ADVERTISEMENT

ಮರಳಿ ಕಾಲೇಜಿಗೆ ಘೋಷ ವಾಕ್ಯದಡಿ ಕಾಲೇಜು: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 19:45 IST
Last Updated 23 ಜೂನ್ 2021, 19:45 IST
ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ
ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ   

ಬೆಂಗಳೂರು: ‘ಮರಳಿ ಕಾಲೇಜಿಗೆ’ ಎನ್ನುವ ಘೋಷವಾಕ್ಯದಡಿ ಕಾಲೇಜುಗಳನ್ನು ಆರಂಭಿಸಲು ಚಿಂತನೆ ನಡೆದಿದೆ. ಹೀಗಾಗಿ, ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲು ತೀರ್ಮಾನಿಸಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ತಿಳಿಸಿದರು.

ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ‘ಕೋವಿಡ್‌ ಮೂರನೇ ಅಲೆಯ ಮುನ್ನೆಚ್ಚರಿಕೆಯೂ ಸೇರಿ ಎಲ್ಲ ಅಂಶಗಳನ್ನು ಒಳಗೊಂಡ ವರದಿಯನ್ನು ಡಾ. ದೇವಿಶೆಟ್ಟಿ ನೇತೃತ್ವದ ಸಮಿತಿ ನೀಡಿದೆ. ಮೊದಲು ಕಾಲೇಜುಗಳನ್ನು ತೆರೆಯುವಂತೆ ಸಮಿತಿ ಶಿಫಾರಸು ಮಾಡಿದೆ. ಜುಲೈ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಉದ್ದೇಶವಿದೆ ಎಂದರು.

‘ಕೇಂದ್ರ ಸರ್ಕಾರ ನೀಡುವ ಮಾರ್ಗಸೂಚಿಗೆ ಕಾಯುತ್ತಿದ್ದೇವೆ. ಈಗಾಗಲೇ 18 ವರ್ಷ ದಾಟಿದ ಎಲ್ಲರಿಗೂ ಲಸಿಕೆ ನೀಡುವ ಕೆಲಸ ಮುಂದುವರಿದಿದೆ. ಅದರಲ್ಲೂ ವಿದ್ಯಾರ್ಥಿಗಳನ್ನು ಆದ್ಯತಾ ಗುಂಪಿಗೆ ಸೇರಿಸಿ ಲಸಿಕೆ ನೀಡಲಾಗುವುದು’ ಎಂದರು.

ADVERTISEMENT

ಲಸಿಕೆ ಮಾತ್ರ ಪರಿಹಾರ: ‘ಕೋವಿಡ್‌ ಡೆಲ್ಟಾ ಪ್ಲಸ್‌ ಸೋಂಕು ರಾಜ್ಯಕ್ಕೆ ಕಾಲಿಟ್ಟಿರುವ ಬಗ್ಗೆ ಮಾಹಿತಿ ಬಂದಿದೆ. ಲಸಿಕೆ ಪಡೆದಿದ್ದರೆ ಯಾವುದೇ ರೂಪಾಂತರ ವೈರಾಣು ಬಂದರೂ ತೊಂದರೆ ಆಗುವುದಿಲ್ಲ. ಎಲ್ಲರೂ ಲಸಿಕೆ ಪಡೆಯುವುದೊಂದೇ ಪರಿಹಾರ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.