ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್
(ಪಿಟಿಐ ಚಿತ್ರ)
ನವದಹೆಲಿ: ಮತಗಳ್ಳತನ ಆರೋಪ ಸಂಬಂಧ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿದ ಮಾತನಾಡಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 'ಬಿಜೆಪಿಯ ಸಿದ್ಧಾಂತವೇ ಸಂವಿಧಾನ ವಿರೋಧಿಯಾಗಿದೆ' ಎಂದು ಆರೋಪಿಸಿದ್ದಾರೆ.
ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು ಭಾಷಣ ಮಾಡಿದ ರಾಹುಲ್, 'ಈ ದೇಶದ ಬಡವರು, ರೈತರು, ಕಾರ್ಮಿಕರಿಗೆ ಸಂವಿಧಾನವು ರಕ್ಷಣೆಯನ್ನು ನೀಡುತ್ತದೆ. ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ದೇಶದ ಸಂವಿಧಾನದ ರಕ್ಷಣೆಗಾಗಿ ಹೋರಾಡಲಿದ್ದಾರೆ' ಎಂದು ಹೇಳಿದ್ದಾರೆ.
'ಇದೇ ಸಂದರ್ಭದಲ್ಲಿ ಕಳೆದ 10 ವರ್ಷಗಳ ಮತದಾರರ ಪಟ್ಟಿ ಹಾಗೂ ವಿಡಿಯೊ ರೆಕಾರ್ಡಿಂಗ್ ಅನ್ನು ತಕ್ಷಣವೇ ಚುನಾವಣಾ ಆಯೋಗವು ಬಿಡುಗಡೆ ಮಾಡಬೇಕು' ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
'ಎಲೆಕ್ಟ್ರಾನಿಕ್ ಅಂಕಿಅಂಶಗಳನ್ನು ಚುನಾವಣಾ ಆಯೋಗ ಏಕೆ ನೀಡುತ್ತಿಲ್ಲ ಎಂಬುದನ್ನು ಇಡೀ ದೇಶವೇ ಅರಿತುಕೊಳ್ಳಬೇಕು. ನಾನು ವಿರೋಧ ಪಕ್ಷದ ನಾಯಕನಾಗಿರಬಹುದು. ಆದರೆ ನಾನು ಈ ಹೋರಾಟದಲ್ಲಿ ಒಬ್ಬಂಟಿಯಲ್ಲ. ವಿಪಕ್ಷಗಳ ಎಲ್ಲ ನಾಯಕರು ನನ್ನೊಂದಿಗೆ ಇದ್ದಾರೆ' ಎಂದು ಹೇಳಿದ್ದಾರೆ.
'ಒಂದು ವೇಳೆ ನಮಗೆ ಮಾಹಿತಿಯನ್ನು ಕೊಡದಿದ್ದರೆ ಒಂದು ಕ್ಷೇತ್ರವಲ್ಲ 25 ಕ್ಷೇತ್ರಗಳ ಮಾಹಿತಿಯನ್ನು ಬಹಿರಂಗ ಮಾಡಲಿದ್ದೇವೆ. ನಮ್ಮ ಬಳಿ ದಾಖಲೆಗಳಿವೆ. ನೀವಿದನ್ನು ಮುಚ್ಚಿಡಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ವಿಪಕ್ಷಗಳ ಸವಾಲನ್ನು ಎದರಿಸಲೇಬೇಕಾಗುತ್ತದೆ' ಎಂದು ಸವಾಲು ಹಾಕಿದ್ದಾರೆ.
2024 ರ ಚುನಾವಣೆಯ ಸಮಯದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳ ಕಳ್ಳತನ ನಡೆದಿದೆ ಎಂಬುದಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ದಾಖಲೆ ಬಿಡುಗಡೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.