ADVERTISEMENT

ಚಿಕ್ಕಬಳ್ಳಾಪುರ ರೋಗಿಗಳಿಗೆ ಆಸ್ಪತ್ರೆ ಮೀಸಲು ಆದೇಶ ಕಾನೂನುಬಾಹಿರ: ಕೃಷ್ಣ ಭೈರೇಗೌಡ

​ಪ್ರಜಾವಾಣಿ ವಾರ್ತೆ
Published 16 ಮೇ 2021, 9:39 IST
Last Updated 16 ಮೇ 2021, 9:39 IST
 ಕೃಷ್ಣ ಭೈರೇಗೌಡ
ಕೃಷ್ಣ ಭೈರೇಗೌಡ   

ಬೆಂಗಳೂರು: ‘ಚಿಕ್ಕಬಳ್ಳಾಪುರದ ರೋಗಿಗಳಿಗೆ ಖಾಸಗಿ ಆಸ್ಪತ್ರೆಯನ್ನು ಮೀಸಲಿಟ್ಟು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಅಮಾನವೀಯ’ ಎಂದಿರುವ ಕಾಂಗ್ರೆಸ್‌ ಶಾಸಕ ಕೃಷ್ಣ ಭೈರೇಗೌಡ, ‘ಇದು ಕಾನೂನುಬಾಹಿರ ಆದೇಶ. ಕೆಲವರಿಗೆ ಮಾತ್ರ ವೈದ್ಯಕೀಯ ಸೌಲಭ್ಯ ಮೀಸಲಿಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಕೂಡಲೇ ವೈದ್ಯಕೀಯ ಸೌಲಭ್ಯ ಎಲ್ಲರಿಗೂ ಸಿಗುವಂತೆ ಆದೇಶ ಮಾಡಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ: ‘ನಮ್ಮ ಕ್ಷೇತ್ರದಲ್ಲಿರುವ (ಬ್ಯಾಟರಾಯನಪುರ) ಎಸ್ಟಾರ್ ಸಿಎಂಐ ಆಸ್ಪತ್ರೆಯ ಐಸಿಯು, ಆಮ್ಲಜನಕ ಸೌಲಭ್ಯದ ಹಾಸಿಗೆಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾತ್ರ ನೀಡಬೇಕೆಂದು ಸರ್ಕಾರ ಆದೇಶಿಸಿರುತ್ತದೆ. ಕೋವಿಡ್ ದುರಂತವನ್ನು ನಾವೆಲ್ಲರೂ ಒಂದಾಗಿ ಎದುರಿಸುತ್ತಿರುವ ಸಂದರ್ಭದಲ್ಲಿ, ಈ ರೀತಿಯಾಗಿ ಯಾವುದೇ ಆಸ್ಪತ್ರೆಯ ಸೌಲಭ್ಯವನ್ನು ಕೆಲವರಿಗೆ ಮಾತ್ರ ಸೀಮಿತ ಮಾಡಿ ಅವಶ್ಯಕತೆ ಇರುವಂಥ ಇತರರಿಗೆ ಸಿಗದಂತೆ ಮಾಡುವುದು ಅಮಾನವೀಯ ಹಾಗೂ ಅವಿವೇಕದಿಂದ ಕೂಡಿರುವ ನಿರ್ಧಾರ’ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

‘ಯಾವುದೇ ವೈದ್ಯಕೀಯ ಸೌಲಭ್ಯದಿಂದ ಯಾರನ್ನೂ ವಂಚಿತರನ್ನಾಗಿ ಮಾಡಬಾರದು ಎಂದು ಇತ್ತೀಚೆಗೆ ತೆಲಂಗಾಣ ಹೈಕೋರ್ಟ್ ಸೂಚಿಸಿದೆ. ರಾಜ್ಯದ ಎಲ್ಲ ಜನರನ್ನು ಕಾಪಾಡುವ ಮತ್ತು ಸಮಾನವಾಗಿ ಕಾಣಬೇಕಾದ ಸರ್ಕಾರವೇ ಈ ರೀತಿಯಾಗಿ ಭೇದಭಾವದಿಂದ ಕೂಡಿರುವ ಆದೇಶ ನೀಡಿರುವುದನ್ನು ಏನೆಂದು ಅರ್ಥೈಸಬೇಕು’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಯಾವುದೇ ಒಂದು ವೈದ್ಯಕೀಯ ಸೌಲಭ್ಯವನ್ನು ಕೆಲವರಿಗೆ ಮಾತ್ರ ಸೀಮಿತ ಮಾಡುವಂಥ ಹಾಗೂ ಇತರರನ್ನು ವಂಚಿಸುವಂಥ ಅಧಿಕಾರ ಯಾವ ಕಾನೂನಿನ ಅಡಿಯಲ್ಲೂ ಸರ್ಕಾರಕ್ಕೆ ಇಲ್ಲ. ಇದು ಒಂದು ಕಾನೂನುಬಾಹಿರ ಆದೇಶ, ಹೀಗಾಗಿ, ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಮತ್ತು ವೈದ್ಯಕೀಯ ಸೌಲಭ್ಯ ಅವಶ್ಯಕತೆಯಿರುವ ಎಲ್ಲರಿಗೂ ಸಿಗುವಂತೆ ಆದೇಶಿಸಬೇಕು’ ಎಂದು ಪತ್ರದಲ್ಲಿ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.