಂದು ಹೇಳಿದರು.

ಬೆಳಗಾವಿ ಅಧಿವೇಶನದ ಮೊದಲ ದಿನದಿಂದ ಶುರುವಾಗಿದ್ದ ಕಾಂಗ್ರೆಸ್‌ನ ‘ಕುರ್ಚಿ ಕದನ’ ಕೊನೆಯ ದಿನವಾದ ಶುಕ್ರವಾರ ತಾರಕಸ್ತರ ಮುಟ್ಟಿತ್ತು. ವಿರೋಧ ಪಕ್ಷದ ಸದಸ್ಯರ ಕಾಲೆಳೆಯುವ ಪ್ರಶ್ನೆಗಳಿಗೆ ಉತ್ತರಿಸಿದ್ದ ಸಿದ್ದರಾಮಯ್ಯ, ‘ಎರಡೂವರೆ ವರ್ಷದ ಕುರಿತು ಒಪ್ಪಂದ, ತೀರ್ಮಾನ ಯಾವುದೂ ಆಗಿಲ್ಲ. ಐದು ವರ್ಷಕ್ಕೆ ನನ್ನನ್ನು ಆಯ್ಕೆ ಮಾಡಲಾಗಿದೆ. ನನ್ನ ಪ್ರಕಾರ ಹೈಕಮಾಂಡ್ ನನ್ನ ಪರವಾಗಿದೆ’ ಎಂದು ಅಬ್ಬರಿಸಿದ್ದರು.

ಇದಕ್ಕೆ ಪ್ರತ್ಯುತ್ತರವೆಂಬಂತೆ ಅಂಕೋಲಾ ಹಾಗೂ ಗೋಕರ್ಣದಲ್ಲಿ ಮಾತನಾಡಿದ್ದ ಶಿವಕುಮಾರ್, ‘ನನ್ನ ಮತ್ತು ಸಿದ್ದರಾಮಯ್ಯ ನಡುವೆ ಒಪ್ಪಂದ ಆಗಿದೆ. ಹೈಕಮಾಂಡ್ ಅವರ ಪರವಾಗಿದ್ದ ಕಾರಣಕ್ಕೆ ಅವರು ಮುಖ್ಯಮಂತ್ರಿಯಾಗಿದ್ದಾರೆ’ ಎಂದು ಹೇಳುವ ಮೂಲಕ ‘ಒಪ್ಪಂದ’ದ ರಹಸ್ಯವನ್ನು ಹೊರಗೆಡಹಿದ್ದರು.

‘ಸೂಕ್ತ ಸಮಯದಲ್ಲಿ ಕರೆಯಿಸುವುದಾಗಿ ಇಬ್ಬರಿಗೂ ಹೇಳಿದ್ದಾರೆ’ ಎನ್ನುವ ಮುಖೇನ, ‘ಗೊಂದಲ ಮುಗಿದಿಲ್ಲ. ಈ ಚರ್ಚೆ ಜೀವಂತವಾಗಿದೆ’ ಎನ್ನುವ ಸಂದೇಶವನ್ನು ರವಾನಿಸಿದ್ದಾರೆ.

ದೆಹಲಿಗೆ ಮಂಗಳವಾರ:

‘ಮಂಗಳವಾರ ದೆಹಲಿಗೆ ಹೋಗುತ್ತಿದ್ದು, ನದಿ ಜೋಡಣೆ ವಿಚಾರವಾಗಿ ಕೇಂದ್ರ ಜಲಶಕ್ತಿ ಸಚಿವರು ಕರೆದಿರುವ ಸಭೆಯಲ್ಲಿ ಭಾಗವಹಿಸುತ್ತೇನೆ. ಮಹದಾಯಿ, ಕೃಷ್ಣಾ ಮೇಲ್ದಂಡೆ, ಮೇಕೆದಾಟು, ಭದ್ರಾ ಮೇಲ್ದಂಡೆ ಯೋಜನೆ ವಿಚಾರವಾಗಿ ಚರ್ಚೆ ಮಾಡುತ್ತೇನೆ’ ಎಂದರು.

ರಾಜಣ್ಣ–ಡಿಕೆಶಿ ಮಾತುಕತೆ

ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕ ಕೆ.ಎನ್‌. ರಾಜಣ್ಣ ಮತ್ತು ಡಿ.ಕೆ. ಶಿವಕುಮಾರ್‌ ಶನಿವಾರ ಸಂಜೆ ಪರಸ್ಪರ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರಿನ ಹೈಗ್ರೌಂಡ್‌ ಪೊಲೀಸ್ ಠಾಣೆಯ ಬಳಿ ಇರುವ ಖಾಸಗಿ ವ್ಯಕ್ತಿ ಯೊಬ್ಬರಿಗೆ ಸೇರಿದ ಅತಿಥಿಗೃಹದಲ್ಲಿ ಉಭಯ ನಾಯಕರು ಭೇಟಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಮತ ಕಳ್ಳತನ ವಿರುದ್ಧ ಟೀಕೆ ಮಾಡಿದ ಕಾರಣಕ್ಕೆ ರಾಜಣ್ಣ ಸಚಿವ ಸ್ಥಾನ ಕಳೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.