ADVERTISEMENT

ಸರ್ಕಾರಕ್ಕೆ ಕೈಯೊಡ್ಡಿದ ಸಾರಿಗೆ ನಿಗಮಗಳು: ₹ 332 ಕೋಟಿ ನೀಡಿದರೆ ವೇತನ!

1.35 ಲಕ್ಷ ಸಿಬ್ಬಂದಿಗೆ ಸಂಕಷ್ಟ

ರಾಜೇಶ್ ರೈ ಚಟ್ಲ
Published 26 ಏಪ್ರಿಲ್ 2020, 20:00 IST
Last Updated 26 ಏಪ್ರಿಲ್ 2020, 20:00 IST
   
""

ಬೆಂಗಳೂರು: ಸಾರಿಗೆ ಇಲಾಖೆಗೆ ರಾಜ್ಯ ಸರ್ಕಾರ ₹ 332.04 ಕೋಟಿ ನೀಡದೇ ಇದ್ದರೆ ನಾಲ್ಕೂ ನಿಗಮಗಳ (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ಕರ್ನಾಟಕ, ಈಶಾನ್ಯ ಕರ್ನಾಟಕ) 1.35 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗೆ ಏಪ್ರಿಲ್‌ ತಿಂಗಳ ವೇತನ ಇಲ್ಲ!

ಈ ಬಗ್ಗೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ಪ್ರಧಾನ ಕಾರ್ಯದರ್ಶಿ (ಸಾರಿಗೆ) ಗೌರವ್ ಗುಪ್ತಾ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಸಾರಿಗೆ ನಿಗಮಗಳು ಸಾರಿಗೆ ಆದಾಯದ ಶೇ 5.55ರಷ್ಟನ್ನು (ತೆರಿಗೆ ಮೇಲಿನ ಶೇ 11ರಷ್ಟು ಮೇಲು ಕರ ಸೇರಿದಂತೆ) ಮೋಟಾರು ವಾಹನ ತೆರಿಗೆಯಾಗಿ ಸರ್ಕಾರಕ್ಕೆ ಪಾವತಿಸುತ್ತಿದೆ. ಸದ್ಯದ ಸಂಕಷ್ಟ ಸ್ಥಿತಿಯಲ್ಲಿ 2020–21ನೇ ಸಾಲಿನ ಮೋಟಾರು ವಾಹನ ತೆರಿಗೆ ಮೊತ್ತ ಅಂದಾಜು ₹497.48 ಕೋಟಿ ಪಾವತಿಸಲು ಕೂಡಾ ಸಾಧ್ಯವಿಲ್ಲ. ಹೀಗಾಗಿ ಇದಕ್ಕೂ ವಿನಾಯಿತಿ ನೀಡಬೇಕು’ ಎಂದೂ ಪತ್ರದಲ್ಲಿ ಕೋರಲಾಗಿದೆ.

ADVERTISEMENT

ವಾಹನ ತೆರಿಗೆ ಎಷ್ಟು?: 2019–20 ನೇ ಸಾಲಿನಲ್ಲಿ ನಾಲ್ಕೂ ನಿಗಮಗಳು ಒಟ್ಟು₹ 375.44 ಕೋಟಿ ಮೋಟಾರು ವಾಹನ ತೆರಿಗೆ ಪಾವತಿಸಿವೆ. ಈ ಪೈಕಿ, ಕೆಎಸ್‌ಆರ್‌ಟಿಸಿ ₹ 178.53 ಕೋಟಿ, ಬಿಎಂಟಿಸಿ ₹ 30.81 ಕೋಟಿ (ಮೊದಲ ತ್ರೈಮಾಸಿಕ ಮೊತ್ತವಿದು. ಉಳಿದ ಮೂರು ತ್ರೈಮಾಸಿಕ ಕಂತುಗಳ ಒಟ್ಟು ₹ 92.43 ಕೋಟಿ ಪಾವತಿಸಿಕೊಳ್ಳದೆ ಉಳಿಸಿಕೊಳ್ಳಲು ಸರ್ಕಾರ ಅನುಮತಿ ನೀಡಿತ್ತು),ವಾಯವ್ಯ ₹ 84.10 ಕೋಟಿ, ಈಶಾನ್ಯ ₹ 82 ಕೋಟಿ ಪಾವತಿಸಿದೆ.

‘2020–21ನೇ ಸಾಲಿನಲ್ಲಿ ಪಾವತಿಸಬೇಕಾದ ಮೊತ್ತ ಅಂದಾಜು ಕೆಎಸ್‌ಆರ್‌ಟಿಸಿ ₹ 198.19 ಕೋಟಿ, ಬಿಎಂಟಿಸಿ ₹ 117.91 ಕೋಟಿ, ವಾಯವ್ಯ ₹ 95.38 ಕೋಟಿ, ಈಶಾನ್ಯ ₹ 86 ಕೋಟಿ ಆಗಬಹುದು. ಇದಕ್ಕೆ ವಿನಾಯಿತಿ ನೀಡಿದರೆ ಅಷ್ಟು ಹಣ ಉಳಿತಾಯ ಆಗಲಿದೆ’ ಎಂದೂ ಪತ್ರದಲ್ಲಿ ವಿವರಿಸಲಾಗಿದೆ.

‘ಕೊರೊನಾದಿಂದ ಸಾರಿಗೆ ನಿಗಮಗಳ ಆದಾಯ ಸಂಪೂರ್ಣ ನಿಂತುಹೋಗಿದೆ. ಈ ತುರ್ತು ಆರ್ಥಿಕ ಪರಿಸ್ಥಿತಿಯಲ್ಲಿ ತನ್ನ ಅಂಗ ಸಂಸ್ಥೆಯಾದ ಸಾರಿಗೆ ನಿಗಮಗಳ ಸಿಬ್ಬಂದಿಯ ಅನ್ನದಾತರ ಸ್ಥಾನದಲ್ಲಿ ನಿಂತು ರಾಜ್ಯ ಸರ್ಕಾರ ಸಹಾಯ ಹಸ್ತ ನೀಡಬೇಕು. ವಿಶೇಷ ಆರ್ಥಿಕ ನೆರವಿನ ಪ್ಯಾಕೇಜ್‌ ನೀಡಬೇಕು’ ಎಂದೂ ಪತ್ರದಲ್ಲಿ ಮನವಿ ಮಾಡಲಾಗಿದೆ.

‘ಎಲ್ಲ ಸಿಬ್ಬಂದಿ ಹಾಗೂ ಅವರ ಅವಲಂಬಿತರು ಜೀವನ ಸಾಗಿಸಲು ಮಾಸಿಕ ವೇತನವನ್ನು ನಿಗದಿತ ದಿನ ಬಿಡುಗಡೆ ಮಾಡುವುದು ನಿಗಮಗಳ ಪ್ರಾಥಮಿಕ ಆದ್ಯತೆಯಾಗಿದೆ. ಏಪ್ರಿಲ್‌ ತಿಂಗಳಲ್ಲಿ ಸಾರಿಗೆ ನಿಗಮಗಳ ಕಾರ್ಯಾಚರಣೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ಈ ತಿಂಗಳ ವೇತನ ಪಾವತಿಸಲು ಯಾವುದೇ ನಗದು ಆದಾಯ ಸಂಗ್ರಹ ಆಗುವುದಿಲ್ಲ. ಹೀಗಾಗಿ, ಸದ್ಯದ ಸಂಕಷ್ಟದಿಂದ ಪಾರಾಗಲು ರಾಜ್ಯ ಸರ್ಕಾರ ಅನುದಾನ ನೀಡುವುದೊಂದೇ ಮಾರ್ಗ’ ಎಂದೂ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.