ADVERTISEMENT

ಬೆಂಗಳೂರು ಟೆಕಿಗೆ ಕೊರೊನಾ ಸೋಂಕು: ತುರ್ತು ಸಭೆ ಕರೆದ ಆರೋಗ್ಯ ಸಚಿವ ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2020, 2:17 IST
Last Updated 3 ಮಾರ್ಚ್ 2020, 2:17 IST
ಆರೋಗ್ಯ ಸಚಿವ ಶ್ರೀರಾಮುಲು
ಆರೋಗ್ಯ ಸಚಿವ ಶ್ರೀರಾಮುಲು   

ಬೆಂಗಳೂರು: ನಗರದಲ್ಲಿನೆಲೆಸಿದ್ದ ಹೈದರಾಬಾದ್‌ ಮೂಲದ ಟೆಕಿಯೊಬ್ಬರಲ್ಲಿ ಕೊರೊನಾ ವೈರಸ್‌ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ತಮ್ಮ ಅಧಿಕೃತ ನಿವಾಸದಲ್ಲಿ ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು, ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಹೈದರಾಬಾದಿನ ಕೊರೊನಾ ವೈರಸ್‌ ಸೋಂಕು ಪೀಡಿತ ವ್ಯಕ್ತಿಯು ಬೆಂಗಳೂರಿನಿಂದ ತೆರಳಿದ್ದಾಗಿ ತಿಳಿದುಬಂದಿದೆ. ಆದ್ದರಿಂದ, ಈ ವ್ಯಕ್ತಿಯ ಸ್ಥಳೀಯ ವಿಳಾಸದಲ್ಲಿ ನೆಲೆಸಿರುವ ಎಲ್ಲಾ ಸದಸ್ಯರನ್ನು ಈಗಾಗಲೇ ಗುರುತಿಸಿ, ಅವರ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ’ ಎಂದಿದ್ದಾರೆ.

ಜಗತ್ತಿನಾದ್ಯಂತ ಸುಮಾರು 3 ಸಾವಿರಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿರುವ ಕೊರೊನಾ ವೈರಸ್‌ ಸೋಂಕು ಹರಡುವಿಕೆ ಮೇಲೆ ತೀವ್ರ ನಿಗವಹಿಸಲು ಸಚಿವ ಶ್ರೀರಾಮುಲು ಮಂಗಳವಾರ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದಾರೆ.

ADVERTISEMENT

‘ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳವಾರ ಬೆಳಗ್ಗೆ ನನ್ನ ಅಧಿಕೃತ ನಿವಾಸದಲ್ಲಿ ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು, ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದೇನೆ. ಈಗಾಗಲೇ ತಿಳಿಸಿದಂತೆ ನಮ್ಮ ಸರ್ಕಾರವು ಸೋಂಕು ಹರಡದಂತೆ ಎಲ್ಲಾ ರೀತಿಯ ಸಮರ್ಪಕ ಕ್ರಮಗಳನ್ನು ಕೈಗೊಂಡಿದೆ’ ಎಂದು ಶ್ರೀರಾಮುಲು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ದುಬೈನಿಂದ ವಾಪಸಾಗಿದ್ದ ಬೆಂಗಳೂರು ಟೆಕಿ

ದುಬೈನಿಂದ ವಾಪಸಾದ ಎಂಜಿನಿಯರ್ ಎರಡು ದಿನ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದರು. ಅದಾದ ಬಳಿಕ, 10 ದಿನಗಳ ಹಿಂದೆ ಕುಟುಂಬದ ಭೇಟಿಗಾಗಿ ಹೈದರಾಬಾದ್‌ಗೆ ತೆರಳಿದಾಗ ಅವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ.

ಕಂಪನಿ ಕೆಲಸ ನಿಮಿತ್ತ ಫೆ. 17ರಂದು ಬೆಂಗಳೂರಿನ ಎಂಜಿನಿಯರ್‌ ದುಬೈಗೆ ತೆರಳಿದ್ದರು. ಅಲ್ಲಿ, ಹಾಂಗ್‌ಕಾಂಗ್‌ನಿಂದ ಬಂದಿದ್ದ ವ್ಯಕ್ತಿಗಳ ಜತೆ ನಾಲ್ಕು ದಿನ ಕೆಲಸ ಮಾಡಿದ್ದರು.

ಫೆ.20ರಂದು ಬೆಂಗಳೂರಿಗೆ ವಾಪಸಾದ ಅವರು, ಫೆ. 22ರಂದು ಹೈದರಾಬಾದ್‌ಗೆ ಪ್ರಯಾಣಿಸಿದ್ದರು. ಮೊದಲಿಗೆ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಭಾನುವಾರ ಸಂಜೆ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.