ADVERTISEMENT

ಸೋಮವಾರದಿಂದ ಕೋವಿಡ್ ಲಸಿಕೆ ವಿತರಣೆ: ಸಚಿವ ಸುಧಾಕರ್‌

ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 12:13 IST
Last Updated 8 ಜನವರಿ 2021, 12:13 IST
ಸಚಿವ ಕೆ. ಸುಧಾಕರ್‌
ಸಚಿವ ಕೆ. ಸುಧಾಕರ್‌    

ಬೆಂಗಳೂರು: ‘ಕೇಂದ್ರ ಸರ್ಕಾರವು ರಾಜ್ಯಕ್ಕೆ 13.90 ಲಕ್ಷ ಕೋವಿಡ್ ಲಸಿಕೆಗಳನ್ನು ಶನಿವಾರ (ಜ.9) ತಲುಪಿಸಲಿದ್ದು, ಆರೋಗ್ಯ ಕಾರ್ಯಕರ್ತರಿಗೆ ಸೋಮವಾರದಿಂದಲೇ (ಜ.11) ಲಸಿಕೆ ವಿತರಣೆ ಪ್ರಾರಂಭವಾಗುವ ಸಾಧ್ಯತೆಯಿದೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ನಗರದ ಆಸ್ಟರ್ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ, ಕೋವಿಡ್ ಲಸಿಕೆ ವಿರಣೆಯ ತಾಲೀಮನ್ನು (ಡ್ರೈ ರನ್) ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್ ಲಸಿಕೆ ವಿತರಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಲ್ಲಿಗೆ ಲಸಿಕೆ ಬಂದ ಬಳಿಕ ಅದನ್ನು ಎಲ್ಲ ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವ 6.30 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಇನ್ನೂ ನೋಂದಣಿ ಮಾಡಿಕೊಳ್ಳಲು ಅವಕಾಶವಿದ್ದು, ಲಸಿಕೆಯ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿಕೊಂಡರು.

‘ರೋಗದ ವಿರುದ್ಧ ರಕ್ಷಿಸಿಕೊಳ್ಳಲು ಹಾಗೂ ಸೋಂಕು ಇನ್ನೊಬ್ಬರಿಗೆ ಹರಡುವುದನ್ನು ತಡೆಯಲು ಲಸಿಕೆ ಸಹಕಾರಿಯಾಗಲಿದೆ. ಆರೋಗ್ಯ ಕಾರ್ಯಕರ್ತರಿಗೆ ವಿತರಿಸಿದ ಬಳಿಕ 50 ವರ್ಷ ಮೇಲ್ಪಟ್ಟವರು ಹಾಗೂ ಅಪಾಯದಲ್ಲಿರುವವರಿಗೆ ಲಸಿಕೆ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಈಗಾಗಲೇ 24 ಲಕ್ಷ ಸಿರಿಂಜುಗಳನ್ನು ಕಳುಹಿಸಿಕೊಟ್ಟಿದೆ. ಇನ್ನುಳಿದ 31 ಲಕ್ಷ ಸಿರಿಂಜುಗಳು ಸೇರಿದಂತೆ ಹೆಚ್ಚುವರಿ ಉಪಕರಣಗಳು ಶೀಘ್ರದಲ್ಲಿಯೇ ಬರಲಿವೆ. ಕೋವಿಡ್ ಲಸಿಕೆಗೆ ಸಂಬಂಧಿಸಿದ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು’ ಎಂದರು.

ADVERTISEMENT

ಆರೋಗ್ಯ ಇಲಾಖೆಯ ಲಸಿಕೆ ವಿಭಾಗದ ಉಪ ನಿರ್ದೇಶಕಿ ಡಾ. ರಜನಿ ನಾಗೇಶ್ ರಾವ್, ‘ಕೇಂದ್ರ ಸರ್ಕಾರವು ಲಸಿಕೆಯನ್ನು ವಾಯುಯಾನದ ಮೂಲಕ ರಾಜ್ಯಕ್ಕೆ ಕಳುಹಿಸಿಕೊಡಲಿದೆ. ಪ್ರಾರಂಭದಲ್ಲಿ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಸಂಗ್ರಹಿಸಿ, ವಿತರಿಸಲಾಗುತ್ತದೆ. ಲಸಿಕೆಯ ಪೂರೈಕೆದಾರರು ಕೇಂದ್ರ ಸರ್ಕಾರದ ಸೂಚನೆಗೆ ಕಾಯುತ್ತಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.