ADVERTISEMENT

ಕೋವಿಡ್: ರಾಜ್ಯದಲ್ಲಿ ಹೊಸದಾಗಿ 207 ಮಂದಿಯಲ್ಲಿ ಡೆಲ್ಟಾ ವೈರಾಣು ಪತ್ತೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 16:21 IST
Last Updated 2 ಜುಲೈ 2021, 16:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ 207 ಮಂದಿಯಲ್ಲಿ ಡೆಲ್ಟಾ ವೈರಾಣು ಪತ್ತೆಯಾಗಿದೆ. ಈವರೆಗೆ ಈ ತಳಿಯ ವೈರಾಣು ಕಾಣಿಸಿಕೊಂಡ ಪ್ರಕರಣಗಳ ಸಂಖ್ಯೆ 725ಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕಿತರಲ್ಲಿ 88 ಮಂದಿ ಮೃತಪಟ್ಟಿರುವುದು ಶುಕ್ರವಾರ ದೃಢಪಟ್ಟಿದೆ.ಈವರೆಗೆ ಕೋವಿಡ್‌ಗೆ ಸಾವಿಗೀಡಾದವರ ಒಟ್ಟು ಸಂಖ್ಯೆ 35,222ಕ್ಕೆ ತಲುಪಿದೆ. ಮರಣ ಪ್ರಮಾಣ ದರವು ಶೇ 2.94 ರಷ್ಟು ವರದಿಯಾಗಿದೆ. ರಾಜ್ಯದ 25 ಜಿಲ್ಲೆಗಳಲ್ಲಿ ಹೊಸದಾಗಿ ಮರಣ ಪ್ರಕರಣಗಳು ದೃಢಪಟ್ಟಿವೆ. ದಕ್ಷಿಣ ಕನ್ನಡದಲ್ಲಿ 13 ಮಂದಿ, ಬೆಂಗಳೂರಿನಲ್ಲಿ 11 ಮಂದಿ, ಬಳ್ಳಾರಿಯಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಉಳಿದ ಜಿಲ್ಲೆಗಳಲ್ಲಿ 10ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಮರಣ ಪ್ರಕರಣಗಳು ವರದಿಯಾಗಿವೆ.

ರಾಜ್ಯದಲ್ಲಿ ಹೊಸದಾಗಿ 2,984 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಒಂದು ದಿನದ ಅವಧಿಯಲ್ಲಿ 1.55 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಸೋಂಕು ದೃಢ ಪ್ರಮಾಣವು ಶೇ 1.92 ರಷ್ಟು ವರದಿಯಾಗಿದೆ. ಬೆಂಗಳೂರಿನಲ್ಲಿ 593 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು 500 ರ ಗಡಿಯೊಳಗಡೆ ಇವೆ. ಈ ಸಂಖ್ಯೆ 14 ಜಿಲ್ಲೆಗಳಲ್ಲಿ ಎರಡಂಕಿಯಲ್ಲಿದೆ. ಈವರೆಗೆ ಕೋವಿಡ್ ಪೀಡಿತರಾದವರ ಒಟ್ಟು ಸಂಖ್ಯೆ 28.49 ಲಕ್ಷ ದಾಟಿದೆ.

ADVERTISEMENT

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆ ಕಂಡಿದ್ದು, ಸದ್ಯ 53,871 ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸೋಂಕಿತರಲ್ಲಿ 14,337 ಮಂದಿಗೆ ಕಾಯಿಲೆ ವಾಸಿಯಾಗಿದೆ. ಈವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 27.60 ಲಕ್ಷ ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.