ADVERTISEMENT

ಕೆಜಿಎಫ್ ಚಿತ್ರದ ಸಂಗೀತ ಬಳಕೆ:ಕಾಂಗ್ರೆಸ್, ಭಾರತ್ ಜೋಡೊ ಟ್ವಿಟರ್ ಖಾತೆಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 20:07 IST
Last Updated 7 ನವೆಂಬರ್ 2022, 20:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೆಜಿಎಫ್-2 ಚಿತ್ರದ ಸಂಗೀತವನ್ನು ಅನುಮತಿ ಇಲ್ಲದೆ ಬಳಸಿಕೊಂಡಿರುವ ಆರೋಪದ ಮೇರೆಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಮತ್ತು ಭಾರತ್ ಜೋಡೊ ಯಾತ್ರೆಯ ಅಧಿಕೃತ ಟ್ವಿಟರ್ ಖಾತೆಗಳನ್ನು ಇದೇ 21ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲು ನಗರದ ವಾಣಿಜ್ಯ ನ್ಯಾಯಾಲಯ ಮಧ್ಯಂತರ ಆದೇಶ ಮಾಡಿದೆ.

ಕೆಜಿಎಫ್-2 ಚಿತ್ರದ ಸಂಗೀತದ ಹಕ್ಕುಸ್ವಾಮ್ಯ ಹೊಂದಿರುವ ಎಂಆರ್‌ಟಿ ಮ್ಯೂಸಿಕ್ ಕಂಪನಿ ಸಲ್ಲಿಸಿರುವ ಅಸಲು ದಾವೆ ವಿಚಾರಣೆ ನಡೆಸಿದ ನಗರದ 86ನೇ ವಾಣಿಜ್ಯ ನ್ಯಾಯಾಲಯ ಈ ಕುರಿತಂತೆ ಆದೇಶಿಸಿದೆ.

‘ಭಾರತ್ ಜೋಡೊ ಯಾತ್ರೆ ವೇಳೆ ಕೆಜಿಎಫ್-2 ಚಿತ್ರದ ಸಂಗೀತವನ್ನು ಅನುಮತಿ ಇಲ್ಲದೆ ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದನ್ನು ತಡೆಯದೆ ಹೋದರೆ ಅರ್ಜಿದಾರರಿಗೆ ಸಾಕಷ್ಟು ಹಾನಿ ಉಂಟಾಗುತ್ತದೆ ಮತ್ತು ಪೈರಸಿಯನ್ನು ದೊಡ್ಡ ಪ್ರಮಾಣದಲ್ಲಿ ಪ್ರೋತ್ಸಾಹಿಸಿದಂತಾಗುತ್ತದೆ’ ಎಂದು ಆದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ADVERTISEMENT

ಕೆಜಿಎಫ್-2 ಚಿತ್ರದ ಸಂಗೀತವನ್ನು ಅನಧಿಕೃತವಾಗಿ ಬಳಸಿಕೊಂಡ ವಿಚಾರದಲ್ಲಿ ವಿದ್ಯುನ್ಮಾನ ಪರಿಶೋಧನೆ ಮಾಡ
ಬೇಕಿದೆ. ಐಎನ್‌ಸಿ ಇಂಡಿಯಾದ ಟ್ವಿಟರ್, ಭಾರತ್‌ ಜೋಡೊ ಯಾತ್ರೆಯ ಟ್ವಿಟರ್, ಫೇಸ್‌ಬುಕ್, ಯೂ ಟ್ಯೂಬ್, ಇನ್‌ಸ್ಟ್ರಾಗ್ರಾಂ ಸಾಮಾಜಿಕ ಜಾಲತಾಣದ ಅಧಿಕೃತ ಖಾತೆಯಲ್ಲಿರುವ ಹಕ್ಕುಸ್ವಾಮ್ಯ ಮತ್ತು ಬೌದ್ಧಿಕ ಆಸ್ತಿ ಹಕ್ಕಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ವಿದ್ಯುನ್ಮಾನ ಪರಿಶೋಧನೆ ನಡೆಸಲು ವಾಣಿಜ್ಯ ನ್ಯಾಯಲಯದ ಕಂಪೂಟರ್ ವಿಭಾಗದ ಜಿಲ್ಲಾ ಸಿಸ್ಟಮ್ಸ್‌ ಆಡಳಿತಾಧಿಕಾರಿ ಎಸ್.ಎನ್. ವೆಂಕಟೇಶ ಮೂರ್ತಿ ಅವರನ್ನು ಸ್ಥಳೀಯ ಕಮೀಷನರ್ ಆಗಿ ನೇಮಕ ಮಾಡಿ ನ್ಯಾಯಾಲಯ ಆದೇಶಿಸಿದೆ.

‘ಸ್ಥಳೀಯ ಕಮೀಷನರ್ ಅವರು ಕಾಂಗ್ರೆಸ್‌ನ ಅಧಿಕೃತ ವೆಬ್‌ಸೈಟ್ ಮತ್ತು ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ
ರುವ ಸಾಮಗ್ರಿಗಳನ್ನು ಪರಿಶೀಲಿಸಬೇಕು. ಅದನ್ನು ನ್ಯಾಯಾಲಯದ ಸಿಸ್ಟೆಮ್ಯಾಂಡ್‌ನಲ್ಲಿ ಪ್ರತ್ಯೇಕ ಕಾಂಪ್ಯಾಕ್ಟ್ ಡಿಸ್ಕ್ (ಸಿಡಿ) ರೂಪದಲ್ಲಿ ಸಂಗ್ರಹಣೆ ಮಾಡಬೇಕು‘ ಎಂದು ನಿರ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.