ADVERTISEMENT

ವಾರಾಂತ್ಯದ ಕರ್ಫ್ಯೂ ಜಾರಿಗೆ ಎಚ್‌.ಕೆ. ಪಾಟೀಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 16:41 IST
Last Updated 3 ಡಿಸೆಂಬರ್ 2021, 16:41 IST
ಎಚ್‌.ಕೆ.‍‍ಪಾಟೀಲ
ಎಚ್‌.ಕೆ.‍‍ಪಾಟೀಲ   

ಬೆಂಗಳೂರು: ಕೊರೊನಾ ವೈರಾಣುವಿನಓಮೈಕ್ರಾನ್‌ ತಳಿಯ ಸೋಂಕಿನ ಪ್ರಕರಣಗಳು ದೃಢಪಟ್ಟಿರುವುದು ಮತ್ತು ಕೆಲವೆಡೆ ‘ಕ್ಲಸ್ಟರ್‌’ ಮಾದರಿಯಲ್ಲಿ ಸೋಂಕು ವ್ಯಾಪಿಸುತ್ತಿರುವ ಕಾರಣದಿಂದ ರಾಜ್ಯದಲ್ಲಿ ತಕ್ಷಣವೇ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಬೇಕು ಎಂದು ಕಾಂಗ್ರೆಸ್‌ ಶಾಸಕ ಎಚ್‌.ಕೆ. ಪಾಟೀಲ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಯವರಿಗೆ ಶುಕ್ರವಾರ ಪತ್ರ ಬರೆದಿರುವ ಅವರು, ‘ಓಮೈಕ್ರಾನ್‌ ವೈರಾಣು ಎಷ್ಟು ಅಪಾಯಕಾರಿ ಎಂಬುದರ ಕುರಿತು ಇನ್ನೂ ಸ್ಪಷ್ಟ ವರದಿ ಲಭಿಸಿಲ್ಲ. ಇಂತಹ ಸನ್ನಿವೇಶದಲ್ಲಿ ಜನರ ಪ್ರಾಣ ರಕ್ಷಣೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು. ವಾರಾಂತ್ಯದ ಕರ್ಫ್ಯೂ, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸುವುದನ್ನು (ವರ್ಕ್‌ ಫ್ರಂ ಹೋಮ್‌) ಜಾರಿಗೆ ತರಬೇಕು’ ಎಂದು ಒತ್ತಾಯಿಸಿದ್ದಾರೆ.

ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ತನ್ನ 136ನೇ ಸಭೆಯಲ್ಲಿ ತಜ್ಞರು ನೀಡಿರುವ ಸಲಹೆ ಮತ್ತು ಶಿಫಾರಸುಗಳನ್ನು ಬಹಿರಂಗಪಡಿಸಬೇಕು. ಸಭೆಯ ನಡಾವಳಿಗಳನ್ನೂ ತಿಳಿಸಬೇಕು. ವಿದೇಶಗಳಿಂದ ಬರುವ ಎಲ್ಲ ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಬೇಕು. ಕಡ್ಡಾಯ ಪರೀಕ್ಷೆಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

‘ನವೆಂಬರ್‌ 20ರಂದು ನಗರದ ಹೋಟೆಲ್‌ ಒಂದರಲ್ಲಿ ನಡೆದ ವೈದ್ಯರ ಸಮ್ಮೇಳನದಲ್ಲಿ ವಿದೇಶಗಳಿಂದ ಬಂದಿದ್ದ ಹಲವರು ಪಾಲ್ಗೊಂಡಿದ್ದರು. ಓಮೈಕ್ರಾನ್‌ ತಳಿಯ ವೈರಾಣು ಸೋಂಕು ಪತ್ತೆಯಾಗಿರುವ ನಗರದ ವೈದ್ಯರು ಕೂಡ ಆ ಸಭೆಯಲ್ಲಿ ಭಾಗವಹಿಸಿದ್ದರು ಎಂಬ ಮಾಹಿತಿ ಇದೆ. ಸಮ್ಮೇಳನಕ್ಕೆ ಬಂದಿದ್ದ ವಿದೇಶಿ ವೈದ್ಯರು ಕೋವಿಡ್‌ ಪರೀಕ್ಷೆ ಮಾಡಿಸದೇ ನಗರದ ಹಲವೆಡೆ ಸುತ್ತಾಡಿ ಹೋಗಿದ್ದಾರೆ. ಇದರಿಂದ ಓಮೈಕ್ರಾನ್‌ ತಳಿಯ ಕೊರೊನಾ ವೈರಾಣು ಸೋಂಕು ವ್ಯಾಪಕವಾಗಿ ಹರಡಿರುವ ಸಾಧ್ಯತೆ ಇದೆ’ ಎಂದು ಪಾಟೀಲ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.