ADVERTISEMENT

ಲಾಕ್‌ಡೌನ್‌ ಭೀತಿ: ದಿನಸಿ, ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

ಮಳಿಗೆಗಳಲ್ಲಿ ಜನಜಂಗುಳಿ

​ಪ್ರಜಾವಾಣಿ ವಾರ್ತೆ
Published 8 ಮೇ 2021, 19:31 IST
Last Updated 8 ಮೇ 2021, 19:31 IST
ವಿಜಯನಗರದ ಡಿಮಾರ್ಟ್‌ ಮಳಿಗೆಯಲ್ಲಿ ಸಾಲುಗಟ್ಟಿದ್ದ ಗ್ರಾಹಕರು – ಪ್ರಜಾವಾಣಿ ಚಿತ್ರ
ವಿಜಯನಗರದ ಡಿಮಾರ್ಟ್‌ ಮಳಿಗೆಯಲ್ಲಿ ಸಾಲುಗಟ್ಟಿದ್ದ ಗ್ರಾಹಕರು – ಪ್ರಜಾವಾಣಿ ಚಿತ್ರ   

ಬೆಂಗಳೂರು:ಸೋಮವಾರದಿಂದ ಕೊರೊನಾ ಬಿಗಿ ಕ್ರಮಗಳನ್ನು ಜಾರಿ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಇದರ ಬೆನ್ನಲ್ಲೇಬೆಂಗಳೂರಿಗರು ಲಾಕ್‌ಡೌನ್‌ ಜಾರಿಯಾಗುತ್ತದೆ ಎಂಬ ಭೀತಿಯಲ್ಲಿ ಶನಿವಾರವೇ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು.

ಸೋಮವಾರದಿಂದ 14 ದಿನ ರಾಜ್ಯದಲ್ಲಿ ಲಾಕ್‌ಡೌನ್‌ ಮಾಡುವುದಾಗಿ ಸರ್ಕಾರ ಶುಕ್ರವಾರ ಘೋಷಿಸಿತ್ತು. ಈ ವೇಳೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸುವುದಾಗಿಯೂ ಹೇಳಿತ್ತು. ಆದರೂ, ಈ ಬಿಗಿ ನಿಯಮ ಜಾರಿಯಾಗುವ ಎರಡು ದಿನ ಮುನ್ನವೇ ಜನರ ಖರೀದಿ ಭರಾಟೆ ಜೋರಾಗಿತ್ತು.

ಸೂಪ‍ರ್‌ ಮಾರ್ಕೆಟ್‌ಗಳು, ದಿನಸಿ ಅಂಗಡಿಗಳು, ತರಕಾರಿ, ಹಣ್ಣು ಅಂಗಡಿಗಳಲ್ಲಿ ಭಾರಿ ಸಂಖ್ಯೆಯಲ್ಲಿ ಗ್ರಾಹಕರು ಕಂಡುಬಂದರು. ಅಗತ್ಯ ವಸ್ತುಗಳನ್ನು ದಾಸ್ತಾನು ಮಾಡಿಕೊಳ್ಳುವ ಸಲುವಾಗಿ ಜನ ಕುಟುಂಬ ಸಮೇತ ಮಳಿಗೆಗಳಿಗೆ ಬಂದಿದ್ದರು. ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ ಖರೀದಿಗೆ ಅನುಮತಿ ನೀಡಿದ್ದರಿಂದ ಮಳಿಗೆಗಳ ಎದುರು ಜನ ಸಾಲುಗಟ್ಟಿ ಗುಂಪು ಸೇರಿದ್ದರು. ತಿಂಗಳಿಗೆ ಆಗುವಷ್ಟು ಅಗತ್ಯ ವಸ್ತುಗಳನ್ನು ಖರೀದಿಸಿ ಮನೆಗಳಿಗೆ ಕೊಂಡೊಯ್ದರು.

ADVERTISEMENT

ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದ್ದರೂ ಜನ ಖರೀದಿಗಾಗಿ ಮನೆಯಿಂದ ಹೊರಬಂದಿದ್ದ ನಗರದ ರಸ್ತೆಗಳಲ್ಲಿ ವಾಹನ ಸಂಚಾರ ಎಂದಿನಂತೆಯೇ ಇತ್ತು. ಕೆಲವೆಡೆ ವಾಹನ ದಟ್ಟಣೆಯೂ ಆಗಿತ್ತು.

ವಿಜಯನಗರದ ಡಿಮಾರ್ಟ್‌ ಮಳಿಗೆಯ ಹೊರಭಾಗದವರೆಗೆ ಗ್ರಾಹಕರು ಸಾಲುಗಟ್ಟಿ ನಿಂತಿದ್ದರು. 10 ಗಂಟೆಯ ನಂತರವೂ ಜನ ಖರೀದಿಯಲ್ಲಿ ತೊಡಗಿದ್ದರಿಂದ ಪೊಲೀಸರು ಸ್ಥಳಕ್ಕೆ ಬಂದು, ಮಳಿಗೆಯ ಬಾಗಿಲು ಮುಚ್ಚಿಸಿದರು.

ಮಾರುಕಟ್ಟೆಗಳಲ್ಲೂ ಭರಾಟೆ: ಕೆ.ಆರ್‌.ಮಾರುಕಟ್ಟೆ ಅಕ್ಕಪಕ್ಕದ ಮಳಿಗೆಗಳಲ್ಲಿ ಬೆಳಿಗ್ಗೆ ಮಾತ್ರ ವ್ಯಾಪಾರಕ್ಕೆ ಅನುಮತಿ ನೀಡಲಾಗಿತ್ತು. ತರಕಾರಿ ಮತ್ತು ಹಣ್ಣು ಖರೀದಿಯಲ್ಲಿ ಜನ ತೊಡಗಿದ್ದರು. ಈ ವೇಳೆ ಕೆಲವು ಕಡೆ ಜನ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.