ADVERTISEMENT

ಬೆಂಗಳೂರು| ಮತದಾರರ ಪಟ್ಟಿ ಲೋಪ ಸರಿಪಡಿಸಿ: ಕಾಂಗ್ರೆಸ್

ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿಗೆ ಡಿಕೆಶಿ ನೇತೃತ್ವದ ನಿಯೋಗದಿಂದ ಮನವಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 15:53 IST
Last Updated 17 ಫೆಬ್ರುವರಿ 2026, 15:53 IST
ಜಿ.ಎಸ್. ಸಂಗ್ರೇಶಿ ಅವರಿಗೆ ಡಿ.ಕೆ. ಶಿವಕುಮಾರ್ ಮನವಿ ಸಲ್ಲಿಸಿದರು. ಎ.ಸಿ. ಶ್ರೀನಿವಾಸ್, ಡಿ.ಟಿ. ಶ್ರೀನಿವಾಸ್,‌ ರಿಜ್ವಾನ್ ಅರ್ಷದ್, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಪುಟ್ಟಣ್ಣ, ಡಿ.ಕೆ. ಸುರೇಶ್  ಜತೆಗಿದ್ದರು
ಜಿ.ಎಸ್. ಸಂಗ್ರೇಶಿ ಅವರಿಗೆ ಡಿ.ಕೆ. ಶಿವಕುಮಾರ್ ಮನವಿ ಸಲ್ಲಿಸಿದರು. ಎ.ಸಿ. ಶ್ರೀನಿವಾಸ್, ಡಿ.ಟಿ. ಶ್ರೀನಿವಾಸ್,‌ ರಿಜ್ವಾನ್ ಅರ್ಷದ್, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಪುಟ್ಟಣ್ಣ, ಡಿ.ಕೆ. ಸುರೇಶ್  ಜತೆಗಿದ್ದರು   

ಬೆಂಗಳೂರು: ಚುನಾವಣೆ ನಡೆಯಲಿರುವ ಬೆಂಗಳೂರು ನಗರ ವ್ಯಾಪ್ತಿಯ ಐದು ನಗರಪಾಲಿಕೆ ಹಾಗೂ  ಸ್ಥಳೀಯ ಸಂಸ್ಥೆಗಳ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಲೋಪದೋಷ ಸರಿಪಡಿಸಬೇಕು ಎಂದು ಆಗ್ರಹಿಸಿ ಕೆ‍ಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದ ನಿಯೋಗ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದೆ.

‘ಮತಪಟ್ಟಿ ಸಿದ್ಧಪಡಿಸುವಾಗ ಬಿಎಲ್‌ಒಗಳು ಅಕ್ರಮ ಎಸಗುತ್ತಿದ್ದಾರೆ. ಕಳೆದ ಬಾರಿ ಒಂದೇ ಕುಟುಂಬದ ಮತಗಳನ್ನು ಬೇರೆ ಬೇರೆ ಬೂತ್‌ಗಳಿಗೆ ಸೇರಿಸಲಾಗಿತ್ತು. ಸಮರ್ಪಕವಾದ ಮ್ಯಾಪಿಂಗ್ ನಡೆಯುವುದಿಲ್ಲ. ಆಯೋಗ ನೇಮಿಸಿರುವ ಬಿಎಲ್ಒಗಳ ಜೊತೆಗೆ ರಾಜಕೀಯ ಪಕ್ಷಗಳ ಬೂತ್‌ ಮಟ್ಟದ ಏಜೆಂಟರನ್ನು (ಬಿಎಲ್‌ಎ) ಕರೆದುಕೊಂಡು ಹೋಗಿ ಪರಿಷ್ಕರಣೆ ಮಾಡಬೇಕು. ಮತದಾರರ ಪಟ್ಟಿಯ ಜೊತೆಗೆ, ಮನೆಗಳು ಹಾಗೂ ಮತಗಳ ಮ್ಯಾಪಿಂಗ್ ಕೂಡ ಆಗಬೇಕು’ ಎಂದು ನಿಯೋಗ ಮನವಿ ಮಾಡಿದೆ.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ರಾಜ್ಯ ಚುನಾವಣಾ ಆಯೋಗವು ಮುಂಬರುವ ಜಿಬಿಎ ವ್ಯಾಪ್ತಿಯ ಪಾಲಿಕೆಗಳ ಚುನಾವಣೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲಿದೆ. ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತಿದ್ದು, ಈ ಹಿಂದೆ ನೀಡಿದ್ದ ಮತದಾರರ ಪಟ್ಟಿಯನ್ನು ಆಧಾರವಾಗಿ ಇಟ್ಟುಕೊಂಡು ಪರಿಷ್ಕರಣೆ ಮಾಡುತ್ತಿದೆ. ಈಗ ಪ್ರಕಟಿಸಿರುವ ಮತದಾರರ ಕರಡು ಪಟ್ಟಿಯಲ್ಲಿ ಕೆಲವು ಲೋಪಗಳಿವೆ. ಅವುಗಳನ್ನು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

‘ಕಳೆದ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳು ಹಾಗೂ ಬೂತ್‌ಗಳಲ್ಲಿ ಆಗಿದ್ದ ಲೋಪಗಳನ್ನು ಸರಿಪಡಿಸಬೇಕು. ನ್ಯಾಯಬದ್ಧವಾಗಿ ಕಾನೂನು ಚೌಕಟ್ಟಿನಲ್ಲಿ ಮತದಾರರ ಪಟ್ಟಿ ಪರಿಷ್ಕರಿಸಬೇಕು. ಈ ಹಿಂದೆ ಮತದಾರರ ಬದಲು, ಬೇರೆಯವರು ಪಟ್ಟಿಯಿಂದ ಹೆಸರು ತೆಗೆದು ಹಾಕಿದ್ದಾರೆ. ಅದನ್ನು ಸರಿಪಡಿಸಬೇಕು. ಮುಂದಿನ ದಿನಗಳಲ್ಲಿ ಜಿಬಿಎ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಮತದಾರರ ಪಟ್ಟಿಯನ್ನು ಈಗಲೇ ಪರಿಷ್ಕರಿಸಬೇಕು. ತಪ್ಪುಗಳಾದರೆ ಆಯೋಗಕ್ಕೂ, ಸರ್ಕಾರಕ್ಕೂ ಕೆಟ್ಟ ಹೆಸರು ಬರಲಿದೆ ಎಂಬುದನ್ನು ಆಯುಕ್ತರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಮತದಾರರ ಪಟ್ಟಿಯಲ್ಲಿ ನಾವು ಗುರುತಿಸಿರುವ ಲೋಪದೋಷಗಳ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಿದ್ದೇವೆ’ ಎಂದರು.

ADVERTISEMENT

‘ಮತಗಳನ್ನು ಬೇರೆ ಬೂತ್‌ಗಳಿಗೆ ವಿಂಗಡಿಸುವುದು, ಅಲ್ಪಸಂಖ್ಯಾತರು, ಪರಿಶಿಷ್ಟರ ಮತಗಳನ್ನು ಅಕ್ರಮವಾಗಿ ತೆಗೆದಿರುವವರು, ನಕಲಿ ಮತಗಳನ್ನು ಸೇರಿಸಿರುವ ಬಿಎಲ್ಒಗಳನ್ನು ಅಮಾನತುಗೊಳಿಸಬೇಕು. ಕಾನೂನು ಚೌಕಟ್ಟಿನಲ್ಲಿ ಮತದಾರರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಸಲ್ಲಿಸಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.