ADVERTISEMENT

ಕೇರಳ ಗಡಿ ಬಂದ್: ದೇವೇಗೌಡರ ಪತ್ರಕ್ಕೆ ಹೀಗಿತ್ತು ಬಿಎಸ್‌ವೈ ಪ್ರತಿಕ್ರಿಯೆ...

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 1:27 IST
Last Updated 5 ಏಪ್ರಿಲ್ 2020, 1:27 IST
ಎಚ್.ಡಿ.ದೇವೇಗೌಡ ಮತ್ತು ಬಿ.ಎಸ್.ಯಡಿಯೂರಪ್ಪ (ಸಂಗ್ರಹ ಚಿತ್ರ)
ಎಚ್.ಡಿ.ದೇವೇಗೌಡ ಮತ್ತು ಬಿ.ಎಸ್.ಯಡಿಯೂರಪ್ಪ (ಸಂಗ್ರಹ ಚಿತ್ರ)   

ಬೆಂಗಳೂರು: ಕರ್ನಾಟಕದ ಪ್ರತಿಯೊಬ್ಬ ವ್ಯಕ್ತಿಯ ಪ್ರಾಣ ರಕ್ಷಣೆ ನನ್ನ ಸರ್ಕಾರದ ಗುರುತರ ಹೊಣೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ತುರ್ತು ಸಂದರ್ಭಗಳಲ್ಲಿ ಕೇರಳ–ಕರ್ನಾಟಕ ಗಡಿ ಪ್ರದೇಶದಲ್ಲಿ ಸಂಚಾರಕ್ಕೆ ಅನುಮತಿ ನೀಡಬೇಕು ಎಂದು ಕೋರಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ಬರೆದಿರುವ ಪತ್ರಕ್ಕೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.

ದೇವೇಗೌಡರ ಪತ್ರಕ್ಕೆ ಪ್ರತಿಕ್ರಿಯೆ ನೀಡಿ ಯಡಿಯೂರಪ್ಪ ಅವರು ಪತ್ರವೊಂದನ್ನು ಬರೆದಿದ್ದು, ಮುಖ್ಯಮಂತ್ರಿಗಳ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅದನ್ನು ಪೋಸ್ಟ್ ಮಾಡಲಾಗಿದೆ.

ADVERTISEMENT

‘ಕೇರಳದ ಕಾಸರಗೋಡಿನಲ್ಲಿ ಕೊರೊನಾ ವೈರಸ್ ಸೋಂಕು (ಕೋವಿಡ್–19) ವ್ಯಾಪಕವಾಗಿ ಹರಡಿದೆ. ಈ ಕುರಿತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ ಮಂಗಳೂರು ಶಾಖೆ ಒದಗಿಸಿರುವ ಅಂಕಿ ಅಂಶ ಭಯಾನಕವಾಗಿದೆ. ನಿಜ ಹೇಳಬೇಕೆಂದರೆ ಕಾಸರಗೋಡಿನಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣ ದಾಖಲಾಗಿವೆ. ಭಾರತೀಯ ವೈದ್ಯಕೀಯ ಸಮಿತಿ ಸೇರಿದಂತೆ ಆರೋಗ್ಯ ಸಂಬಂಧಿ ಸಂಸ್ಥೆಗಳೂ ಗಡಿ ಭಾಗಗಳನ್ನು ಕಟ್ಟುನಿಟ್ಟಾದ ದಿಗ್ಬಂಧನಕ್ಕೆ ಒಳಪಡಿಸಬೇಕೆಂದು ಅಭಿಪ್ರಾಯಪಟ್ಟಿವೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಗಡಿ ಸಂಚಾರ ಬಂದ್ ಮಾಡುವ ನಿರ್ಧಾರ ಕೈಗೊಂಡಿದೆ. ಮಾನವೀಯ ನೆಲೆಯಲ್ಲಿ, ಕೇರಳದ ಸಹೋದರ–ಸಹೋದರಿಯರ ಆರೋಗ್ಯ ಕಾಪಾಡಬೇಕೆಂಬ ಕಳಕಳಿ ನನಗೂ ಇದೆ. ಆದರೆ, ಅಂತಃಕರಣದ ನೆಲೆಯಲ್ಲಿ ನಿರ್ಧಾರ ಕೈಗೊಂಡರೆ ರಾಜ್ಯದ ಜನರ ಶಾಂತಿ–ನೆಮ್ಮದಿ ಹಾಳಾಗಲಿದೆ’ ಎಂದು ದೇವೇಗೌಡರಿಗೆ ಬರೆದಿರುವ ಪತ್ರದಲ್ಲಿ ಯಡಿಯೂರಪ್ಪ ಉಲ್ಲೇಖಿಸಿದ್ದಾರೆ.

ಕೇರಳ-ಕರ್ನಾಟಕ ಗಡಿಯನ್ನು ಆಂಬ್ಯುಲೆನ್ಸ್‌ಗೆ ತೆರೆಯುವ ನಿಟ್ಟಿನಲ್ಲಿ ಪ್ರಧಾನಿಗೆ ತಿಳಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೂ ಏಪ್ರಿಲ್ 2ರಂದು ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.