ADVERTISEMENT

ವಾಹನ ಬಳಕೆಗೆ ನಿರ್ಬಂಧ: ಗುಡ್ಡಗಾಡು, ಕುಗ್ರಾಮಗಳಿಗೆ ಸಾಮಗ್ರಿ ಒಯ್ಯುವ ಸವಾಲು

ಪೊಲೀಸರ ಕಾರ್ಯವೈಖರಿಯಿಂದ ಗ್ರಾಮಸ್ಥರು ಹೈರಾಣ

​ಪ್ರಜಾವಾಣಿ ವಾರ್ತೆ
Published 11 ಮೇ 2021, 19:31 IST
Last Updated 11 ಮೇ 2021, 19:31 IST
ಕೊಡಗು ಜಿಲ್ಲೆ ಗೋಣಿಕೊಪ್ಪಲಿನಲ್ಲಿ ಗ್ರಾಹಕರೊಬ್ಬರು ಸೋಮವಾರ ಅಕ್ಕಿ ಚೀಲ, ತರಕಾರಿ ಕಷ್ಟಪಟ್ಟು ಒಯ್ಯುತ್ತಿರುವುದು
ಕೊಡಗು ಜಿಲ್ಲೆ ಗೋಣಿಕೊಪ್ಪಲಿನಲ್ಲಿ ಗ್ರಾಹಕರೊಬ್ಬರು ಸೋಮವಾರ ಅಕ್ಕಿ ಚೀಲ, ತರಕಾರಿ ಕಷ್ಟಪಟ್ಟು ಒಯ್ಯುತ್ತಿರುವುದು   

ಬೆಂಗಳೂರು: ಕೊರೊನಾ ಸೋಂಕು ತಡೆಯಲು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಹನಗಳ ಬಳಕೆಗೆ ನಿರ್ಬಂಧ ಹೇರಿದ್ದು ಇದರಿಂದ ಗುಡ್ಡಗಾಡು ಪ್ರದೇಶಗಳು, ಪಟ್ಟಣಗಳಿಂದ ದೂರ ಇರುವ ಗ್ರಾಮಗಳ ಜನರಿಗೆ ಸಮಸ್ಯೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ನಗರ ಹಾಗೂ ಪಟ್ಟಣ ಪ್ರದೇಶಗಳ ಒಳಗೆ ವಾಹನಗಳ ಪ್ರವೇಶ ನಿರ್ಬಂಧಿಸಿದ್ದರಿಂದ ಜನರು ಸಾಮಗ್ರಿ ಹೊತ್ತೊಯ್ಯುವ ಸಂಕಷ್ಟ ಎದುರಾಗಿದೆ. ಜನರು ಅಕ್ಕಿ ಚೀಲ, ಗ್ಯಾಸ್‌ ಸಿಲಿಂಡರ್‌, ತರಕಾರಿ, ಬೇಳೆ–ಕಾಳುಗಳನ್ನು ದೂರದ ಮನೆಗಳಿಗೆ ಕಷ್ಟಪಟ್ಟು ಹೊತ್ತೊಯ್ದರು. ಕಾಫಿ ತೋಟಗಳಲ್ಲಿ ಕಾರ್ಮಿಕರು ಇನ್ನಿಲ್ಲದ ಪಡಿಪಾಟಲು ಪಡುತ್ತಿದ್ದಾರೆ.

‘ತೋಟದ ಮಾಲೀಕರ ವಾಹನದಲ್ಲೂ ಪಟ್ಟಣ ಪ್ರದೇಶಕ್ಕೆ ಬರುವಂತಿಲ್ಲ. ಇತ್ತ, ಬಾಡಿಗೆ ಆಟೊಗಳಲ್ಲೂ ಧಾವಿಸುವಂತಿಲ್ಲ. ನಿಗದಿಪಡಿಸಿದ ಬೆಳಿಗ್ಗೆ 6ರಿಂದ 10 ಗಂಟೆಯ ಒಳಗೆ ದೂರದ ಶ್ರೀಮಂಗಲದಿಂದ ಗೋಣಿಕೊಪ್ಪಲಿಗೆ ನಡೆದು ಬರುವುದಾದರೂ ಹೇಗೆ?’ ಎಂದು ಕಾರ್ಮಿಕರು ಅಳಲು ತೋಡಿಕೊಳ್ಳುತ್ತಾರೆ.

ADVERTISEMENT

‘ನಿಯಮದಲ್ಲಿ ಕೆಲವೊಂದು ಮಾರ್ಪಾಡು ಮಾಡಿಕೊಳ್ಳಲಾಗಿದೆ. ವಾಹನಗಳಲ್ಲಿ ಸಾಮಗ್ರಿ ಕೊಂಡೊಯ್ಯಲು ಬುಧವಾರ ಅವಕಾಶ ಕಲ್ಪಿಸಲಾಗುವುದು’ ಎಂದು ಜಿಲ್ಲಾಡಳಿತ ತಿಳಿಸಿದೆ.

ಮಳೆಯಲ್ಲಿ ಬರುವ ಕಷ್ಟ: ಪಶ್ಚಿಮ ಘಟ್ಟಗಳ ಅಂಚಿನಲ್ಲಿರುವ ಹಾಜನ ಸಕಲೇಶಪುರ ತಾಲ್ಲೂಕಿನ ಯಸಳೂರು, ಹೆತ್ತೂರು ಹಾಗೂ ಹಾನುಬಾಳು ಹೋಬಳಿಯು ಗುಡ್ಡಗಾಡು ಪ್ರದೇಶದಿಂದಲೇ ಕೂಡಿದೆ. 20ಕ್ಕೂ ಹೆಚ್ಚು ಹಳ್ಳಿಗಳ ಜನರು ಅಗತ್ಯ ವಸ್ತುಗಳ ಖರೀದಿಗೆ ಸಕಲೇಶಪುರ ಪಟ್ಟಣಕ್ಕೆ ಬರಬೇಕಾದರೆ 10 ರಿಂದ 15 ಕಿ.ಮೀ ಬರಬೇಕು.

ಖರೀದಿಗೆ ನಡೆದು ಹೋಗಬೇಕೆಂಬ ನಿಯಮ, ಪೊಲೀಸರ ಕಾರ್ಯಶೈಲಿಯಿಂದ ಜನರು ಹೈರಾಣಾಗಿದ್ದಾರೆ. ಕೆಲ ದಿನಗಳಿಂದ ಮಲೆನಾಡು ಭಾಗದಲ್ಲಿ ಮಳೆ ಬರುತ್ತಿದ್ದು, ಕೃಷಿ ಚಟುವಟಿಕೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಲು ಕಷ್ಟವಾಗುತ್ತಿದೆ.

‘ಲಾಕ್‌ಡೌನ್‌ ಅವಧಿಯಲ್ಲಿ ಗುಡ್ಡಗಾಡು ಪ್ರದೇಶದ ಜನರು ದಿನಸಿ ಖರೀದಿಸಲು ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು. ಗ್ರಾಮಗಳ ಸಮೀಪದಲ್ಲೇ ದಿನಸಿ ಖರೀದಿಸಲು ವ್ಯವಸ್ಥೆ ಮಾಡುವ ಕುರಿತು ಹಿರಿಯ ಅಧಿಕಾರಿಗಳ ಜತೆ ಚರ್ಚಿಸಲಾಗುವುದು’ ಎಂದು ಸಕಲೇಪುರ ತಾಲ್ಲೂಕಿನ ಉಪ ತಹಶೀಲ್ದಾರ್‌ ಕೆ.ಆರ್‌.ಗಂಗಾಧರ್‌ ತಿಳಿಸಿದರು.

ಸಾಮಗ್ರಿ ಖರೀದಿಸಲು ಹತ್ತಿಪ್ಪತ್ತು ಕಿ.ಮೀ ನಡಿಗೆ!
ಶಿವಮೊಗ್ಗ:
ಲಾಕ್‌ಡೌನ್‌ ಕಠಿಣ ನಿರ್ಬಂಧಗಳ ಪರಿಣಾಮ ಅರಣ್ಯ ಪ್ರದೇಶಗಳ ಒಳಗೆ ಬದುಕುವ ಮಲೆನಾಡಿಗರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಗತ್ಯ ಸಾಮಗ್ರಿ ಖರೀದಿಗೆ ಹತ್ತಿಪ್ಪತ್ತು ಕಿ.ಮೀ ನಡೆಯಬೇಕಾದ ಸ್ಥಿತಿ ಇದೆ.

ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ, ಸಾಗರದ ಅರಣ್ಯ ಪ್ರದೇಶಗಳ ಒಳಗಿನ ಒಂದು ಊರೆಂದರೆ ಹತ್ತಾರು ಕಿ.ಮೀ. ವಿಸ್ತಾರದಲ್ಲಿ ಇರುವ ಏಳೆಂಟು ಮನೆಗಳ ಸಮೂಹ. ಇಲ್ಲಿ ಸಾಮಗ್ರಿ ಖರೀದಿಸಲು ಹತ್ತಾರು ಕಿ.ಮೀ. ಸಾಗಬೇಕು. ತೀರ್ಥಹಳ್ಳಿ ತಾಲ್ಲೂಕಿನ ಗಾರ್ಡರ ಗದ್ದೆಯ ಜನರು ಜ್ವರದ ಮಾತ್ರೆ ತೆಗೆದುಕೊಳ್ಳಲೂ 10 ಕಿ.ಮೀ. ದೂರದ ನಾಲೂರಿಗೆ, ಮಲ್ಲಂದೂರಿನ ಜನರು ಬೆಂಕಿ ಪೊಟ್ಟಣ ಬೇಕೆಂದರೂ 8 ಕಿ.ಮೀ. ದೂರದ ಆಗುಂಬೆಗೆ ಬರಬೇಕು. ಸಾಗರ ತಾಲ್ಲೂಕಿನ ಜೆನ್ನಿ, ಸುಂಕದ ಮನೆ, ಕುಡುಗುಂಜಿ ಜನರು 18 ಕಿ.ಮೀ. ದೂರದ ಜೋಗ, ಕಾರ್ಗಲ್‌ಗೆ ತೆರಳಬೇಕು. ವಾಹನ ಬಳಕೆ ಇಲ್ಲದೆ ಅಲ್ಲಿನ ಜನರು ಅಷ್ಟು ದೂರ ನಡೆದೇ ಬರುತ್ತಿದ್ದಾರೆ.

‘ಮಲ್ಲಂದೂರಿನ ಶೇ 99ರಷ್ಟು ಜನರು ಕೂಲಿ ಕಾರ್ಮಿಕರು. ನಿರ್ಬಂಧಗಳ ಕಾರಣ ಆಗುಂಬೆಗೆ ಬಂದು ಹೋಗಲು ಹೆದರುತ್ತಿದ್ದಾರೆ. ಸರ್ಕಾರದ ನಿಯಮಗಳಿಂದ ಮಲೆನಾಡಿನ ಜನರಿಗೆ ಸಾಕಷ್ಟು ತೊಂದರೆಯಾಗಿದೆ’ ಎನ್ನುತ್ತಾರೆ ಆಗುಂಬೆ ಗ್ರಾಮ ಪಂಚಾಯಿತಿ ಸದಸ್ಯ ಗುಡ್ಡೇಕೇರಿ ಶಶಾಂಕ್ ಹೆಗ್ಡೆ.

‘ಭಾರತೀಪುರದಲ್ಲಿ ನಮ್ಮ ಮನೆ ಇದೆ. ತೀರ್ಥಹಳ್ಳಿ ಪಟ್ಟಣ ದಾಟಿ, ಮುತ್ತಿಹರಿಹರಪುರದಲ್ಲಿ ತೋಟವಿದೆ. ನಿತ್ಯ
ಅಲ್ಲಿಗೆ ಹೋಗಿ ಬರಬೇಕು. ಪೊಲೀಸರಿಗೆ ವಿವರ ನೀಡಿ ಸಾಕಾಗಿದೆ’ ಎನ್ನುತ್ತಾರೆ ರೈತ ಕಡಿದಾಳ್‌ ದಯಾನಂದ್.

ಉತ್ತರಕನ್ನಡ: ಈವರೆಗೆ ಸುಸೂತ್ರ
ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರೆಗೆ ದಿನಸಿ ಪೂರೈಕೆಯಲ್ಲಿ ಕೊರತೆಯಾಗಿಲ್ಲ. ಬಹುತೇಕ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳು ಸದಸ್ಯರ ಮನೆ ಬಾಗಿಲಿಗೇ ಅಗತ್ಯ ವಸ್ತು ಪೂರೈಸುತ್ತಿವೆ.

ಶಿರಸಿ ತಾಲ್ಲೂಕಿನ ಕುಗ್ರಾಮಗಳಾದ ಮತ್ತಿಘಟ್ಟಾ, ದೇವನಳ್ಳಿ ಭಾಗದಲ್ಲಿ ಈ ಕ್ರಮ ಜಾರಿಯಲ್ಲಿದೆ. ಉಳಿದ ಗ್ರಾಮಗಳಲ್ಲೂ ಇಂತಹ ಪ್ರಯತ್ನ ನಡೆದಿದೆ. ಸಿದ್ದಾಪುರದಲ್ಲಿ ದಿನಸಿ ವಸ್ತುಗಳಿಗೆ ಸಮಸ್ಯೆಯಾದರೆ ಸಹಾಯವಾಣಿ ಸಂಪರ್ಕಿಸಲು ಅಧಿಕಾರಿಗಳು ಸೂಚಿಸಿದ್ದಾರೆ.

ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಗತ್ಯ ಸಾಮಗ್ರಿಗಳ ಖರೀದಿಗೆ ಜನರು ವಾಹನ ಬಳಸಲು ಮಂಗಳವಾರ ಅವಕಾಶ ನೀಡಲಾಗಿತ್ತು. ಎಲ್ಲಿಯೂ ಲಾಠಿ ಪ್ರಹಾರ ನಡೆದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೇಟೆಯೊಳಗೆ ವಾಹನ ಸಂಚಾರಕ್ಕೆ ಪೊಲೀಸರು ತಡೆಒಡ್ಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.