ಶಿವಮೊಗ್ಗ: ರೈತರ ಬೆಳೆಗೆ ನ್ಯಾಯಯುತ ಬೆಲೆ ದೊರಕಿಸಿಕೊಡಲು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುವ ಸಾಗಾಣಿಕೆ ವೆಚ್ಚ ಸರ್ಕಾರದಿಂದಲೇ ಭರಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರದ ಕೃಷಿ, ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
ಇಲ್ಲಿನ ಪ್ರೇರಣಾ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಶನಿವಾರ ಅನ್ವೇಷನಾ, ನಾವೀನ್ಯತೆ ಮತ್ತು ಉದ್ಯಮಶೀಲತಾ ವೇದಿಕೆ ಆಯೋಜಿಸಿದ್ದ ಮಲೆನಾಡು ನವೋದ್ಯಮಿಗಳ ಶೃಂಗಸಭೆ–2025ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಗಾಣಿಕೆ ವೆಚ್ಚ ಭರಿಸಲಾಗದೇ ಹೆಚ್ಚಿನ ಬೆಲೆ ಸಿಗುವ ಮಾರುಕಟ್ಟೆಗೆ ಉತ್ಪನ್ನಗಳ ಕೊಂಡೊಯ್ಯಲು ರೈತರು ಮನಸ್ಸು ಮಾಡುತ್ತಿಲ್ಲ. ಬದಲಿಗೆ ಸ್ಥಳೀಯವಾಗಿ ಸಿಕ್ಕಷ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕೃಷಿ ಉತ್ಪನ್ನಗಳ ಲಾಭಾಂಶದ ಹೆಚ್ಚಿನ ಪಾಲು ಮಧ್ಯವರ್ತಿಗಳಿಗೆ ಸಿಗುತ್ತಿದೆ. ಅದನ್ನು ತಪ್ಪಿಸಲು ಸಾಗಾಣಿಕೆ ವೆಚ್ಚ ಸರ್ಕಾರವೇ ಭರಿಸಲಿದೆ ಎಂದರು.
ಶಿವಮೊಗ್ಗದ ರೈತ ತಾನು ಬೆಳೆದ ಬೆಳೆಯನ್ನು ದೆಹಲಿ ಮಾರುಕಟ್ಟೆಗೆ ಬೆಳೆ ಕೊಂಡೊಯ್ದರೂ ಅದಕ್ಕೆ ಸಾಗಾಣಿಕೆ ವೆಚ್ಚ ಸಿಗಲಿದೆ. ಇದರಲ್ಲಿ ಶೇ 50ರಷ್ಟು ಕೇಂದ್ರ ಹಾಗೂ ಉಳಿದ ಶೇ 50ರಷ್ಟು ಆಯಾ ರಾಜ್ಯ ಸರ್ಕಾರಗಳು ಭರಿಸಲಿವೆ. ರೈತರು ಮಾತ್ರವಲ್ಲ ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಬೆಳೆಗಳನ್ನು ಮಾರುಕಟ್ಟೆಗೆ ಕೊಂಡೊಯ್ದರೂ ಸಾಗಾಣಿಕೆ ವೆಚ್ಚ ಭರಿಸುವ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದರು.
ರೈತ ಉತ್ಪಾದಕ ಸಂಸ್ಥೆಗಳು ಕೃಷಿ ಕ್ಷೇತ್ರದ ಬೆಳವಣಿಗೆಗೆ ದೊಡ್ಡ ರೀತಿಯಲ್ಲಿ ಕೊಡುಗೆ ನೀಡುತ್ತಿವೆ. ಬ್ರಾಂಡ್‌ಗಳನ್ನು ಸೃಷ್ಟಿಸುತ್ತಿವೆ. ಉತ್ಪನ್ನಗಳಿಗೆ ಮೌಲ್ಯ ವೃದ್ಧಿಸುತ್ತಿವೆ. ರೈತರು ಬೆಳೆಗೆ ವೈಜ್ಞಾನಿಕ ಬೆಲೆಪಡೆಯಲು ಸಹಾಯ ಮಾಡುತ್ತಿವೆ. ಅವರು (ಎಫ್‌ಪಿಒ) ದೇಶದ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಬಹುದು ಎಂದು ಭವಿಷ್ಯ ನುಡಿದ ಶಿವರಾಜ್ ಸಿಂಗ್ ಚೌಹಾಣ್, ದೇಶದಲ್ಲಿ ಎಫ್‌ಪಿಒಗಳ ಸಂಖ್ಯೆ ಹೆಚ್ಚಿಸುವ ಅಗತ್ಯ ಒತ್ತಿ ಹೇಳಿದರು.
ಕೃಷಿ ಉತ್ಪಾದನೆಯ ವೆಚ್ಚ ಕಡಿತ, ಉತ್ತಮ ತಳಿಯ ಬೀಜೋತ್ಪಾದನೆಗೆ ಒತ್ತು, ರಸಗೊಬ್ಬರದ ಮೇಲಿನ ಅವಲಂಬನೆ ಕಡಿಮೆಗೊಳಿಸಿ ಸಾವಯವ ಕೃಷಿಗೆ ಹೆಚ್ಚಿನ ಬಲ ತುಂಬುವುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಕೃಷಿ ಕ್ಷೇತ್ರದ ಜಿಡಿಪಿಯನ್ನು ಈ ವರ್ಷ ಶೇ 3.5ರಿಂದ ಶೇ 4ಕ್ಕೆ ಹೆಚ್ಚಿಸುವ ಗುರಿ ಕೇಂದ್ರ ಸರ್ಕಾರ ಹೊಂದಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಶಾರದ ಪೂರ್ಯನಾಯ್ಕ್, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ಅನ್ವೇಷಣಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ.ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.