ADVERTISEMENT

ಮಂಗಳೂರು | ‘ಕೊರೊನಾಕ್ಕಿಂತಲೂ ಸುದ್ದಿಗಳೇ ಜೀವ ಹಿಂಡಿತ್ತು’

ನೋವು ತೋಡಿಕೊಂಡ ಕೋವಿಡ್–19 ಗೆದ್ದ 10 ತಿಂಗಳ ಮಗುವಿನ ಅಮ್ಮ

ಹರ್ಷವರ್ಧನ ಪಿ.ಆರ್.
Published 22 ಏಪ್ರಿಲ್ 2020, 19:30 IST
Last Updated 22 ಏಪ್ರಿಲ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ‘ಕೊರೊನಾಕ್ಕಿಂತಲೂ ಸುದ್ದಿಗಳೇ ನಮ್ಮ ಜೀವ ಹಿಂಡಿತ್ತು..’ –ಕೋವಿಡ್–19 ಗುಣಮುಖವಾಗಿ ಮನೆ ಸೇರಿರುವ ಬಂಟ್ವಾಳ ತಾಲ್ಲೂಕಿನ ಸಜಿಪನಡು ಗ್ರಾಮದ 10 ತಿಂಗಳ ಮಗುವಿನ ತಾಯಿ ‘ಪ್ರಜಾವಾಣಿ’ ಜೊತೆ ಹೇಳುವಾಗ ಮಾತು ಅರ್ಧಕ್ಕೆ ನಿಂತಿತು. ಗದ್ಗದಿತರಾದ ಅವರು, ಸ್ವಲ್ಪ ಹೊತ್ತು ನಿವಾರಿಸಿಕೊಂಡರು.

‘ಮಾ.22ರಂದು ರಾತ್ರಿ ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸ ಕಂಡ ಕಾರಣ ಆಸ್ಪತ್ರೆಗೆ ಹೋಗಿದ್ದೆವು. ತುರ್ತು ಚಿಕಿತ್ಸೆಗಳನ್ನು ನೀಡಿದ್ದು, ಮರುದಿನ ಮಗು ಚೇತರಿಸಿಕೊಂಡಿತು. ಹೊರಡಲು ಸಿದ್ಧತೆ ಮಾಡಿಕೊಂಡಿದ್ದೆವು. ಆಗ, ಆಸ್ಪತ್ರೆಯವರು, ‘ಮಗು ಹುಷಾರಾಗಿದೆ. ಆದರೆ, ಕೋವಿಡ್–19 ವರದಿ ಬರಬೇಕಾಗಿದೆ’ ಎಂದರು’ ಎಂದು ಅಂದಿನ ಘಟನೆ ಮೆಲುಕು ಹಾಕಿದರು.

‘ಮಾ.25ರಂದು ಮಗುವಿಗೆ ಕೋವಿಡ್–19 ಇದೆ ಎಂಬ ವರದಿ ತಿಳಿಸಿದ್ದು, ಅನಂತರ ನಮ್ಮನ್ನು (ಮಗುವಿನ ತಾಯಿ ಮತ್ತು ಅಜ್ಜಿ) ಪ್ರತ್ಯೇಕ ವಾಸ (ಐಸೋಲೇಷನ್)ದಲ್ಲಿ ಇರಿಸಿದರು. ನಾನು ಧೈರ್ಯಗುಂದಲಿಲ್ಲ. ಮಗು ನನ್ನ ಜೊತೆ ಆರೋಗ್ಯಕರವಾಗಿತ್ತು. ಆ ಬಳಿಕ ಮಗು ಅಥವಾ ನಮಗೆ ಯಾವುದೇ ಗಂಭೀರ ಚಿಕಿತ್ಸೆಯನ್ನೂ ನೀಡಿರಲಿಲ್ಲ. ಅನಂತರದ ಪರೀಕ್ಷೆಗಳಲ್ಲೂ ಮಗುವಿನ ವರದಿ ನೆಗೆಟಿವ್ ಬಂದಿತ್ತು. ನಮ್ಮ(ತಾಯಿ–ಅಜ್ಜಿ) ಎಲ್ಲ ವರದಿಗಳೂ ನೆಗೆಟಿವ್‌ ಆಗಿತ್ತು’ ಎಂದರು.

ADVERTISEMENT

‘ಆದರೆ, ನಮ್ಮನ್ನು ತುರ್ತು ನಿಗಾ ಘಟಕ (ಐಸಿಯು)ದಲ್ಲಿ ಇಟ್ಟಿದ್ದಾರೆ. ಯಾವುದೋ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುದ್ದಾರೆ ಎಂಬಿತ್ಯಾದಿ ತಪ್ಪು ಸುದ್ದಿಗಳು ಹಾಗೂ ನಕಲಿ ಫೋಟೊಗಳು ನಮ್ಮ(ಕುಟುಂಬ) ಧೈರ್ಯವನ್ನೇ ಕಂಗೆಡಿಸಿತು. ಆ ನಮ್ಮ ಸ್ಥಿತಿ ಯಾರಿಗೂ ಬೇಡ. ಇದನ್ನು ಕೇಳಿ ಎಲ್ಲರೂ ನಮಗೆ ಫೋನ್ ಮಾಡಿ ಆತಂಕ ವ್ಯಕ್ತಪಡಿಸುತ್ತಿದ್ದರು. ಕೊನೆಗೊಮ್ಮೆ, ವಿಡಿಯೊ ಕಾಲ್ ಮಾಡಿ ನನ್ನ ಮತ್ತು ಮಗುವಿನ ಮುಖವನ್ನು ನಮ್ಮ ಸಮೀಪದ ಸಂಬಂಧಿಕರಿಗೆ ತೋರಿಸಿದೆ. ‘ನಮಗೇನು ಆಗಿಲ್ಲ’ ಎನ್ನುವಾಗ ನನಗೇ ಕಣ್ಣೀರು ಬಂತು. ಯಾಕೆ ಸುಳ್ಳು ಸುದ್ದಿ, ಭಯಗಳನ್ನು ಬಿತ್ತುತ್ತಾರೆ. ನಾವೇನು ತಪ್ಪು ಮಾಡಿದ್ದೇವೆ?’ ಎಂದು ಬೇಸರದಿಂದ ಪ್ರಶ್ನಿಸಿದರು.

‘ಆಸ್ಪತ್ರೆಯಲ್ಲಿ ನೋಡಿಕೊಂಡರು. ಆದರೆ, ಹೊರಗೆ ಯಾಕೆ ತಪ್ಪು ತಪ್ಪು ಸುದ್ದಿ ಹರಡುತ್ತಾರೆ. ನನ್ನ ಮಗುವಿನ ಆರೋಗ್ಯಕ್ಕಿಂತಲೂ ಸುದ್ದಿಗಳೇ ನಿದ್ದೆಗೆಡಿಸಿವೆ. ಇನ್ನೂ ಕೆಲವರು ನಮ್ಮನ್ನು ನಿಲ್ಲಿಸಿಕೊಂಡು ಫೋಟೊ ತೆಗೆಸಿಕೊಂಡರು. ಇದೆಲ್ಲ ಯಾಕೆ?’ ಎಂದು ಕೆಲ ಕ್ಷಣ ಮೌನವಾದರು. ಪಿಯುಸಿ ಓದಿರುವ ಅವರು, ಇಂಗ್ಲಿಷ್ –ಕನ್ನಡದಲ್ಲಿರುವ ವೈದ್ಯರ ಶಿಫಾರಸು, ವರದಿಗಳನ್ನೆಲ್ಲ ಪಟಪಟನೆ ಹೇಳುತ್ತಾರೆ.

ನಾವು ಅನ್ಯರೇ? ನೆಮ್ಮದಿಯಿಂದ ಬದುಕಬಾರದೇ?:‘ನಾವು ಕೇರಳಕ್ಕೆ ಹೋಗಿಲ್ಲ, ವಿದೇಶದಿಂದ ಯಾರೂ ಬಂದಿಲ್ಲ. ನನ್ನ ಮಗುವಿಗೆ ಕೋವಿಡ್–19 ಎಲ್ಲಿಂದ ಬಂತು? ಎಂದು ಇನ್ನೂ ಪತ್ತೆ ಹಚ್ಚಿಲ್ಲ. ಹೀಗಾಗಿ, ‘ಸೋಂಕು ಇತ್ತೇ?’ ಎಂಬ ಸಂಶಯ ಕಾಡುತ್ತಿದೆ. ಆದರೆ, ಜ್ವರ ಬಂದಿರುವುದನ್ನೇ ಮುಚ್ಚಿಟ್ಟ ಕಾರಣದಿಂದ ಕೋವಿಡ್–19ನಿಂದ ಒಬ್ಬರು ಸತ್ತಿದ್ದಾರೆ ಎನ್ನಲಾಗಿದ್ದರೂ, ಅವರ ಹಿನ್ನೆಲೆ, ಸತ್ಯಾಸತ್ಯತೆಗಳ ಬಗ್ಗೆ ಸುದ್ದಿಗಳೇ ಯಾಕಿಲ್ಲ? ನಾವು ‘ಅನ್ಯ’ರೇ? ಏನು ತಪ್ಪು ಮಾಡಿದ್ದೇವೆ? ನೆಮ್ಮದಿಯಿಂದ ಬದುಕಬಾರದೇ’ ಎಂದು ಮಗುವಿನ ಅಪ್ಪ–ಅಮ್ಮ ಕೇಳುವಾಗ ನೊಂದ ದನಿ ಗಂಟಲು ಕಟ್ಟಿದಂತಿತ್ತು.

‘ನಾವು ಕೇರಳಕ್ಕೆ ಹೋಗಿರಲಿಲ್ಲ...’
‘ನಾವು ಕೇರಳಕ್ಕೆ ಹೋಗಿಲ್ಲ, ವಿದೇಶದಿಂದಲೂ ಬಂದಿಲ್ಲ. ನನ್ನ ಮಗುವಿಗೆ ಕೋವಿಡ್–19 ಎಲ್ಲಿಂದ ಬಂತು? ಎಂದು ಇನ್ನೂ ಪತ್ತೆ ಹಚ್ಚಿಲ್ಲ. ಹೀಗಾಗಿ, ಸೋಂಕು ಇತ್ತೇ? ಇಲ್ವಾ? ಎಂಬ ಸಂಶಯ ಕಾಡುತ್ತಿದೆ’ ಎಂದು ಮಗುವಿನ ಅಪ್ಪ–ಅಮ್ಮ ಬೇಸರದಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.