ಪ್ರತಿಭಟನೆ
–ಪ್ರಜಾವಾಣಿ ಚಿತ್ರ
ನವದೆಹಲಿ: ಒಳಮೀಸಲಾತಿ ಅನುಷ್ಠಾನದ ಸಂದರ್ಭದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಅಲೆಮಾರಿಗಳಿಗೆ ಘೋರ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಕರ್ನಾಟಕ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾ ಒಕ್ಕೂಟದ ನೇತೃತ್ವದಲ್ಲಿ ಅಲೆಮಾರಿಗಳು ಎಐಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಗುರುವಾರ ಯತ್ನಿಸಿದರು.
ಕಳೆದ 75 ವರ್ಷಗಳಿಂದ ತುಳಿತಕ್ಕೆ ಒಳಗಾಗಿ ಮೀಸಲಾತಿಯಲ್ಲಿ ಯಾವುದೇ ಲಾಭ ಪಡೆಯದ ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ ಅಲೆಮಾರಿಗಳು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದರು.
ಬಳಿಕ ಅಕ್ಬರ್ ರಸ್ತೆಯಲ್ಲಿರುವ ಹಳೆಯ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಕಾರರನ್ನು ತಡೆದರು. ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ಪ್ರತಿಭಟನೆನಿರತರು ಘೋಷಣೆಗಳನ್ನು ಕೂಗಿದರು. ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
ಹಂಪಿ ಕನ್ನಡ ವಿವಿ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಎ.ಎಸ್.ಪ್ರಭಾಕರ್, ‘ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗವು ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ದತ್ತಾಂಶಗಳನ್ನು ಸಂಗ್ರಹಿಸಿ ಮೀಸಲಾತಿಯನ್ನು ಹಂಚುವ ವೈಜ್ಞಾನಿಕ ಮಾದರಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ಸರ್ಕಾರವು ಈ ಶಿಫಾರಸುಗಳನ್ನು ತಿರಸ್ಕರಿಸಿದೆ. 49 ಅಲೆಮಾರಿ ಸಮುದಾಯಗಳನ್ನು ಹಾಗೂ 10 ಸೂಕ್ಷ್ಮ ಪರಿಶಿಷ್ಟ ಜಾತಿ ಸಮುದಾಯಗಳನ್ನು ಒಳಗೊಂಡಂತೆ 59 ಸಮುದಾಯಗಳನ್ನು ಸಿ ಗುಂಪಿನ ಬಲಾಢ್ಯ ಸ್ಪೃಶ್ಯ ಗುಂಪಿನ ಜತೆಗೆ ಸೇರಿಸಿದೆ. ಇದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧ‘ ಎಂದರು.
‘ಅಲೆಮಾರಿಗಳಿಗೆ ಅನ್ಯಾಯ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಬ್ಬ ಆಚರಿಸುತ್ತಿದ್ದಾರೆ. ಸಂವಿಧಾನ ಪುಸ್ತಕ ಹಿಡಿದು ಹೋರಾಟ ಮಾಡುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಮಗೆ ನ್ಯಾಯ ಕೊಡಿಸಿಲ್ಲ. ನಮಗೆ ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ಹೋರಾಟ ಮಾಡಲಾಗುವುದು‘ ಎಂದು ಅಲೆಮಾರಿ ಸಮುದಾಯದ ಮುಖಂಡ ಲೋಹಿತ್ ಎಚ್ಚರಿಸಿದರು.
ಸಮುದಾಯದ ಮುಖಂಡ ಮೂರ್ತಿ ಮಾತನಾಡಿ, ‘ವಿಧಾನಸೌಧದಲ್ಲಿ ನಮ್ಮ ಪ್ರತಿನಿಧಿಗಳಿಲ್ಲ. ಈ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ನಮಗೆ ಅನ್ಯಾಯ ಮಾಡಿದೆ. ನಾವು ಕೇಳುತ್ತಿರುವುದು ಶೇ 1ರಷ್ಟು ಮೀಸಲಾತಿ ಮಾತ್ರ. ನಮ್ಮ ಬೇಡಿಕೆಗೆ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.