ADVERTISEMENT

₹100 ಕೋಟಿಯಲ್ಲಿ ಲಸಿಕೆ ತರಿಸಲು ಕಾಂಗ್ರೆಸ್​ಗೆ ಸಹಕರಿಸಿ: ಸಿದ್ದರಾಮಯ್ಯ ಮನವಿ

​ಪ್ರಜಾವಾಣಿ ವಾರ್ತೆ
Published 25 ಮೇ 2021, 8:44 IST
Last Updated 25 ಮೇ 2021, 8:44 IST
ವಿಧಾನಸಭೆ ವಿರೋಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಲಸಿಕೆ ನೀಡುವಲ್ಲಿ ವಿಫಲವಾಗಿದೆ. ಹೀಗಾಗಿ. ನಮ್ಮ ಪಕ್ಷದ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ₹ 100 ಕೋಟಿ ವೆಚ್ಚದಲ್ಲಿ ಲಸಿಕೆ ಖರೀದಿಸಿ, ಜನರಿಗೆ ನೀಡಲು ನಿರ್ಧರಿಸಿದ್ದೇವೆ. ಈ ಕಾರ್ಯಕ್ಕೆ ಸರ್ಕಾರ ಸಹಕರಿಸಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಧಾನಸಭೆ ವಿರೋಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಈ ಸಂಬಂಧ ವಿಡಿಯೊ ಬಿಡುಗಡೆ ಮಾಡಿರುವ ಅವರು, ‘ಜಗತ್ತಿನಲ್ಲಿ ಮತ್ತು ದೇಶದಲ್ಲಿ ಯಾರು ಕೋವಿಡ್‌ ಲಸಿಕೆ ಪಡೆದಿದ್ದಾರೊ ಅವರಲ್ಲಿ, ರೋಗ ಹರಡುವಿಕೆ ಹಾಗೂ ಮರಣ ಪ್ರಮಾಣ ಕಡಿಮೆ ಆಗಿದೆ ಎನ್ನುವುದು ಸಾಬೀತಾಗಿದೆ. ಲಸಿಕೆ ಒದಗಿಸಬೇಕಾದ್ದು ಕೇಂದ್ರ ಸರ್ಕಾರದ ಕರ್ತವ್ಯ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದನ್ನು ಜನರಿಗೆ ನೀಡಲು ಜವಾಬ್ದಾರರು’ ಎಂದು ಹೇಳಿದ್ದಾರೆ.

‘ರಾಜ್ಯದಲ್ಲಿ ಕೂಡಾ ಲಸಿಕೆ ಅಭಾವದಿಂದ ವಿಷಮ ಪರಿಸ್ಥಿತಿ ನಿರ್ಮಾಣವಾಗಿದೆ. ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕನಾಗಿರುವ ನಾನು ಮತ್ತು ಪಕ್ಷದ ಮುಖಂಡರು ಚರ್ಚಿಸಿ, ನಮ್ಮ ಶಾಸಕರಿಗೆ ಬರುವ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ₹ 100 ಕೋಟಿ ಲಸಿಕೆ ಖರೀದಿಗೆ ವಿನಿಯೋಗಿಸಲು ತೀರ್ಮಾನಿಸಿದ್ದೇವೆ. ಪಕ್ಷದ ಎಲ್ಲ ಶಾಸಕರು ಒಪ್ಪಿಕೊಂಡಿದ್ದಾರೆ. ಸಂಗ್ರಹವಾಗಿರುವ ₹ 100 ಕೋಟಿಯನ್ನು ವಿನಿಯೋಗಿಸಿ ಲಸಿಕೆ ತರಿಸಿ ಜನರಿಗೆ ನೀಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ಇದಕ್ಕೆ ಜನರ ಹಾಗೂ ಸರ್ಕಾರದ ಸಹಕಾರ ಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.