ADVERTISEMENT

ಮಡಿಕೇರಿ: ಕೋವಿಡ್‌ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

ವಿಡಿಯೊ ಮಾಡಿ ಕೋವಿಡ್‌ ಆಸ್ಪತ್ರೆ ‘ಅವ್ಯವಸ್ಥೆ ದರ್ಶನ’ ಮಾಡಿಸಿದ ರೋಗಿ

ಅದಿತ್ಯ ಕೆ.ಎ.
Published 24 ಏಪ್ರಿಲ್ 2021, 19:30 IST
Last Updated 24 ಏಪ್ರಿಲ್ 2021, 19:30 IST
ಮಡಿಕೇರಿಯ ಕೋವಿಡ್‌ ಆಸ್ಪತ್ರೆಯ ಸ್ಥಿತಿ
ಮಡಿಕೇರಿಯ ಕೋವಿಡ್‌ ಆಸ್ಪತ್ರೆಯ ಸ್ಥಿತಿ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಸೋಂಕಿತರ ಪ್ರಕರಣಗಳು ಏರಿಕೆಯಾಗುತ್ತಿದ್ದು, ರೋಗಿಗಳು ಪರದಾಡುವ ಸ್ಥಿತಿಯಿದೆ. ಜಿಲ್ಲಾ ಕೇಂದ್ರವಾದ ಮಡಿಕೇರಿಯ ಕೋವಿಡ್‌ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಾಣಿಸುತ್ತಿದ್ದು, ಚಿಕಿತ್ಸೆ ಹಾಗೂ ಬೆಡ್‌ಗೆ ಪರದಾಡುತ್ತಿದ್ದಾರೆ.

ಜಿಲ್ಲೆಯ ಏಳು ಸ್ಥಳಗಳಲ್ಲಿ ಸ್ಥಾಪಿಸಿರುವ ಕೋವಿಡ್‌ ಕೇರ್‌ ಸೆಂಟರ್‌ನಲ್ಲೂ ಅದೇ ಸ್ಥಿತಿಯಿದೆ. ಕಳೆದ ವರ್ಷ ಇಷ್ಟೊಂದು ಸಮಸ್ಯೆ ಆಗಿರಲಿಲ್ಲ. ಆದರೆ, ಈ ವರ್ಷ ಪ್ರಕರಣಗಳು ಏಕಾಏಕಿ ಏರಿಕೆ ಕಾಣಿಸುತ್ತಿರುವ ಪರಿಣಾಮ ಬಹಳಷ್ಟು ಸಮಸ್ಯೆ ಹಾಗೂ ಸವಾಲು ಎದುರಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದ್ದು, ತಕ್ಷಣಕ್ಕೆ ಬಂದವರನ್ನು ಚಿಕಿತ್ಸೆಗೆ ಒಳಪಡಿಸಿ ವಾರ್ಡ್‌ಗೆ ದಾಖಲು ಮಾಡುವುದು ವಿಳಂಬವಾಗುತ್ತಿದೆ. ಕೋವಿಡ್‌ ರೋಗಿಯೊಬ್ಬರು, ಕೋವಿಡ್‌ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದ ವೇಳೆ, ಒಂದೇ ಬೆಡ್‌ನಲ್ಲಿ ಎರಡ್ಮೂರು ಜನರು ಇರುವುದು ಕಂಡುಬಂದಿದ್ದು, ಅದನ್ನು ವಿಡಿಯೊ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಅವರು, ಕೋವಿಡ್ ಆಸ್ಪತ್ರೆಯ ನ್ಯೂನತೆಗಳ ದರ್ಶನ ಮಾಡಿಸಿದ್ದಾರೆ.

ಬೆಳಿಗ್ಗೆಯಿಂದ ಮಕ್ಕಳ ವೈದ್ಯರು ಬರಲೇ ಇಲ್ಲ. ಒಂದೇ ಹಾಸಿಗೆಯಲ್ಲಿ ಮೂರು, ನಾಲ್ಕು ಮಂದಿ ದಾಖಲಾಗಬೇಕಾದ ದುಸ್ಥಿತಿಯಿದೆ ಎಂದೆಲ್ಲಾ ನೋವಿನಿಂದ ಹೇಳಿದ್ದಾರೆ. ಆದರೆ, ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಬೇರೆಯದ್ದೇ ಮಾಹಿತಿ ನೀಡಿದ್ದರು.

ಜಿಲ್ಲೆಯಲ್ಲಿ ಸುಸಜ್ಜಿತವಾದ 56 ಬೆಡ್‍ಗಳ ತೀವ್ರ ನಿಗಾ ಘಟಕ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ಮಕ್ಕಳ ಮತ್ತು ನವಜಾತ ಶಿಶುಗಳಿಗೆ ವಿಶೇಷ ಸೌಲಭ್ಯವಿರುತ್ತದೆ. ಕೋವಿಡ್ ರೋಗಿಗಳಿಗೆ ಡಯಾಲಿಸಿಸ್‍ಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 32 ವೆಂಟಿಲೇಟರ್ ಸೌಲಭ್ಯವಿರುತ್ತದೆ.

ಪಾಸಿಟಿವ್ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದ್ದು, 300 ಹಾಸಿಗೆಗಳ ಜೊತೆಗೆ ಹೆಚ್ಚುವರಿಯಾಗಿ 400 ಹಾಸಿಗೆಗಳ ಒಟ್ಟು 700 ಹಾಸಿಗೆಗಳಿಗೆ ಹೆಚ್ಚಿಸಲು ಕ್ರಮವಹಿಸಲಾಗಿದೆ ಎಂದು ಆರೋಗ್ಯಾಧಿಕಾರಿಗಳು ಸಭೆಯಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.