
ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕದನ ತೀವ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣ ಕಾಣಿಸಿಕೊಳ್ಳುತ್ತಿರುವ ಮಧ್ಯೆಯೇ, ‘ನಾಯಕತ್ವದ ಗೊಂದಲಗಳನ್ನು ಹೈಕಮಾಂಡ್ ಸೃಷ್ಟಿಸಿಲ್ಲ. ಅವೆಲ್ಲ ಸ್ಥಳೀಯವಾಗಿ ಸೃಷ್ಟಿಯಾಗುತ್ತಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಅಷ್ಟೇ ಅಲ್ಲ, ‘ಈ ಗೊಂದಲಗಳನ್ನು ಸ್ಥಳೀಯ ನಾಯಕರೇ ಪರಿಹರಿಸಿಕೊಳ್ಳಬೇಕು. ಎಲ್ಲದಕ್ಕೂ ಹೈಕಮಾಂಡ್‌ನತ್ತ ಬೊಟ್ಟು ಮಾಡಿದರೆ ಹೇಗೆ’ ಎಂದು ಪ್ರಶ್ನಿಸಿದ್ದಾರೆ.
‘ಯಾವುದೇ ಒಪ್ಪಂದವಾಗಿಲ್ಲ. ಐದು ವರ್ಷ ನಾನೇ ಮುಖ್ಯಮಂತ್ರಿ’ ಎಂಬ ಸಿದ್ದರಾಮಯ್ಯ ವಾದಕ್ಕೆ, ‘ಸೂಕ್ತ ಸಮಯದಲ್ಲಿ ಇಬ್ಬರನ್ನೂ ಕರೆಯಿಸುವುದಾಗಿ ಹೈಕಮಾಂಡ್ ಹೇಳಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿರುವ ಬೆನ್ನಲ್ಲೆ, ಹೈಕಮಾಂಡ್ ಅನ್ನು ದೂಷಿಸುವ ಬದಲು ಸ್ಥಳೀಯ ನಾಯಕರು ಆಂತರಿಕ ಗೊಂದಲವನ್ನು ಸರಿಪಡಿಸಿಕೊಳ್ಳಬೇಕು ಎಂದು ಖರ್ಗೆ ತಾಕೀತು ಮಾಡಿದ್ದಾರೆ.
ನಾಯಕತ್ವದ ವಿಚಾರದಲ್ಲಿ ಉಂಟಾಗಿರುವ ಗೊಂದಲಗಳಿಗೆ ಭಾನುವಾರ ಇಲ್ಲಿ ಗರಂ ಆದ ಖರ್ಗೆ, ‘ಕಾಂಗ್ರೆಸ್ ಪಕ್ಷ ಕಾರ್ಯಕರ್ತರು ಒಳಗೊಂಡು ಎಲ್ಲರೂ ಸೇರಿ ಕಟ್ಟಿದ ಪಕ್ಷ. ಪಕ್ಷ ಸಂಘಟನೆ ಕೆಲಸ ನನ್ನಿಂದ ಆಗಿದೆ, ತನ್ನಿಂದ ಆಗಿದೆ ಎಂದು ಯಾರೂ ಹೇಳಬಾರದು. ಕಾರ್ಯಕರ್ತರೂ ಪಕ್ಷ ಕಟ್ಟಿದ್ದು ಅವರು, ಇವರು ಎಂದು ಹೇಳುವುದನ್ನು ಬಿಡಬೇಕು’ ಎಂದು ಪರೋಕ್ಷವಾಗಿ ಕುರ್ಚಿ ಕಿತ್ತಾಟದಲ್ಲಿ ತೊಡಗಿರುವ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.
ಡಿ.ಕೆ.ಶಿವಕುಮಾರ್ ಅವರ ನವದೆಹಲಿ ಭೇಟಿಯ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸುತ್ತಿದ್ದಂತೆಯೇ ‘ಅಧಿಕಾರ ಹಂಚಿಕೆಯ ಸೂತ್ರ’ದ ವಿಷಯ ಮುನ್ನೆಲೆಗೆ ಬಂದಿತ್ತು. ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದುದ್ದಕ್ಕೂ ‘ನಾಯಕತ್ವ ಬದಲಾವಣೆ’ಯ ವಿಷಯ ಸದ್ದು ಮಾಡಿತ್ತು. ಕಲಾಪದ ಕೊನೆಯ ದಿನ ವಿಧಾನಸಭೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ‘ನನ್ನ ಪ್ರಕಾರ ಹೈಕಮಾಂಡ್ ನಾಯಕರು ನನ್ನ ಪರವಾಗಿದ್ದಾರೆ. ಹೈಕಮಾಂಡ್ ನಾಯಕರು ತೀರ್ಮಾನಿಸುವವರೆಗೂ ನಾನೇ ಮುಖ್ಯಮಂತ್ರಿ. ಅವರು ಏನು ತೀರ್ಮಾನ ಮಾಡುತ್ತಾರೊ ಅದರ ಪ್ರಕಾರ ನಡೆದುಕೊಳ್ಳುತ್ತೇವೆ’ ಎಂದಿದ್ದರು.
ಮುಖ್ಯಮಂತ್ರಿ ನೀಡಿದ್ದ ಹೇಳಿಕೆಗೆ ಸದನದ ಹೊರಗಡೆ ಪ್ರತಿಕ್ರಿಯಿಸಿದ್ದ ಡಿ.ಕೆ. ಶಿವಕುಮಾರ್, ‘ನನ್ನ ಮತ್ತು ಸಿದ್ದರಾಮಯ್ಯ ನಡುವೆ ಒಪ್ಪಂದ ಆಗಿದೆ. ಸೂಕ್ತ ಸಮಯದಲ್ಲಿ ಕರೆಯಿಸುತ್ತೇವೆ ಎಂದು ಹೈಕಮಾಂಡ್ ನಾಯಕರು ನಮಗಿಬ್ಬರಿಗೂ ಹೇಳಿದ್ದಾರೆ’ ಎಂದಿದ್ದರು.
ನಾಯಕತ್ವ ವಿಷಯದ ಬಗ್ಗೆ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರು ಇತ್ತೀಚೆಗೆ ಸಮಾಲೋಚನೆ ನಡೆಸಿದ್ದರು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ನಿವಾಸದಲ್ಲಿ ನಡೆದಿದ್ದ ಈ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಭಾಗಿಯಾಗಿದ್ದರು. ರಾಜ್ಯದಲ್ಲಿನ ಕುರ್ಚಿ ಕಾದಾಟದ ಬಗ್ಗೆ ಈ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿತ್ತು.
ಕೇಂದ್ರ ನಾಯಕತ್ವ ನಿರ್ಧಾರ ತೆಗೆದುಕೊಳ್ಳುವವರೆಗೆ ‘ಅಧಿಕಾರ ಹಸ್ತಾಂತರ’ ವಿಷಯದ ಬಗ್ಗೆ ಯಾವುದೇ ಸಾರ್ವಜನಿಕ ಹೇಳಿಕೆ ನೀಡದಂತೆ ಎರಡೂ ಬಣಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆ ಬಳಿಕ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಉಪಾಹಾರ ಕೂಟದ ಮೂಲಕ, ‘ಅಧಿಕಾರ ಹಂಚಿಕೆ ವಿಚಾರದಲ್ಲಿ ತಮ್ಮ ನಡುವೆ ಯಾವುದೇ ಗೊಂದಲ ಇಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ’ ಎಂದಿದ್ದರು.
ಯಾರೇ ನಾಯಕರು ಬಂದರೂ ಪಕ್ಷದ ಕಾರ್ಯಕರ್ತರು ಅವರನ್ನು ಬೆಂಬಲಿಸುತ್ತಾರೆ. ಪಕ್ಷ ಎಂದ ಮೇಲೆ ಎಲ್ಲರ ಪಾತ್ರವೂ ಇರುತ್ತದೆಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
ಯಾರ ಜೊತೆಗೂ ಭಿನ್ನಾಭಿಪ್ರಾಯ ಇಲ್ಲ: ಡಿಕೆಶಿ
ಬೆಂಗಳೂರು: ‘ನನಗೆ ಪಕ್ಷದ ಯಾವುದೇ ನಾಯಕರ ಜತೆ ಭಿನ್ನಾಭಿಪ್ರಾಯಗಳಿಲ್ಲ. ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಒಟ್ಟಿಗೆ ಸಹೋದರರಂತೆ ಕೆಲಸ ಮಾಡುತ್ತಿಲ್ಲವೇ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು. ಮುಖ್ಯಮಂತ್ರಿಯ ಆಪ್ತ ಬಳಗದಲ್ಲಿರುವ ಕೆ.ಎನ್.ರಾಜಣ್ಣ ಅವರನ್ನು ಭೇಟಿ ಮಾಡಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ‘ರಾಜಣ್ಣ ನನಗೂ ಆಪ್ತರೇ. ನಾನು ಮುಖ್ಯಮಂತ್ರಿಯ ಆಪ್ತನಲ್ಲವೇ? ರಾಜಣ್ಣ ಅವರು ಜನತಾ ದಳದಲ್ಲಿದ್ದರು. ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ರಾಜಣ್ಣ ಅವರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನನ್ನಾಗಿ ಮಾಡಿದ್ದು ನಾನು. ಮುಖ್ಯಮಂತ್ರಿಗೂ ಇದಕ್ಕೂ ಸಂಬಂಧವೇ ಇಲ್ಲ’ ಎಂದರು. ‘ರಾಜಕೀಯ ಬೆಂಬಲಕ್ಕೆ ರಾಜಣ್ಣ ಮತ್ತು ನೀವು ಭೇಟಿ ಮಾಡಿದ್ದೀರಿ’ ಎಂಬ ಮಾತಿದೆಯಲ್ಲ ಎಂದಾಗ ‘ನಾವು ಸಹೋದ್ಯೋಗಿಗಳು. ಅವರು ನಮ್ಮ ಜತೆ ಕೆಲಸ ಮಾಡಿರುವವರು. ನನಗೆ ಯಾರ ಜತೆಯೂ ಭಿನ್ನಾಭಿಪ್ರಾಯಗಳಿಲ್ಲ. ಕಳೆದ 16 ವರ್ಷಗಳಿಂದ ಅವರು ನಮ್ಮ ಪಕ್ಷಕ್ಕೆ ಬಂದ ದಿನದಿಂದ ನನಗೂ ಮುಖ್ಯಮಂತ್ರಿಗೂ ಭಿನ್ನಾಭಿಪ್ರಾಯಗಳೇನಾದರು ಇದೆಯೇ? ಭಿನ್ನಾಭಿಪ್ರಾಯಗಳನ್ನು ಮಾಧ್ಯಮಗಳು ವಿರೋಧ ಪಕ್ಷಗಳು ಸೃಷ್ಟಿಸುತ್ತಿವೆ’ ಎಂದರು. ‘ಎಲ್ಲ ಕಾಂಗ್ರೆಸ್ ನಾಯಕರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಾನಂತು ಯಾರ ಮೇಲೂ ಜಗಳ ಮಾಡಲು ಹೋಗಿಲ್ಲ. ಯಾವ ವಿಚಾರಕ್ಕೂ ಒಬ್ಬರ ಮೇಲೆ ಇನ್ನೊಬ್ಬರು ಇದುವರೆಗೂ ಹೇಳಿಕೆ ನೀಡಿಲ್ಲ. ಕೆಲವು ಸಂದರ್ಭಗಳಲ್ಲಿ ರಾಜಕೀಯವಾಗಿ ಹೇಳಿಕೆ ಕೊಟ್ಟಿರುತ್ತಾರೆ. ಅದಕ್ಕೆ ಬೇಸರ ಮಾಡಿಕೊಳ್ಳಲು ಆಗುತ್ತದೆಯೇ? ಅಣ್ಣ ತಮ್ಮಂದಿರೇ ಜಗಳ ಮಾಡುತ್ತಾರಂತೆ ಇನ್ನು ನಮ್ಮದು ಯಾವ ಜಗಳ’ ಎಂದರು.
‘ಎಲ್ಲ ಗೊಂದಲ ಬಗೆಹರಿಸಬೇಕು’
‘ಬಜೆಟ್ ವೇಳೆಗೆ ಎಲ್ಲಾ ಗೊಂದಲಗಳನ್ನು ಬಗೆಹರಿಸಬೇಕು. ರಾಜ್ಯದ ಅಭಿವೃದ್ಧಿ ಸಲುವಾಗಿ ಹಾಗೂ ನಾವು ಜನರಿಗೆ ನೀಡಿರುವ ಭರವಸೆ ಈಡೇರಿಸಲು ಇದು ಅತ್ಯಗತ್ಯ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕೆ.ಎನ್. ರಾಜಣ್ಣ ಅವರು ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಹಿಂದಿನ ಎಲ್ಲ ಹೇಳಿಕೆಗಳಿಗೂ ಬದ್ಧವಾಗಿದ್ದೇನೆ ಎಂದಿದ್ದಾರೆ. ಹೀಗಾಗಿ ಡಿ.ಕೆ. ಶಿವಕುಮಾರ್ ಹಾಗೂ ಕೆ.ಎನ್. ರಾಜಣ್ಣ ಭೇಟಿಯಲ್ಲಿ ವಿಶೇಷ ಏನೂ ಇಲ್ಲ’ ಎಂದರು. ‘ಪಕ್ಷದ ಅಧ್ಯಕ್ಷರು ಪಕ್ಷ ಸಂಘಟನೆ ವಿಚಾರವಾಗಿ ಎಲ್ಲರನ್ನೂ ಕರೆಸಿ ಮಾತನಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ’ ಎಂದರು. ‘ನೀವೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೇ’ ಎಂಬ ಪ್ರಶ್ನೆಗೆ ‘ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ಬದ್ಧ’ ಎಂದಷ್ಟೇ ಹೇಳಿದರು.
‘ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ’
‘ನಾನು ಈಗಲೂ ಸಿದ್ದರಾಮಯ್ಯ ಅವರ ಪರ. ಡಿ.ಕೆ. ಶಿವಕುಮಾರ್ ಅವರು ಎಷ್ಟೇ ಪ್ರಯತ್ನ ಮಾಡಿದರೂ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಶಾಸಕ ಕೆ.ಎನ್.ರಾಜಣ್ಣ ಹೇಳಿದರು ಡಿ.ಕೆ. ಶಿವಕುಮಾರ್ ಅವರ ಭೇಟಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ‘ಶಿವಕುಮಾರ್ ಅವರು ನನ್ನನ್ನು ಹುಡುಕಿಕೊಂಡು ಬಂದಿರಲಿಲ್ಲ. ಅವರು ಪಕ್ಷದ ಅಧ್ಯಕ್ಷರಿದ್ದಾರೆ. ಅವರು ಯಾರನ್ನಾದರೂ ಕರೆದು ಮಾತನಾಡಬಹುದು ಚರ್ಚಿಸಬಹುದು. ಅದರಲ್ಲಿ ಯಾವುದೇ ರಾಜಕಾರಣ ಇಲ್ಲ. ಪಕ್ಷ ಸಂಘಟನೆ ಬಗ್ಗೆ ಹೇಳಿದರು. ಆಯ್ತಪ್ಪಾ ಮಾಡೋಣ ಎಂದಿದ್ದೇನೆ ಅಷ್ಟೇ’ ಎಂದರು. ‘ಮುಖ್ಯಮಂತ್ರಿ ಹಾದಿ ಸುಗಮ ಮಾಡಿಕೊಳ್ಳುವ ಪ್ರಯತ್ನವೇ’ ಎಂಬ ಪ್ರಶ್ನೆಗೆ ‘ಈಗಲೂ ನಾನು ಸಿದ್ದರಾಮಯ್ಯ ಅವರ ಪರ. ನಾನು ಹಿಂದೆ ನೀಡಿರುವ ಎಲ್ಲ ಹೇಳಿಕೆಗಳಿಗೂ ಈಗಲೂ ಬದ್ಧ. ಮುಖ್ಯಮಂತ್ರಿ ಗಾದಿ ವಿಚಾರ ಹೈಕಮಾಂಡ್ ನಿರ್ಧಾರವೇ ಅಂತಿಮ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.