ADVERTISEMENT

ಲಾಕ್‌ ಡೌನ್‌: ಮನೋವ್ಯಾಧಿಗೆ ಮಾತೇ ಮದ್ದು

ಮಾನಸಿಕ ಸಮಸ್ಯೆಗೆ ಒಳಗಾಗುತ್ತಿರುವ ಜನ

ವರುಣ ಹೆಗಡೆ
Published 2 ಏಪ್ರಿಲ್ 2020, 19:46 IST
Last Updated 2 ಏಪ್ರಿಲ್ 2020, 19:46 IST
   

ಬೆಂಗಳೂರು: ಲಾಕ್‌ಡೌನ್‌ನಿಂದ ಮಾನಸಿಕ ಸಮಸ್ಯೆಗಳಿಗೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ದೇಶದ ವಿವಿಧೆಡೆಯಿಂದ ಪ್ರತಿನಿತ್ಯ ಸರಾಸರಿ 2 ಸಾವಿರ ಮಂದಿರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್‌) ಸಹಾಯವಾಣಿಗೆ ಕರೆ ಮಾಡುತ್ತಿದ್ದಾರೆ.

ಕೊರೊನಾ ಸೋಂಕು ಗಾಳಿಯಲ್ಲಿ ಹರಡುತ್ತದೆಯೇ, ಹೊರಗಡೆ ಹೋದರೆ ಸೋಂಕು ತಗಲುತ್ತದೆಯೇ, ರಾತ್ರಿ ನಿದ್ದೆಯೇ ಬರುತ್ತಿಲ್ಲ, ಮನೆಯಲ್ಲಿ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ, ವ್ಯಸನದಿಂದ ಹೊರಬರಲು ಏನು ಮಾಡಬೇಕು–ಹೀಗೆ ಹಲವು ರೀತಿಯ ಪ್ರಶ್ನೆಗಳು ಸಹಾಯವಾಣಿಗೆ ಬರುತ್ತಿವೆ. ಕರೆ ಸಂದರ್ಭದಲ್ಲೇ ಅವರ ಮನಸ್ಥಿತಿ ಅರಿಯುವ ವೈದ್ಯರು, ಅಗತ್ಯ ಸಲಹೆಗಳನ್ನು ನೀಡುವ ಮೂಲಕ ಸಮಾಧಾನ ಮಾಡುತ್ತಿದ್ದಾರೆ.ಸದ್ಯ ಸಹಾಯವಾಣಿ 50 ಲೈನ್‌ಗಳನ್ನು ಹೊಂದಿದ್ದು, ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಸಮಾಲೋಚನೆ ನಡೆಸಲಾಗುತ್ತಿದೆ.

ಕರ್ನಾಟಕದ ಹೊರತಾಗಿ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಕರೆಗಳು ಬರುತ್ತಿವೆ. ಹಾಗಾಗಿ ಅಲ್ಲಿನ ಭಾಷೆಗಳಿಗೂ ಸೇವೆ ವಿಸ್ತರಿಸಲು ನಿಮ್ಹಾನ್ಸ್ ಮುಂದಾಗಿದೆ. ವಿವಿಧರಾಜ್ಯಗಳ ಮಾನಸಿಕ ಆರೋಗ್ಯ ಕೇಂದ್ರಗಳ ಮೂಲಕವೂ ಸಹಾಯವಾಣಿಯನ್ನು ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದ್ದು, ಅಲ್ಲಿನವರಿಗೂ ಕೌನ್ಸೆಲಿಂಗ್ ಮಾಡುವ ವಿಧಾನದ ಬಗ್ಗೆ ತರಬೇತಿ ನೀಡಲಾಗುತ್ತಿದೆ.

ADVERTISEMENT

ವೈದ್ಯರಿಗೂ ಕೌನ್ಸೆಲಿಂಗ್: ‘ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಅನಿರೀಕ್ಷಿತ ಪರಿಸ್ಥಿತಿಯಿಂದ ಉಂಟಾಗುವ ನಿರೀಕ್ಷಿತ ಮಾನಸಿಕ ಒತ್ತಡದಿಂದ ಹೊರಬರುವುದು ಹೇಗೆ ಎಂದು ವಿವರಿಸುತ್ತಿದ್ದೇವೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಬಿ.ಎನ್. ಗಂಗಾಧರ್ ತಿಳಿಸಿದರು.

‘ಒಂದಷ್ಟು ಲೈನ್‌ಗಳನ್ನು ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿಗೆ ಮೀಸಲಿಡಲು ನಿರ್ಧರಿಸಿದ್ದೇವೆ’ ಎಂದರು.

ವ್ಯಸನದಿಂದ ಹೊರಬರಲು ಪಂಚ ಸೂತ್ರ

* ಬಯಕೆಗಳನ್ನು ಮುಂದೂಡುವುದು

* ಗಮನವನ್ನು ಬೇರೆಡೆಗೆ ಹರಿಸುವುದು

* ದೀರ್ಘವಾಗಿ ಉಸಿರಾಡುವುದು

* ಆಪ್ತರೊಂದಿಗೆ ಚರ್ಚೆ ಮಾಡುವುದು

* ಆಗಾಗ ನೀರನ್ನು ಕುಡಿಯುವುದು

*
ಎರಡರಿಂದ ಮೂರು ನಿಮಿಷದಲ್ಲಿ ಕರೆ ಮಾಡಿದವರಿಗೆ ಉತ್ತರಿಸುತ್ತೇವೆ. ಕೆಲವರು ಹೆಚ್ಚಿನ ಸಮಯ ತೆಗೆದುಕೊಂಡು, ಗೊಂದಲಗಳನ್ನು ನಿವಾರಿಸಿಕೊಳ್ಳುತ್ತಿದ್ದಾರೆ.
–ಡಾ.ಬಿ.ಎನ್. ಗಂಗಾಧರ್, ನಿಮ್ಹಾನ್ಸ್‌ ನಿರ್ದೇಶಕ

*
ವ್ಯಸನಕ್ಕೆ ಒಳಗಾದವರಿಗೆವಿತ್‌ಡ್ರಾವಲ್ ಎಫೆಕ್ಟ್‌ ಕಾಣಿಸಿಕೊಳ್ಳುತ್ತದೆ. ಅವರಿಗೆ ಸರಿಯಾಗಿ ನಿದ್ದೆ ಬರುವುದಿಲ್ಲ. ಏಳು ದಿನದ ಬಳಿಕ ಆ ಸಮಸ್ಯೆ ದೂರವಾಗುತ್ತದೆ.
–ಡಾ. ಶಶಿಧರ್, ನಿಮ್ಹಾನ್ಸ್‌ನ ಮನೋರೋಗ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.