ADVERTISEMENT

ಮಾನವೀಯತೆ ಮರೆತ ಮೋದಿ: ಕೇಂದ್ರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ

ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 19:45 IST
Last Updated 29 ಜೂನ್ 2020, 19:45 IST
ಕಾರೊಂದನ್ನು ಎತ್ತಿನಗಾಡಿಯ ಮೇಲೆ ಕೊಂಡೊಯ್ಯುವ ಮುಖಾಂತರ ಅಹಮದಾಬಾದ್‌ನಲ್ಲಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಿತು –ರಾಯಿಟರ್ಸ್‌ ಚಿತ್ರ
ಕಾರೊಂದನ್ನು ಎತ್ತಿನಗಾಡಿಯ ಮೇಲೆ ಕೊಂಡೊಯ್ಯುವ ಮುಖಾಂತರ ಅಹಮದಾಬಾದ್‌ನಲ್ಲಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಿತು –ರಾಯಿಟರ್ಸ್‌ ಚಿತ್ರ   

ಬೆಂಗಳೂರು: ‘ಪೆಟ್ರೋಲ್, ಡೀಸೆಲ್ ದರವನ್ನು ನಿರಂತರವಾಗಿ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಧಾನಿ ಮೋದಿಯವರಿಗೆ ಮನುಷ್ಯತ್ವವೇ ಇಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಕೆಪಿಸಿಸಿ ವತಿಯಿಂದ ಸೋಮವಾರ ಇಲ್ಲಿ ಹಮ್ಮಿಕೊಂಡಿದ್ದ ಸೈಕಲ್ ಚಳವಳಿ ಮತ್ತು ಪ್ರತಿಭಟನಾ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

‘ಡಾ.ಮನಮೋಹನ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ತೈಲ ದರವನ್ನು ಕೊಂಚ ಏರಿಸಿದ್ದರೂ ಬಿಜೆಪಿಯವರು ತಲೆಯ ಮೇಲೆ ಗ್ಯಾಸ್ ಸಿಲಿಂಡರ್‌ಗಳನ್ನು ಹೊತ್ತು ಬೀದಿಗೆ ಇಳಿಯುತ್ತಿದ್ದರು. ಇದೀಗ ಪೆಟ್ರೋಲ್, ಡೀಸೆಲ್ ದರ ಗಗನ ಮುಟ್ಟಿದೆಯಾದರೂ ಬಿಜೆಪಿಯವರೇಕೆ ಮಾತನಾಡುತ್ತಿಲ್ಲ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ್ ದರವನ್ನು ಏರಿಸಿ ಜನಸಾಮಾನ್ಯರಿಗೆ ತೊಂದರೆ ಕೊಡಬಾರದು ಎಂದು ಮನಮೋಹನ ಸಿಂಗ್ ಅವರು ಸಬ್ಸಿಡಿ ನೀಡುತ್ತಿದ್ದರು. ಆದರೆ, ನರೇಂದ್ರ ಮೋದಿಯವರಿಗೆ ಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ’ ಎಂದರು.

₹ 30ಕ್ಕೆ ಪೆಟ್ರೋಲ್‌ ನೀಡಬಹುದು: ‘ಕಚ್ಚಾ ತೈಲ ದರ ಇದೀಗ ಬ್ಯಾರಲ್‍ಗೆ 20-30 ಡಾಲರ್ ಇದೆ. ಹೀಗಿರುವಾಗ ಪೆಟ್ರೋಲ್, ಡೀಸೆಲ್ ಲೀಟರ್‌ಗೆ ₹25-30 ಪ್ರಕಾರ ಮಾರಾಟವಾಗಬೇಕಿತ್ತು. ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಯದ್ವಾತದ್ವ ಏರಿಕೆ ಮಾಡುವ ಮೂಲಕ ₹18 ಲಕ್ಷ ಕೋಟಿ ಸಂಗ್ರಹ ಮಾಡಿದೆ’ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಸೈಕಲ್ ಚಳವಳಿಯ ಅಂಗವಾಗಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಮ್ಮ ಮನೆಗಳಿಂದ ಕೆಪಿಸಿಸಿ ಕಚೇರಿವರೆಗೆ ಸೈಕಲ್‌ನಲ್ಲೇ ಬಂದರು. ಕೆಪಿಸಿಸಿ ಕಚೇರಿಯಿಂದ ಜಿಪಿಓ ಮಾರ್ಗವಾಗಿ ಮೀನ್ಸ್ ಸ್ಕ್ವೇರ್ ವೃತ್ತದ ಆದಾಯ ತೆರಿಗೆ ಕಚೇರಿವರೆಗೂ ಸೈಕಲ್‌ ಜಾಥಾ ನಡೆಯಿತು. ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹಮದ್, ಸತೀಶ ಜಾರಕಿಹೊಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ ಇದ್ದರು.

***
ದೇಶದೆಲ್ಲೆಡೆ ಕಾಂಗ್ರೆಸ್‌ ಪ್ರತಿಭಟನೆ
ನವದೆಹಲಿ/ಮುಂಬೈ (ಪಿಟಿಐ): ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಖಂಡಿಸಿ ದೇಶದ ವಿವಿಧೆಡೆ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಎತ್ತಿನ ಬಂಡಿ ಹಾಗೂ ಕುದುರೆ ಗಾಡಿಗಳನ್ನು ರಸ್ತೆಯಲ್ಲಿ ಓಡಿಸುವ ಮೂಲಕ ದರ ಏರಿಕೆಯಾಗುತ್ತಿರುವುದನ್ನು ಖಂಡಿಸಲಾಯಿತು.

ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನ, ಮಹಾರಾಷ್ಟ್ರದಲ್ಲಿ ಸಚಿವರೂ ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಲಾಕ್‌ಡೌನ್ ನಿರ್ಬಂಧದ ಕಾರಣ ಗುಂಪುಗೂಡಿದ್ದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಪಂಜಾಬ್‌ನಲ್ಲಿ ಕುದುರೆಗಾಡಿಯಲ್ಲಿ ಸ್ಕೂಟರ್‌ಗಳನ್ನು ನಿಲ್ಲಿಸಿ ಧರಣಿ ನಡೆಸಲಾಯಿತು. ಡೆಹ್ರಾಡೂನ್‌ನಲ್ಲಿ ಹರೀಶ್ ರಾವತ್ ಅವರು ಎತ್ತಿನಗಾಡಿಯಲ್ಲಿ ಸಂಚರಿಸಿದರು.

ದೆಹಲಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಚಕ್ಕಡಿ ಏರಿ ಕೇಂದ್ರದ ವಿರುದ್ಧ ಘೋಷಣೆ ಕೂಗಿದರು. ಅಹಮ
ದಾಬಾದ್‌ನಲ್ಲಿ ಗುಜರಾತ್‌ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ಡಾ ಸೇರಿ 50 ಜನರನ್ನು ಪೊಲೀಸರು ಬಂಧಿಸಿದರು.

ಸೋನಿಯಾ ಗಾಂಧಿ ಖಂಡನೆ
ಇಂಧನ ದರ ಏರಿಕೆ ಮೂಲಕ ಕೇಂದ್ರ ಸರ್ಕಾರವು ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಲಾಕ್‌ಡೌನ್‌ ಬಳಿಕ 22 ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅವರು, ಬೆಲೆ ಏರಿಕೆ ನಿರ್ಧಾರವನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ನಡೆದ ಅಭಿಯಾನದಲ್ಲಿ ಭಾಗಿಯಾಗಿದ್ದು, ಇಂಧನ ದರ ಕಡಿಮೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

‘ಶಿಷ್ಟಾಚಾರ ಉಲ್ಲಂಘಿಸಿದ ಸಿ.ಎಂ ವಿರುದ್ಧ ಕೇಸ್‌ ಹಾಕಲಿ’
‘ಕೋವಿಡ್ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿ ಉಲ್ಲಂಘನೆ ಮಾಡಿರುವ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ಸಚಿವರಾದ ಶ್ರೀರಾಮುಲು, ಈಶ್ವರಪ್ಪ ಅವರ ವಿರುದ್ಧ ಮೊದಲು ಕೇಸ್ ಹಾಕಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವುದಾಗಿ ಗೃಹ ಸಚಿವ ಬೊಮ್ಮಾಯಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,‘ಬೆಳಗಾವಿಯಲ್ಲಿ ನಡೆದ ಮದುವೆಗೆ ಮುಖ್ಯಮಂತ್ರಿಗಳು ಹೋದಾಗ, ಸಚಿವ ಶ್ರೀರಾಮುಲು ಅವರ ಕಾರ್ಯಕ್ರಮ, ಶಿವಮೊಗ್ಗದಲ್ಲಿ ಈಶ್ವರಪ್ಪ ಅವರ ಕಾರ್ಯಕ್ರಮದಲ್ಲಿ ಎಷ್ಟು ಜನ ಸೇರಿದ್ದರು? ಮತ್ತೊಬ್ಬ ಸಚಿವರು ಈಜುಕೊಳದಲ್ಲಿ ಈಜಾಡಿದ್ದಾರೆ. ಸರ್ಕಾರದ ಮಾರ್ಗಸೂಚಿಯಲ್ಲಿ ಈಜಾಡಲು ಅವಕಾಶ ಇದೆಯೇ? ನಾವು ಯಾವುದೇ ಕೇಸ್‌ಗಳಿಗೆ ಹೆದರುವುದಿಲ್ಲ. ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.