ಕಾಂಗ್ರೆಸ್
ನವದೆಹಲಿ: ಅಧಿಕಾರ ಹಸ್ತಾಂತರ ಹಾಗೂ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ಸಚಿವರಿಬ್ಬರು ಹಾಗೂ ಶಾಸಕರ ದೆಹಲಿ ಪ್ರವಾಸ ಗುರುವಾರ ಚರ್ಚೆಗೆ ಗ್ರಾಸವಾಯಿತು.
ಸಕ್ಕರೆ ಸಚಿವ ಶಿವಾನಂದ ಪಾಟೀಲ ಹಾಗೂ ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ದೆಹಲಿಗೆ ಗುರುವಾರ ಸಂಜೆ ಬಂದರು. ಅವರಿಬ್ಬರೂ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ‘ನಾವು ಇಲಾಖಾ ಕಾರ್ಯ ನಿಮಿತ್ತ ಬಂದಿದ್ದೇವೆ‘ ಎಂದು ಸಚಿವರಿಬ್ಬರೂ ಸ್ಪಷ್ಟಪಡಿಸಿದರು.
ಶಾಸಕರಾದ ಟಿ.ಡಿ.ರಾಜೇಗೌಡ, ಎಚ್.ಡಿ.ರಂಗನಾಥ್, ವಿಧಾನ ಪರಿಷತ್ ಸದಸ್ಯ ರವಿ ಸೇರಿದಂತೆ ಕೆಲವು ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದರು. ಇದೇ ವೇಳೆ, ತುರ್ತು ಕಾರ್ಯದ ನಿಮಿತ್ತ ಖರ್ಗೆ ಅವರು ಇನ್ನೊಂದು ಗೇಟಿನಿಂದ ನಿರ್ಗಮಿಸಿದರು.
‘ಇಲಾಖಾ ಕಾರ್ಯದ ಸಲುವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಲು ಬಂದಿದ್ದೇನೆ. ಸಚಿವರನ್ನು ಭೇಟಿ ಮಾಡಿ ಶುಕ್ರವಾರ ಮಧ್ಯಾಹ್ನ ಮರಳುತ್ತೇನೆ. ದೆಹಲಿಗೆ ಬಂದಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಸಾಮಾನ್ಯವಾಗಿ ಭೇಟಿ ಮಾಡುತ್ತೇನೆ. ಅವರನ್ನು ಶುಕ್ರವಾರ ಭೇಟಿ ಮಾಡುವ ಸಾಧ್ಯತೆ ಕಡಿಮೆ’ ಎಂದು ಚಲುವರಾಯಸ್ವಾಮಿ ತಿಳಿಸಿದರು. ಶಾಸಕರು ಯಾವ ಕಾರಣಕ್ಕೆ ಬಂದಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
‘ಸಕ್ಕರೆ ವಿಷಯದ ಬಗ್ಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಿಗೆ ಮನವಿ ಸಲ್ಲಿಸಲು ಬಂದಿದ್ದೇನೆ. ಖರ್ಗೆ ಅವರು ಶುಕ್ರವಾರ ಬೆಂಗಳೂರಿಗೆ ಬರಲಿದ್ದಾರೆ. ಅವಶ್ಯಕತೆ ಇದ್ದರೆ ಬೆಂಗಳೂರಿನಲ್ಲಿ ಅವರನ್ನು ಭೇಟಿ ಮಾಡುತ್ತೇನೆ’ ಎಂದು ಶಿವಾನಂದ ಪಾಟೀಲ ತಿಳಿಸಿದರು.
‘ನಾನು ದೆಹಲಿಗೆ ಬಂದಿದ್ದಕ್ಕೂ ಮುಖ್ಯಮಂತ್ರಿ ಬದಲಾವಣೆ ವಿಷಯಕ್ಕೂ ಸಂಬಂಧ ಇಲ್ಲ. ಸಿಎಂ ಬದಲಾವಣೆ ಬಗ್ಗೆ ನಾನು ಮಾತನಾಡುವುದಿಲ್ಲ. ಅದಕ್ಕೆಂದೇ ಜನರು ಇದ್ದಾರೆ. ಒಪ್ಪಂದದ ಬಗ್ಗೆ ನಾನು ಅಭಿಪ್ರಾಯ ಹೇಳುವುದಿಲ್ಲ. ಪಕ್ಷದ ವಿಚಾರ ಏನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.