ADVERTISEMENT

ನಾನು ಕಲ್ಲಿನ ಮಗ: ಎಚ್‌.ಡಿ. ಕುಮಾರಸ್ವಾಮಿಗೆ ಡಿ.ಕೆ. ಶಿವಕುಮಾರ್ ತಿರುಗೇಟು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 17:14 IST
Last Updated 27 ಫೆಬ್ರುವರಿ 2022, 17:14 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ರಾಮನಗರ: ‘ನಾನು ಮಣ್ಣಿನ ಮಗ ಅಲ್ಲ, ಕಲ್ಲಿನ ಮಗ. ಹಾಗಂತ ನಮ್ಮಣ್ಣ ಹೇಳಿದ್ದಾನೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಎಚ್‌.ಡಿ. ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಮೊದಲ ದಿನದ ಮೇಕೆದಾಟು ಪಾದಯಾತ್ರೆ ಮುಕ್ತಾಯದ ಬಳಿಕ ಬಿಡದಿಯಲ್ಲಿ ಭಾನುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ತಮ್ಮನ್ನು ಮಣ್ಣಿನ ಮಗ ಎಂದು ಬಣ್ಣಿಸಿದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ ‘ ನಾನು ಬಂಡೆ ಎಂದು ನಮ್ಮಣ್ಣ ಹೇಳುತ್ತಾನೆ. ಕಲ್ಲು ಪ್ರಕೃತಿ, ಅದನ್ನು ಕಡಿದರೆ ಆಕೃತಿ. ಪೂಜಿಸಿದರೆ ಸಂಸ್ಕೃತಿ. ಬಂಡೆ ಕೆತ್ತಿದರೆ ತಾನೇ ಚಪ್ಪಡಿ, ದಿಂಡು, ವಿಗ್ರಹ ಎಲ್ಲ ಆಗುವುದು. ಅದನ್ನು ಹೇಗೆ ಬೇಕಾದರೂ ಉಪಯೋಗಿಸಿಕೊಳ್ಳಬಹುದು. ನಮ್ಮಣ್ಣನೂ ಬೇಕಾದರೆ ಉಪಯೋಗಿಸಿಕೊಳ್ಳಲಿ’ ಎಂದು ಟಾಂಗ್‌ ನೀಡಿದರು.

‘ನಾಲಿಗೆ ಇದೆ ಅಂತ ಯಾಕಣ್ಣ ಹರಿಬಿಡುತ್ತೀಯಾ. ಜನ ಥೂ, ಚೀ ಅಂತ ಬಯ್ಯುತ್ತಾರೆ ಕಣಣ್ಣ’ ಎಂದು ಕುಮಾರಸ್ವಾಮಿ ಅವರನ್ನು ಕೆಣಕಿದ ಡಿಕೆಶಿ, ‘ಜನತಾದಳದಿಂದ ಜಲಧಾರೆ ಹೆಸರಿನಲ್ಲಿ ಹೋರಾಟ ಮಾಡುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಅವರನ್ನು ಸ್ವಾಗತಿಸುತ್ತೇನೆ. ಚಾಮರಾಜನಗರದಿಂದ ಬೀದರ್‌ವರೆಗೂ ಹೋರಾಟ ಮಾಡಲಿ ನಮ್ಮದೇನು ಅಭ್ಯಂತರ ಇಲ್ಲ. ನಮ್ಮ ಸಂಪೂರ್ಣ ಬೆಂಬಲ ಅವರಿಗೆ ಇದೆ. ಕಾಂಗ್ರೆಸ್‌ನವರು ಮಾತ್ರ ಕಾರ್ಯಕ್ರಮ ಮಾಡುತ್ತಿಲ್ಲ. ಪಾದಯಾತ್ರೆಗೆ ಜೆಡಿಎಸ್‌ ಕಾರ್ಯಕರ್ತರೂ ಬೆಂಬಲ ಸೂಚಿಸಿದ್ದಾರೆ’ ಎಂದರು.

‘ನೀರಿಗೆ ರುಚಿ, ಬಣ್ಣ ಇಲ್ಲ. ಇದನ್ನು ಹೇಗೆ ಬೇಕಾದರೂ ಹರಿಸಬಹುದು. ನೀರಿಲ್ಲದೇ ನಾವು ಬದುಕಲು ಆಗದು. ಅದಕ್ಕಾಗಿಯೇ ನಾವು ಹೋರಾಟ ಮಾಡುತ್ತಿದ್ದೇವೆ. ನಾವು ಯಾರನ್ನೂ ದುಡ್ಡು ಕೊಟ್ಟು ಪಾದಯಾತ್ರೆಗೆ ಕರೆಯಿಸಿಲ್ಲ. ಜನರೇ ಸ್ವಯಂಪ್ರೇರಿತರಾಗಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.

ADVERTISEMENT

‘ದೇವೇಗೌಡರು ಈ ರಾಜ್ಯದಲ್ಲಿ ಹೋರಾಟ ಮಾಡಿದ್ದಾರೆ. ಕುಣಿಗಲ್, ವಿಠಲೇನಹಳ್ಳಿ ಹೋರಾಟದಲ್ಲಿ ಹೆಜ್ಜೆ ಹಾಕಿದ್ದಾರೆ. ಎಸ್.ಎಂ. ಕೃಷ್ಣ ಸಹ ಕಾವೇರಿಗಾಗಿ ಹೋರಾಟ ಮಾಡಿದ್ದಾರೆ. ಮಾಜಿ ಪ್ರಧಾನಿ ಚಂದ್ರಶೇಖರ್, ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್ ಸೇರಿದಂತೆ ದೇಶದಾದ್ಯಂತ ಹಲವು ನಾಯಕರು ಪಾದಯಾತ್ರೆ ಮಾಡಿದ ಉದಾಹರಣೆ ಇದೆ’ ಎಂದು ವಿವರಿಸಿದರು.

ಮಾಜಿ ಸಚಿವರಾದ ಟಿ.ಬಿ. ಜಯಚಂದ್ರ, ಚಲುವರಾಯಸ್ವಾಮಿ, ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್‌ ಸದಸ್ಯರಾದ ಸಿ.ಎಂ. ಲಿಂಗಪ್ಪ, ಎಸ್‌. ರವಿ, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.