ADVERTISEMENT

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ105ಕ್ಕೆ ಏರಿಕೆ: ಮೈಸೂರಿನಲ್ಲಿ 3 ಮಂದಿಗೆ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 8:56 IST
Last Updated 1 ಏಪ್ರಿಲ್ 2020, 8:56 IST
ಕೊರೊನಾ ಸೋಂಕಿನಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ– ಸಾಂದರ್ಭಿಕ ಚಿತ್ರ
ಕೊರೊನಾ ಸೋಂಕಿನಿಂದ ಉಸಿರಾಟದ ತೊಂದರೆ ಉಂಟಾಗುತ್ತದೆ– ಸಾಂದರ್ಭಿಕ ಚಿತ್ರ   

ಬೆಂಗಳೂರು: ಕರ್ನಾಟಕದಲ್ಲಿ ಬುಧವಾರ 4 ಪ್ರಕರಣಗಳಲ್ಲಿ ಕೋವಿಡ್‌–19 ದೃಢಪಟ್ಟಿದ್ದು, ಬುಧವಾರ ಮಧ್ಯಾಹ್ನದ ವರೆಗೂ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 105 ಮುಟ್ಟಿದೆ.ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 13 ಪ್ರಕರಣಗಳು ವರದಿಯಾಗಿತ್ತು.

ಬೆಂಗಳೂರಿನಲ್ಲಿ ಮಾ.9ರಂದು ಕಾಣಿಸಿಕೊಂಡಿದ್ದ ಕೊರೊನಾ ಸೋಂಕು, ಒಂದೇ ತಿಂಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳನ್ನು ವ್ಯಾಪಿಸಿಕೊಂಡಿದೆ. ಈಗಾಗಲೇ ಸೋಂಕಿಗೆ ಮೂವರು ಮೃತಪಟ್ಟಿದ್ದು, 9 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ, ಬೆಂಗಳೂರಿನ 24 ವರ್ಷ ವಯಸ್ಸಿನ ವ್ಯಕ್ತಿಗೆ ಕೋವಿಡ್‌–19 ದೃಢಪಟ್ಟಿದೆ. ಅವರನ್ನು ಬೆಂಗಳೂರಿನಲ್ಲೇ ಆಸ್ಪತ್ರೆಯೊಂದರಲ್ಲಿ ಪ್ರತ್ಯೇಕಗೊಳಿಸಲಾಗಿದೆ. ಮೈಸೂರಿನಲ್ಲಿ ಔಷಧಿ ತಯಾರಿಕಾ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಂಜನಗೂಡಿನ ಇಬ್ಬರು ವ್ಯಕ್ತಿಗಳಲ್ಲಿ ಸೋಂಕು ದೃಢಪಟ್ಟಿದೆ. ಇಬ್ಬರನ್ನೂ ಮೈಸೂರಿನ ಆಸ್ಪತ್ರೆಯಲ್ಲಿ ಪ್ರತ್ಯೇಕಗೊಳಿಸಲಾಗಿದೆ. ಬೆಂಗಳೂರು ನಿವಾಸಿಯಾಗಿರುವ 33 ವರ್ಷದ ಮತ್ತೊಬ್ಬರಿಗೆ ಸೋಂಕು ದೃಢಪಟ್ಟಿರುವುದರಿಂದ ಮೈಸೂರಿನ ಆಸ್ಪತ್ರೆಯಲ್ಲೇ ಪ್ರತ್ಯೇಕಗೊಳಿಸಲಾಗಿದೆ.

ADVERTISEMENT

ಮೈಸೂರಿನ ಔಷಧಿ ತಯಾರಿಕಾ ಕಂಪನಿಯ ಸಿಬ್ಬಂದಿಗಳ ಪೈಕಿ ಈವರೆಗೂ 14 ಜನರಲ್ಲಿ ಸೋಂಕು ದೃಢಪಟ್ಟಿದೆ.

43ಕ್ಕೂ ಹೆಚ್ಚು ಜನರನ್ನು ಸೋಂಕು ಶಂಕೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 37,261 ಮಂದಿ 14 ದಿನಗಳ ನಿಗಾವನ್ನು ಮುಕ್ತಾಯಗೊಳಿಸಿದ್ದಾರೆ.

ಕೋವಿಡ್‌–19ಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ಅನುಮಾನಗಳಿಗೆ ಆರೋಗ್ಯ ಸಹಾಯವಾಣಿ 104 ಅಥವಾ 97456 97456ಕ್ಕೆ ಸಂಪರ್ಕಿಸುವಂತೆ ಇಲಾಖೆ ಮನವಿ ಮಾಡಿದೆ.

ಕರ್ನಾಟಕ–105
ಬೆಂಗಳೂರು 46
ಮೈಸೂರು 17
ಚಿಕ್ಕಬಳ್ಳಾಪುರ 09
ದಕ್ಷಿಣ ಕನ್ನಡ 08
ಕಲಬುರ್ಗಿ 04
ದಾವಣಗೆರೆ 03
ಉಡುಪಿ 03
ಬಳ್ಳಾರಿ 03
ತುಮಕೂರು 02
ಕೊಡಗು 01
ಧಾರವಾಡ 01

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.