ADVERTISEMENT

ಕಾರ್ಮಿಕರನ್ನು ಊರುಗಳಿಗೆ ತಲುಪಿಸಿ: ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆಶಿ ಸೂಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮೇ 2020, 15:24 IST
Last Updated 4 ಮೇ 2020, 15:24 IST
ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್    

ಬೆಂಗಳೂರು: ‘ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಸ್ವಂತ ಊರುಗಳಿಗೆ ಹಿಂದಿರುತ್ತಿರುವ ವಲಸೆ ಕಾರ್ಮಿಕರನ್ನು ಸ್ವಾಗತಿಸಿ, ಅವರ ಸ್ವಗ್ರಾಮಗಳಿಗೆ ತಲುಪಿಸಲು ನೆರವಾಗಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಳಮಟ್ಟದ ಕಾರ್ಯಕರ್ತರಿಗೆ ವಿಡಿಯೊ ಮೆಸೇಜ್‌ನಲ್ಲಿ ಸೂಚನೆ ನೀಡಿದ್ದಾರೆ.

ಬ್ಲಾಕ್‌ ಮತ್ತು ಜಿಲ್ಲಾ ಮಟ್ಟದ ನಾಯಕರಿಗೆ ಈ ಕುರಿತು ಸ್ಪಷ್ಟ ಸೂಚನೆ ನೀಡಿರುವ ಶಿವಕುಮಾರ್, ‘ಬಸ್‌ಗಳಲ್ಲಿ ಬಂದ ಕಾರ್ಮಿಕರನ್ನು ಸ್ವಾಗತಿಸಿ. ಅವರ ಅಗತ್ಯಗಳನ್ನು ಗಮನಿಸಿ. ಇದು ಮಾನವೀಯ ನೆಲಗಟ್ಟಿನಲ್ಲಿ ನಾವು ಮಾಡಬೇಕಿರುವ ಸೇವೆ’ ಎಂದು ಹೇಳಿದ್ದಾರೆ.

ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಊರುಗಳಿಗೆ ಹೊರಟು ನಿಂತಿದ್ದ ಕಾರ್ಮಿಕರನ್ನು ಪಕ್ಷದ ನಾಯಕರೊಂದಿಗೆ ಮಾತನಾಡಿಸಿದ್ದ ಡಿಕೆಶಿ, ಕಾರ್ಮಿಕರನ್ನು ಉಚಿತವಾಗಿ ಅವರ ಊರುಗಳಿಗೆ ತಲುಪಿಸಲು ಪಕ್ಷದ ವತಿಯಿಂದ ಕೆಎಸ್‌ಆರ್‌ಟಿಸಿಗೆ₹ 1 ಕೋಟಿ ನೀಡಲು ಮುಂದಾಗಿದ್ದರು. ಆದರೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಇದನ್ನು ನಿರಾಕರಿಸಿ, ‘ಕೊಡುವುದಿದ್ದರೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಿ’ ಎಂದು ಸೂಚಿಸಿದ್ದರು.

ADVERTISEMENT

ಯಡಿಯೂರಪ್ಪ ಆಡಳಿತವನ್ನು ಹಿಗ್ಗಾಮುಗ್ಗಾ ಟೀಕಿಸಿದ್ದ ಡಿ.ಕೆ.ಶಿವಕುಮಾರ್, ‘ನಿಮಗೆ ಹೃದಯವಿಲ್ಲವೇ? ವಲಸೆ ಕಾರ್ಮಿಕರು ಬೀದಿಬೀದಿಗಳಲ್ಲಿ ಚಿಕ್ಕ ಮಕ್ಕಳೊಂದಿಗೆ ಎಷ್ಟು ಕಷ್ಟಪಡುತ್ತಿದ್ದಾರೆ ಎನ್ನುವುದು ಕಾಣುವುದಿಲ್ಲವೇ? ಈ ಸರ್ಕಾರಕ್ಕೆ ಅಧಿಕಾರದಲ್ಲಿರಲು ಅರ್ಹತೆಯಿಲ್ಲ’ ಎಂದು ಟೀಕಿಸಿದ್ದರು.

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರನ್ನು ಭೇಟಿ ಮಾಡಿದ್ದ ಡಿ.ಕೆ.ಶಿವಕುಮಾರ್ ಹೊರ ರಾಜ್ಯಗಳಲ್ಲಿರುವ ಕನ್ನಡಿಗರನ್ನು ಕರೆತರಲು ಶ್ರಮಿಕ ರೈಲು ಸೇವೆಗಳನ್ನು ಶೀಘ್ರ ಆರಂಭಿಸಬೇಕು. ರೈಲ್ವೆ ಇಲಾಖೆಗೆ ನೀಡಬೇಕಾದ ಹಣವನ್ನು ಭರಿಸಲು ನಾವು ಸಿದ್ಧರಿದ್ದೇವೆ’ ಎಂದು ಹೇಳಿದ್ದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ 7 ಪುಟಗಳ ಸುದೀರ್ಘ ಪತ್ರ ಬರೆದಿದ್ದ ಸಿದ್ದರಾಮಯ್ಯ, ‘ಕೆಲಸ ಕಳೆದುಕೊಂಡಿರುವ ದಿನಗೂಲಿ ಕಾರ್ಮಿಕರಿಗೆ ತಿಂಗಳಿಗೆ ₹ 10 ಸಾವಿರ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದ್ದರು.

ಕಾಂಗ್ರೆಸ್‌ ಪಕ್ಷದ ನಡೆಯಿಂದ ಸಿಟ್ಟಾದಂತೆ ಕಂಡು ಬಂದ ಕಂದಾಯ ಸಚಿವ ಆರ್.ಅಶೋಕ್, ‘ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭವನ್ನು ಕಾಂಗ್ರೆಸ್‌ ರಾಜಕೀಯಗೊಳಿಸುತ್ತಿದೆ. ಎರಡು ತಿಂಗಳುಗಳಿಂದ ರಾಜ್ಯ ಸರ್ಕಾರವು ಕೋಟ್ಯಂತರ ರೂಪಾಯಿಯನ್ನು ಖರ್ಚು ಮಾಡಿದೆ. ಕೊರೊನಾ ಸೋಂಕನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿದ ರಾಜ್ಯಗಳ ಪೈಕಿ ಕರ್ನಾಟವೂ ಒಂದು. 100 ವರ್ಷಗಳ ಇತಿಹಾಸವಿರುವಕಾಂಗ್ರೆಸ್ ಪಕ್ಷವು ₹ 1 ಕೋಟಿ ದೇಣಿಗೆ ನೀಡಿ ತನ್ನನ್ನು ತಾನು ಹಾಸ್ಯಕ್ಕೆ ಗುರಿಮಾಡಿಕೊಂಡಿದೆ’ ಎಂದು ಲೇವಡಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.