ADVERTISEMENT

ಅಂಬೇಡ್ಕರ್‌ ಸಂವಿಧಾನದಲ್ಲಿ ಜಾತ್ಯತೀತ ಪದ ತೋರಿಸಿ: ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 15:37 IST
Last Updated 29 ಜೂನ್ 2025, 15:37 IST
<div class="paragraphs"><p>ಆರ್. ಅಶೋಕ&nbsp;</p></div>

ಆರ್. ಅಶೋಕ 

   

ಬೆಂಗಳೂರು: ‘ಸಂವಿಧಾನಕ್ಕೆ 68 ಬಾರಿ ತಿದ್ದುಪಡಿ ತಂದ ಕಾಂಗ್ರೆಸ್‌, ಜಾತ್ಯತೀತ ಪದದ ಬಗ್ಗೆ ಮಾತನಾಡುತ್ತಿದೆ. ಆದರೆ, ಡಾ.ಬಿ.ಆರ್. ಅಂಬೇಡ್ಕರ್‌ ಅವರು ಬರೆದ ಸಂವಿಧಾನದಲ್ಲಿ ಜಾತ್ಯತೀತ ಪದವೇ ಇಲ್ಲ’ ಎಂದು ವಿರೋಧಪಕ್ಷದ ನಾಯಕ ಆರ್‌.ಅಶೋಕ ಅವರು ಹೇಳಿದರು.

‘ಮೂಲಸಂವಿಧಾನದಲ್ಲಿಲ್ಲದ ಮತ್ತು ಕಾಂಗ್ರೆಸ್‌ನವರೇ ಸೇರಿಸಿದ ಪದಗಳ ಬಗ್ಗೆ ಆರ್‌ಎಸ್‌ಎಸ್‌ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಮಾತನಾಡಿದ್ದಾರೆ’ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ನಾನು ಒಕ್ಕಲಿಗ ಎಂದು ಗುರುತಿಸಿಕೊಳ್ಳುತ್ತೇನೆ. ಎಲ್ಲರೂ ಅವರವರ ಜಾತಿಯನ್ನು ಗುರುತಿಸಿಕೊಳ್ಳುತ್ತಾರೆ. ಅಂದಮೇಲೆ ಜಾತ್ಯತೀತ ಎಂಬುದಕ್ಕೆ ಅರ್ಥವಿಲ್ಲ. ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಎಂಬ ಪದ ಎಲ್ಲಿದೆ ಎಂಬುದನ್ನು ಕಾಂಗ್ರೆಸ್‌ ನಾಯಕರು ತೋರಿಸಲಿ’ ಎಂದು ಸವಾಲು ಹಾಕಿದರು.

ರಾಹುಲ್‌ಗಾಂಧಿ ಒಂದು ಕಡೆ ಜಾತಿ ಸಮೀಕ್ಷೆ ಬೇಕೆಂದು ಹೇಳುತ್ತಾರೆ. ನಂತರ ಜಾತ್ಯತೀತ ಎನ್ನುತ್ತಾರೆ. ನೆಹರು ಅವರು ಸಂವಿಧಾನಕ್ಕೆ 17 ತಿದ್ದುಪಡಿಗಳನ್ನು ಮಾಡಿದ್ದಾರೆ. ಅವರ ಪುತ್ರಿ ಇಂದಿರಾಗಾಂಧಿ 26 ತಿದ್ದುಪಡಿಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಒಟ್ಟು 68 ತಿದ್ದುಪಡಿಗಳನ್ನು ಮಾಡಿದೆ. ಬಾಬಾ ಸಾಹೇಬರ ಮೂಲ ಆಶಯಗಳನ್ನೇ ಇವರು ತಿದ್ದುಪಡಿ ಮಾಡಿದ್ದಾರೆ ಎಂದು ಅಶೋಕ ಟೀಕಿಸಿದರು.

ಗೃಹ ಇಲಾಖೆ ಕಾಂಗ್ರೆಸ್‌ನ ಡಿಪಾರ್ಟ್‌ಮೆಂಟ್:

ರಾಜ್ಯದಲ್ಲಿ ಗೃಹ ಇಲಾಖೆ ಕಾಂಗ್ರೆಸ್‌ನ ಡಿಪಾರ್ಟ್‌ಮೆಂಟ್ ಆಗಿದೆ. ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿ ಪತ್ರಕರ್ತರನ್ನು ಜೈಲಿಗೆ ಹಾಕಿದ್ದರು. ಅದೇ ರೀತಿ ಗೃಹ ಇಲಾಖೆ ಹೊಸ ಕಾನೂನು ತಂದು, ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ಬರೆಯುವವರ ವಿರುದ್ಧ ಕ್ರಮ ವಹಿಸಲಿದೆ. ಪತ್ರಕರ್ತರನ್ನೂ ಜೈಲಿಗೆ ಹಾಕುತ್ತದೆ ಎಂದು ಅಶೋಕ ಎಚ್ಚರಿಸಿದರು.

ರಾಜ್ಯ ಸರ್ಕಾರ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಗ್ಯಾರಂಟಿಗಳನ್ನು ನಿಲ್ಲಿಸಲು ಹೈಕಮಾಂಡ್‌ ಬಿಡುತ್ತಿಲ್ಲ. ಅದಕ್ಕಾಗಿ ಹಣ ಉಳಿಸಲು ಪಿಂಚಣಿ ಸೇರಿ ಎಲ್ಲ ಯೋಜನೆಗಳಲ್ಲಿ ಹಣ ಕಡಿತ ಮಾಡಲಾಗುತ್ತಿದೆ. ಫಲಾನುಭವಿಗಳನ್ನು ಅನರ್ಹ ಮಾಡಲಾಗುತ್ತಿದೆ ಎಂದು ಟೀಕಿಸಿದರು.

‘ಸಿಸೇರಿಯನ್ ಮೂಲಕವೇ ಡಿಕೆಶಿಗೆ ಅಧಿಕಾರ’

‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ನ್ಯಾಚುರಲ್‌ ಆಗಿ ಮುಖ್ಯಮಂತ್ರಿ ಆಗುವ ಯೋಗ ಇಲ್ಲ ಸಿಸೇರಿಯನ್ನೇ ಆಗಬೇಕು’ ಎಂದು ಅಶೋಕ ವ್ಯಂಗ್ಯವಾಡಿದರು. ‘ಅವರ ಭವಿಷ್ಯವನ್ನು ನಾನು ಈ ಹಿಂದೆ ವಿಧಾನಸೌಧದಲ್ಲೇ ಹೇಳಿದ್ದೆ. ಡಿಕೆಶಿಗೆ ಅಧಿಕಾರ ಸುಮ್ಮನೆ ಸಿಗೋದಿಲ್ಲ. ಜಾತಕದಲ್ಲಿ ಗುರು ಶುಕ್ರ ಶನಿ ಯೋಗವಿಲ್ಲ. ಹೀಗಾಗಿ ನೀನು ಒದ್ದು ಅಧಿಕಾರ ಕಿತ್ತುಕೊಳ್ಳಬೇಕು. ನಾರ್ಮಲ್ ಡೆಲಿವರಿ ಆಗಲ್ಲ. ಸಿಸೇರಿಯನ್ ಮೂಲಕವೇ ಆಗಬೇಕು’ ಎಂದು ಕಾಲೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.