ADVERTISEMENT

ವಿವಾದಿತ ಹೇಳಿಕೆ: RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ನಿರಾಳ– ಜಾಮೀನು ಮಂಜೂರು

ಪ್ರಭಾಕರ್‌ ಭಟ್‌ ಅವರು ಮುಸ್ಲಿಂ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂಬ ದೂರಿನ ಪ್ರಕರಣ: ಶ್ರೀರಂಗಪಟ್ಟಣ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು

​ಪ್ರಜಾವಾಣಿ ವಾರ್ತೆ
Published 17 ಜನವರಿ 2024, 13:35 IST
Last Updated 17 ಜನವರಿ 2024, 13:35 IST
ಕಲ್ಲಡ್ಕ ಪ್ರಭಾಕರ ಭಟ್ಟ
ಕಲ್ಲಡ್ಕ ಪ್ರಭಾಕರ ಭಟ್ಟ   

ಮಂಡ್ಯ: ಹನುಮಾನ್‌ ಮಾಲಧಾರಿಗಳ ಸಂಕೀರ್ತನಾ ಯಾತ್ರೆ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರಿಗೆ ಶ್ರೀರಂಗಪಟ್ಟಣದ ಮೂರನೇ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

₹ 2 ಲಕ್ಷ ಮುಚ್ಚಳಿಕೆ ಬಾಂಡ್‌ ಮತ್ತು ಇಬ್ಬರ ಜಾಮೀನು ಷರತ್ತಿಗೆ ಅನುಗುಣವಾಗಿ ನ್ಯಾಯಾಧೀಶರಾದ ಗೋಪಾಲಕೃಷ್ಣ ರೈ ಅವರು ಜಾಮೀನು ಮಂಜೂರು ಮಾಡಿದರು.

ಪ್ರಭಾಕರ್‌ ಭಟ್‌ ಅವರು ಮುಸ್ಲಿಂ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ಪಿರಿಯಾಪಟ್ಟಣದ ನಜ್ಮಾ ನಜೀರ್‌ ಅವರು ಪಟ್ಟಣ ಶ್ರೀರಂಗಪಟ್ಟಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರುದಾರರ ಪರ ಹೈಕೋರ್ಟ್‌ ವಕೀಲ ಎಸ್‌. ಬಾಲನ್‌ ವಾದ ಮಂಡಿಸಿದ್ದರು.

ADVERTISEMENT

ಕಲ್ಲಡ್ಕ ಪ್ರಭಾಕರ ಭಟ್‌ ಅವರ ಪರ ವಕೀಲ ಡಿ. ಚಂದ್ರೇಗೌಡ ಮಾತನಾಡಿ ‘ದೂರುದಾರರ ಹುನ್ನಾರ ವಿಫಲವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಂಡ ಅಂಶಗಳ ವಾಸ್ತವಾಂಶದ ಬಗ್ಗೆ ತನಿಖೆ ನಡೆಸಬೇಕಾದ ಅವಶ್ಯಕತೆ ಇದೆ. ಹೀಗಾಗಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.